6 ತಿಂಗಳಲ್ಲಿ ಬೆಂಗಳೂರಿನ ಎಲ್ಲ ರಸ್ತೆಗಳ ಸಂಪೂರ್ಣ ಅಭಿವೃದ್ಧಿ : ಜಾರ್ಜ್

ಈ ಸುದ್ದಿಯನ್ನು ಶೇರ್ ಮಾಡಿ

Jeorge-BBMP

ಬೆಂಗಳೂರು, ಜ.17-ಆರು ತಿಂಗಳೊಳಗೆ ನಗರದ ಎಲ್ಲಾ ರಸ್ತೆಗಳು ಪೂರ್ಣವಾಗಿ ಅಭಿವೃದ್ಧಿಗೊಳ್ಳಲಿವೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು. ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ಚರ್ಚ್‍ಸ್ಟ್ರೀಟ್‍ನ 715 ಮೀಟರ್ ರಸ್ತೆಯನ್ನು ಟೆಂಡರ್ ಶ್ಯೂರ್ ಯೋಜನೆಯಡಿ ಸಮಗ್ರವಾಗಿ ಅಭಿವೃದ್ಧಿ ಪಡಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಹಿಂದೆ ತಾವು, ಮೇಯರ್, ಶಾಸಕ ಎನ್.ಎ.ಹ್ಯಾರಿಸ್ ಇಲ್ಲಿಗೆ ಭೇಟಿ ನೀಡಿ ಈ ರಸ್ತೆ ಪರಿಶೀಲನೆ ನಡೆಸಿದ್ದೆವು. ಟೆಂಡರ್ ಶ್ಯೂರ್ ಯೋಜನೆಯಡಿ ರಸ್ತೆಯನ್ನು 9 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ಯೋಜನೆಗೆ ಚಾಲನೆ ನೀಡಲಾಗಿದೆ. ಆದರೆ ನಗರ ಯೋಜನಾ ತಜ್ಞ ಡಾ.ನರೇಶ್ ಅವರು ಈ ರಸ್ತೆಯನ್ನು ವೈಟ್ ಟಾಪಿಂಗ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವಂತೆ ಸಲಹೆ ನೀಡಿದ್ದಾರೆ. ಅವರ ಸಲಹೆಯನ್ನು ಒಪ್ಪಿ ವೈಟ್ ಟಾಪಿಂಗ್ ರಸ್ತೆಯನ್ನಾಗಿ ಮಾಡಲು ನಿರ್ಧರಿಸಲಾಗಿದೆ. ಇದಕ್ಕೆ ಅಂದಾಜು ವೆಚ್ಚಕ್ಕಿಂತ 1 ಕೋಟಿ ರೂ.ಹೆಚ್ಚು ಹಣ ಬೇಕಾಗುತ್ತದೆ ಎಂದು ತಿಳಿಸಿದರು.

ಆರು ತಿಂಗಳ ಕಾಲಾವಧಿಯಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದೆ. ಈ ರಸ್ತೆ ಮಾತ್ರವಲ್ಲ ನಗರದ ಹಲವು ಕಡೆಗಳಲ್ಲಿ ರಸ್ತೆ ಅಭಿವೃದ್ಧಿಪಡಿಸುವ ಕೆಲಸಗಳು ನಡೆಯುತ್ತಿವೆ. ವಾರ್ಡ್ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಯೋಜನೆಗಳಿಗೂ ಚಾಲನೆ ನೀಡಲಾಗಿದೆ. ಬೆಂಗಳೂರು ನಗರಕ್ಕೆ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅತಿ ಹೆಚ್ಚು ಅನುದಾನ ನೀಡಿದ್ದಾರೆ ಎಂದು ಹೇಳಿದರು.

ರಸ್ತೆಯ ವೈಶಿಷ್ಟ್ಯತೆಗಳು:

ಒಟ್ಟು 715 ಮೀಟರ್ ರಸ್ತೆ, 5.50 ಮೀಟರ್ ಸಂಚಾರ ಪಥದ ಅಗಲ, 2.50ಯಿಂದ 4 ಮೀಟರ್ ಪಾದಚಾರಿ ಮಾರ್ಗ ಇರಲಿದೆ. ಈ ರಸ್ತೆಯಲ್ಲಿ 10 ಪಾರ್ಕಿಂಗ್ ಬೇ, 103 ದ್ವಿಚಕ್ರ ಪಾರ್ಕಿಂಗ್, 32 ನಾಲ್ಕು ಚಕ್ರ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಮಾತ್ರವಲ್ಲ ಒಟ್ಟು 40 ಎಲ್‍ಇಡಿ ಬೀದಿ ದೀಪಗಳನ್ನು ಅಳವಡಿಸಲಾಗುತ್ತದೆ. ಸಾರ್ವಜನಿಕರು ಸರಾಗವಾಗಿ ನಡೆದಾಡಲು ಒಂದೆ ತರಹದ ಪಾದಚಾರಿ ಮಾರ್ಗ, ರಸ್ತೆಯ ವಿವಿಧ ಪಥ ಅಗಲಗಳನ್ನು ಏಕರೂಪ ಪಥವನ್ನಾಗಿ ಅಭಿವೃದ್ಧಿಪಡಿಸಲಾಗುತ್ತದೆ. ಎಲ್ಲಾ ವಿಧದ ಅವಶ್ಯಕತೆಗಳಾದ ವಿದ್ಯುತ್, ಓಎಫ್‍ಸಿ ಕೇಬಲ್, ನೀರು ಸರಬರಾಜು, ಒಳಚರಂಡಿ, ಮಳೆನೀರು ಚರಂಡಿಗಳಿಗೆ ಪಾದಚಾರಿ ಮಾರ್ಗದಲ್ಲಿ ಬೇರೆ ಬೇರೆಯಾಗಿ ವಿವಿಧ ಡಕ್ಟ್‍ಗಳ ಅಳವಡಿಕೆ ಮಾಡಲಾಗುತ್ತದೆ.

ವಿವಿಧ ಕೂಡು ರಸ್ತೆಗಳನ್ನು ಅಭಿವೃದ್ಧಿಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ. ಅವಶ್ಯಕತೆಗೆ ಅನುಗುಣವಾಗಿ ರಸ್ತೆಯಲ್ಲಿ ವಾಹನ ನಿಲುಗಡೆಗೆ ಸ್ಥಳಾವಕಾಶ ಒದಗಿಸಲಾಗುತ್ತದೆ. ರಸ್ತೆ ಪರಿಕರಗಳಾದ ಸೂಚನಾ ಫಲಕ, ಮಾಹಿತಿ ಫಲಕ, ಲೇನ್ ಮಾಕಿಂಗ್‍ಗಳನ್ನು ಅಳವಡಿಸಲಾಗುತ್ತದೆ ಎಂದು ವಿವರಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin