‘ನಾನು ಕುರುಬ ಇರಬಹುದು, ಆದರೆ ಕುರಿ ಅಲ್ಲ’ : ಯಡಿಯೂರಪ್ಪ ವಿರುದ್ಧ ಮತ್ತೆ ಗುಡುಗಿದ ಈಶ್ವರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

Eshwarappa-BJP

ತುಮಕೂರು, ಜ.18- ದೇವ್ರಾಣೆ ಮಾಡಿ ಹೇಳ್ತೀನಿ… ಯಡಿಯೂರಪ್ಪ ಇನ್ನೂ ಸರಿ ಹೋಗಿಲ್ಲ. ಕೇವಲ ನಾಲ್ಕು ಜನರ ಜತೆ ಮಾತ್ರ ಸಭೆ ಸೇರಿ ತೀರ್ಮಾನ ತೆಗೆದುಕೊಳ್ಳುವ ಪ್ರವೃತ್ತಿ ಬಿಟ್ಟಿಲ್ಲ. ನಾನು ಕುರುಬ ಇರಬಹುದು, ಆದರೆ ಕುರಿ ಅಲ್ಲ. ಹೀಗೆಂದು ಗುಡುಗಿದವರು ಕೆ.ಎಸ್.ಈಶ್ವರಪ್ಪ.   ತಾಲೂಕಿನ ಊರುಕೇರಿಯಲ್ಲಿರುವ ಸೊಗಡು ಶಿವಣ್ಣ ಅವರ ನಿವಾಸದಲ್ಲಿ ಹಮ್ಮಿಕೊಂಡಿದ್ದ ಭಾರತ್ ಮಾತಾ ಪೂಜಾ ಸಮಾರಂಭದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರು ತಮ್ಮ ಪ್ರವೃತ್ತಿ ಬದಲಿಸಿಕೊಂಡಿಲ್ಲ. ತಮ್ಮ ಸುತ್ತಲಿರುವ ನಾಲ್ಕು ಜನರ ತೀರ್ಮಾನವನ್ನು ಮಾತ್ರ ಅಂತಿಮ ಎಂದು ತಿಳಿದುಕೊಳ್ಳುತ್ತಾರೆ. ಅವರು ಬಿಜೆಪಿ ಪಕ್ಷ ಬಿಟ್ಟು ಕೆಜೆಪಿ ಕಟ್ಟಿದರು. ಅಲ್ಲಿ ಏನೂ ನಡೆಯಲಿಲ್ಲ. ಕಡೆಗೆ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಬಿಜೆಪಿಗೆ ವಾಪಸ್ ಬಂದರು. ಯಾರೂ ವಿರೋಧ ಮಾಡಲಿಲ್ಲ. ರಾಜ್ಯಾಧ್ಯಕ್ಷರಾಗಿ ನೇಮಕವಾದ ನಂತರ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳುವ ಅವರು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಚರ್ಚೆಯನ್ನೇ ಮಾಡುವುದಿಲ್ಲ ಎಂದು ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

ರಾಜ್ಯದಲ್ಲಿ ಬಿಎಸ್‍ವೈ, ಈಶ್ವರಪ್ಪ ಅವರನ್ನು ನೋಡಿ ಮತ ಹಾಕುವುದಿಲ್ಲ. ಪಕ್ಷ ನೋಡಿ ರಾಜ್ಯದ ಜನ ಮತ ಹಾಕುತ್ತಾರೆ. ಇದನ್ನು ಮೊದಲು ಅರ್ಥಮಾಡಿಕೊಳ್ಳಬೇಕು. ನಾಲ್ಕು ಜನರ ಮಾತುಗಳನ್ನು ಕೇಳುವುದನ್ನು ಬಿಟ್ಟರೆ ಮಾತ್ರ ಅವರು ನಾಯಕರಾಗಲು ಸಾಧ್ಯ. ಇಲ್ಲದಿದ್ದರೆ ಇಡೀ ರಾಜ್ಯದಲ್ಲಿ ಬಿಜೆಪಿ ನಿರ್ನಾಮವಾಗಿಬಿಡುತ್ತದೆ. ಇದಕ್ಕೆ ಅವರೇ ಕಾರಣರಾಗುತ್ತಾರೆ ಎಂದು ಈಶ್ವರಪ್ಪ ಹರಿಹಾಯ್ದರು.  ಕೂಡಲೇ ಹೈಕಮಾಂಡ್ ಎಚ್ಚೆತ್ತುಕೊಳ್ಳಬೇಕು. ಕೆಜೆಪಿಯಲ್ಲಿ ನಾಲ್ಕು ಸೀಟು ಗೆದ್ದೆ ಎಂದು ಬೀಗಿದರು. ಆದರೆ, ಅಲ್ಲಿ ಅವರ ಆಟ ನಡೆಯಲಿಲ್ಲ. ಕಡೆಗೆ ಬಿಜೆಪಿಯೇ ಗತಿ ಎಂದು ಇಲ್ಲಿಗೆ ಬಂದರು. ರಾಷ್ಟ್ರೀಯ ಮುಖಂಡರು ಆಧರಿಸಿ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟಿದ್ದಾರೆ. ಅದನ್ನು ಸರಿಯಾಗಿ ನಿಭಾಯಿಸಲಿ. ಮೊದಲು ನಾಲ್ಕು ಜನರ ಹೇಳಿಕೆ ಮಾತು ಕೇಳುವುದನ್ನು ಯಡಿಯೂರಪ್ಪ ಬಿಡಬೇಕು. ನಾನೇ ಮೇಲು, ನನ್ನಿಂದಲೇ ಎಲ್ಲ ಎಂಬ ಧೋರಣೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಾಂಗ್ರೆಸ್‍ನವರನ್ನು ಪಕ್ಷಕ್ಕೆ ಕರೆತಂದು ಅವರಿಗೆ ಜಿಲ್ಲಾಧ್ಯಕ್ಷ ಸ್ಥಾನವನ್ನು ನೀಡಿದ್ದಾರೆ. ಈ ಮೂಲಕ ಬಿಜೆಪಿಯನ್ನು ನಿರ್ನಾಮ ಮಾಡಲು ಹೊರಟಿದ್ದಾರೆ ಎಂದು ಮಾಜಿ ಶಾಸಕ ಸೊಗಡು ಶಿವಣ್ಣ ಗಂಭೀರ ಆರೋಪ ಮಾಡಿದ್ದಾರೆ. ಕಾಂಗ್ರೆಸ್‍ನಿಂದ ಮಾಜಿ ಸಂಸದ ಜಿ.ಎಸ್.ಬಸವರಾಜು ಅವರನ್ನು ಕರೆತರಲಾಗಿದೆ. ಅವರ ಪುತ್ರ ಜಿ.ಬಿ.ಜ್ಯೋತಿಗಣೇಶ್ ಅವರಿಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಲಾಗಿದೆ. ಬೇರೆ ಪಕ್ಷಗಳಿಂದ ಕರೆತಂದವರಿಗೆ ಮಣೆ ಹಾಕುವ ಬದಲು ನಮ್ಮಲ್ಲೇ ಪ್ರಾಮಾಣಿಕ ಮುಖಂಡರು ಇದ್ದರಲ್ಲ. ಅವರನ್ನೆಲ್ಲಾ ಕಡೆಗಣಿಸಿರುವುದೇಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆರಂಭದಿಂದಲೂ ಪಕ್ಷದಲ್ಲಿನ ಸಮಸ್ಯೆ ಸರಿಪಡಿಸುವಂತೆ ಒತ್ತಾಯಿಸುತ್ತಾ ಬಂದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಬೆಂಗಳೂರಿನಲ್ಲಿ ನಿಷ್ಠಾವಂತ ಕಾರ್ಯಕರ್ತ ವೆಂಕಟೇಶ್ ಅವರನ್ನು ಉಚ್ಚಾಟಿಸಲಾಗಿದೆ. ಇದು ಸರಿಯಾದ ಕ್ರಮವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ , ಶಾಸಕರಾದ ಶ್ರೀಕಾಂತ್ ಕುಲಕರ್ಣಿ, ನಾರಾಯಣ್ ಶಾ ಬಾಂಡೆಗೆ, ಸೋಮಣ್ಣ ಬೇವಿನಮರದ್, ನೇಮಿರಾಜನಾಯಕ್, ರವೀಂದ್ರನಾಥ್, ಶಿವಯೋಗಿ, ನಿರ್ಮಲ್‍ಕುಮಾರ್ ಸುರಾನಾ, ಮುಖಂಡ ಗಿರೀಶ್ ಸೇರಿದಂತೆ ವಿಧಾನಪರಿಷತ್ ಸದಸ್ಯರು ಹಾಗೂ ವಿವಿಧ ಜಿಲ್ಲಾಧ್ಯಕ್ಷರು ಪಾಲ್ಗೊಂಡಿದ್ದು, ಸೊಗಡು ಶಿವಣ್ಣ ಅವರನ್ನೆಲ್ಲಾ ಆತ್ಮೀಯವಾಗಿ ಬರಮಾಡಿಕೊಂಡರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin