ಬೀದಿನಾಯಿ ದಾಳಿಗೆ ಸಾರಂಗ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

Stag
ಮಳವಳ್ಳಿ,ಜ.18- ಗ್ರಾಮಕ್ಕೆ ಬಂದಿದ್ದ ಅಪರೂಪದ ಅರಣ್ಯ ಅತಿಥಿ ಸಾರಂಗವೊಂದು ಬೀದಿನಾಯಿಗಳ ದಾಳಿಗೆ ಬಲಿಯಾಗಿರುವ ದುರ್ಘಟನೆಯೊಂದು ಪಟ್ಟಣಕ್ಕೆ ಸಮೀಪದ ಅಂಚೇದೊಡ್ಡಿ ಗ್ರಾಮದಲ್ಲಿ ಜರುಗಿದೆ. ಆಹಾರ ಅರಸುತ್ತಲೋ, ಗುಂಪಿನಿಂದ ಒಂಟಿಯಾಗಿ ದಾರಿ ಗೊತ್ತಾಗದೆಯೋ, ಅಥವಾ ಜನಜೀವನ ಹೇಗಿದೆ ಎಂದು ತಿಳಿಯುವ ಕುತೂಹಲದಿಂದಲೋ ಏನೋ ಅಂಚೇದೊಡ್ಡಿ ಗ್ರಾಮದ ಆವರಣಕ್ಕೆ ಸುಂದರ ಸಾರಂಗ ಆಗಮಿಸಿದೆ. ವಿಪರ್ಯಾಸವೆಂದರೆ ಜನರ ಕಣ್ಣಿಗೆ ಬಿದ್ದು ಅತಿಥಿ ಸತ್ಕಾರ ಪಡೆಯುವ ಮೊದಲೇ ದೈತ್ಯಾಕಾರದ ಗ್ರಾಮದ ನಾಯಿಗಳ ಕಣ್ಣಿಗೆ ಈ ಸಾರಂಗ ಬಿದ್ದುಬಿಟ್ಟಿದೆ. ಸಾರಂಗವನ್ನು ಕಂಡ ನಾಯಿಗಳ ಆರ್ಭಟ ಕೇಳಬೇಕೆ. ನಾಯಿಗಳ ಹಿಂಡು ಸಾರಂಗವನ್ನು ಅಟ್ಟಾಡಿಸಿ ಕೊಂಡು ಹಿಡಿಯುವ ಯತ್ನ ನಡೆಸಿವೆ.

ನಾಯಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಸಾರಂಗ ಸಹ ಹರಸಾಹಸ ಮಾಡಿದೆ. ಆದರೂ ಬೆನ್ನುಹತ್ತಿದ ನಾಯಿಗಳು ಸಾರಂಗದ ಕಾಲು ದೇಹದ ಸಾಕಷ್ಟು ಭಾಗದಲ್ಲಿ ಕಚ್ಚಿ ಗಾಯಗೊಳಿಸಿವೆ.ನಾಯಿಗಳ ಈ ಅರ್ಭಟ ಕೇಳಿ ದಿಗಿಲುಗೊಂಡ ಗ್ರಾಮದ ಗ್ರಾ ಪಂ ಸದಸ್ಯ ನಾಗೇಶ್ ಹಾಗೂ ಇತರರು ಬಂದು ನೋಡುವಷ್ಟರಲ್ಲಿ ನಾಯಿಗಳ ದಾಳಿಗೆ ಸಿಕ್ಕು ಸಾರಂಗ ಸಾಕಷ್ಟು ನಿತ್ರಾಣಗೊಂಡಿದೆ. ಕೂಡಲೇ ನಾಯಿಗಳನ್ನು ದೂರ ಓಡಿಸಿದ ಗ್ರಾಮಸ್ಥರು ನಾಯಿಗಳು ಕಚ್ಚಿದ್ದ ಸಾರಂಗಕ್ಕೆ ಶುಶ್ರೂಷೆ ಮಾಡಿದ್ದರ ಜೊತೆಗೆ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದರ ಮೇರೆಗೆ ಸ್ಥಳಕ್ಕೆ ಧಾವಿಸಿದ ಅರಣ್ಯ ಸಿಬ್ಬಂದಿ ಅದನ್ನು ವಶಕ್ಕೆ ಪಡೆದು ಚಿಕಿತ್ಸೆ ಕೊಡಿಸುವ ಪ್ರಯತ್ನದಲ್ಲಿರುವಾಗಲೇ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಸಾರಂಗ ಸಾವನ್ನಪ್ಪಿತು ಎಂದು ವರದಿಯಾಗಿದೆ. ಮೃತ ಸಾರಂಗವನ್ನು ಇಲ್ಲಿನ ಅರಣ್ಯ ಇಲಾಖೆಯ ಕಛೇರಿ ಆವರಣದಲ್ಲಿ ಶವಸಂಸ್ಕಾರ ಮಾಡಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin