ಯಡಿ-ಈಶು ನಡುವಿನ ಮುನಿಸು ಅಂತ್ಯಹಾಡಲು ಕಾರ್ಯಕಾರಣಿ ಸಭೆ ನಡೆಸಿದ ಸಂಧಾನ ವಿಫಲ

ಈ ಸುದ್ದಿಯನ್ನು ಶೇರ್ ಮಾಡಿ

yadi-ishu
ಬೆಂಗಳೂರು, ಜ.22- ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ಅವರ ನಡುವಿನ ಶೀತಲ ಸಮರಕ್ಕೆ ಅಂತ್ಯಹಾಡಲು ಕಾರ್ಯಕಾರಣಿ ಸಭೆ ನಡೆಸಿದ ಸಂಧಾನ ವಿಫಲಗೊಂಡಿದೆ.  ಶತಾಯಗತಾಯ ಉಭಯ ನಾಯಕರ ನಡುವೆ ಡ್ಯಾಮೆಜ್ ಕಂಟ್ರೋಲ್ ಮಾಡಲು ಪಕ್ಷದ ವರಿಷ್ಠರು ಸತತ ಎರಡು ದಿನಗಳ ಕಾಲ ನಡೆಸಿದ ಸಂಧಾನ ಯಾವುದೇ ಫಲಕೊಟ್ಟಿಲ್ಲ.  ಉಭಯ ನಾಯಕರು ತಮ್ಮ ತಮ್ಮ ಪ್ರತಿಷ್ಠೆಗೆ ಅಂಟಿಕೊಂಡ ಕಾರಣ ರಾಜ್ಯ ಉಸ್ತುವಾರಿ ಟಿ.ಮುರುಳೀಧರರಾವ್ ನಡೆಸಿದ ಸಂಧಾನ ವಿಫಲಗೊಂಡಿದೆ. ಕಾರ್ಯಕಾರಿಣಿಯಲ್ಲಿ ಬಿಕ್ಕಟ್ಟು ಶಮನಕ್ಕೆ ಅಂತ್ಯಹಾಡಲೇಬೇಕೆಂದು ತೀರ್ಮಾನಿಸಲಾಗಿತ್ತು. ಆದರೆ, ಈಶ್ವರಪ್ಪ ಮತ್ತು ಯಡಿಯೂರಪ್ಪ ತಮ್ಮ ಪ್ರತಿಷ್ಠೆಯಿಂದ ಹಿಂದೆ ಸರಿಯದ ಕಾರಣ ಕಾರ್ಯಕಾರಣಿಯಲ್ಲಿ ಯಾವುದೇ ಪ್ರಮುಖ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಿಲ್ಲ.  ಕೇವಲ ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಟ ಹಾಗೂ ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಲು ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.
ನಿನ್ನೆಯಿಂದ ಕೊನೆಕ್ಷಣದವರೆಗೂ ಮುರಳೀಧರರಾವ್ ಉಭಯ ನಾಯಕರ ನಡುವೆ ಹಲವು ಬಾರಿ ಪರಸ್ಪರ ಹಸ್ತಲಾಘವ ನಡೆಸಲು ಇನ್ನಿಲ್ಲದ ಕಸರತ್ತು ನಡೆಸಿದರು. ಆದರೆ, ಯಡಿಯೂರಪ್ಪ ಮತ್ತು ಈಶ್ವರಪ್ಪ ಇಟ್ಟ ಹೆಜ್ಜೆಯನ್ನು ಹಿಂದಿಡಲಾರೆ ಎಂಬ ಹಠಮಾರಿ ಧೋರಣೆ ತಾಳಿದ್ದರಿಂದ ಸಂಧಾನ ಸಭೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಲಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.
ಪಕ್ಷದ ಚಿನ್ಹೆಯಡಿ ಸಂಗೊಳ್ಳಿರಾಯಣ್ಣ ಬ್ರಿಗೇಡ್ ನಡೆಸಬೇಕೆಂದು ಯಡಿಯೂರಪ್ಪ ಪಟ್ಟು ಹಿಡಿದರೆ ರಾಯಣ್ಣ ಬ್ರಿಗೇಡ್‍ಗೂ ಬಿಜೆಪಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ಇದೊಂದು ರಾಜಕೀಯೇತರ ಸಂಘಟನೆಯಾಗಿದೆ ಎಂಬುದು ಈಶ್ವರಪ್ಪನವರ ವಾದವಾಗಿತ್ತು. ನಾನು ಈಗ ಸಂಘಟನೆಯಿಂದ ಹಿಂದೆ ಸರಿದರೆ ರಾಜ್ಯದ ಜನತೆ ನನ್ನ ಬಗ್ಗೆ ತಪ್ಪು ತಿಳಿದುಕೊಳ್ಳುತ್ತಾರೆ. ನಾನೊಬ್ಬ ಅವಕಾಶವಾದಿ ಎಂದು ಪ್ರತಿಪಕ್ಷಗಳೇ ಟೀಕೆ ಮಾಡುತ್ತವೆ. ಆದ್ದರಿಂದ ಸಂಘಟನೆಯಿಂದ ನಾನು ಹೇಗೆ ಹಿಂದೆಸರಿಯಲಿ ಎಂಬ ಪ್ರಶ್ನೆಯನ್ನು ಈಶ್ವರಪ್ಪ ಮುಂದಿಟ್ಟಿದ್ದಾರೆ.
ಯಡಿಯೂರಪ್ಪ ಅವರ ಮುಖ ನೋಡಿಕೊಂಡು ಮತ ಹಾಕುವುದಿಲ್ಲ ಎಂದು ನಾನು ಎಲ್ಲಿಯೂ ಹೇಳಿಲ್ಲ. ಇದನ್ನು ಹೇಳಿರುವುದು ಬಿಎಸ್‍ವೈ ಅವರ ಬೆಂಬಲಿಗರು. ವಿನಾಃ ಕಾರಣ ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ಮಾಡಲಾಗುತ್ತಿದೆ. ಪಕ್ಷ ನಿಷ್ಠೆಯ ಬಗ್ಗೆ ನನ್ನನ್ನು ಯಾರೊಬ್ಬರೂ ಪ್ರಶ್ನೆ ಮಾಡುವ ಅಗತ್ಯವಿಲ್ಲ. ನಾನು ಬಿಜೆಪಿ ಬಿಟ್ಟು ಬೇರೆ ಪಕ್ಷಕ್ಕೆ ಹೋಗುತ್ತೇನೆ ಎನ್ನುವುದು ವದಂತಿ. ಇದ್ದರೆ ಬಿಜೆಪಿಯಲ್ಲಿರುತ್ತೇನೆ. ಇಲ್ಲದಿದ್ದರೆ ಸಕ್ರಿಯ ರಾಜಕಾರಣಕ್ಕೆ ನಿವೃತ್ತಿ ತೆಗೆದುಕೊಳ್ಳುವುದಾಗಿ ಮುರಳೀಧರರಾವ್ ಮುಂದೆ ಈಶ್ವರಪ್ಪ ತಮ್ಮ ನೋವು ಹಂಚಿಕೊಂಡಿದ್ದಾರೆ ಎನ್ನಲಾಗಿದೆ.

 

ಪದಾಧಿಕಾರಿಗಳ ಪಟ್ಟಿ ಬದಲಾಗಬೇಕು:
ಇನ್ನು ಪಕ್ಷದಲ್ಲಿ ನಿಷ್ಠಾವಂತರನ್ನು ಕಡೆಗಣಿಸಿ ಯಡಿಯೂರಪ್ಪ ತಮಗೆ ಜೈಕಾರ ಹಾಕುವವರಿಗೆ ಪದಾಧಿಕಾರಿಗಳ ಪಟ್ಟಿಯಲ್ಲಿ ಮಣೆ ಹಾಕಿದ್ದಾರೆ. ಕಳೆದ ಬಾರಿ ನಮ್ಮ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧವೇ ಸ್ಪರ್ಧೆ ಮಾಡಿದ್ದ ರುದ್ರೇಶ್‍ಗೌಡ, ಜ್ಯೋತಿಗಣೇಶ್, ಪಕ್ಷವಿರೋಧಿ ಚಟುವಟಿಕೆ ನಡೆಸಿದ್ದ ಯಶವಂತರಾವ್ ಜಾಧವ್, ಪ್ರೊ .ಮಲ್ಲಿಕಾರ್ಜುನಪ್ಪ ಸೇರಿದಂತೆ ಹಲವರು ಜಿಲ್ಲಾಧ್ಯಕ್ಷರಾಗಿದ್ದಾರೆ.  ನಮ್ಮ ಪಕ್ಷದ ಅಭ್ಯರ್ಥಿಗಳ ವಿರುದ್ಧವೇ ಸಡ್ಡು ಹೊಡೆದವರ ಜತೆ ನಾವು ಪಕ್ಷ ಸಂಘಟನೆ ಹೇಗೆ ಮಾಡಬೇಕು ಎಂಬುದು ಈಶ್ವರಪ್ಪನವರ ಪ್ರಶ್ನೆಯಾಗಿತ್ತು. ನನ್ನ ಪ್ರತಿಭಟನೆ ಕೇವಲ ಸಾಂಕೇತಿಕ. ನನ್ನಂತೆ ಅನೇಕರು ಯಡಿಯೂರಪ್ಪನವರ ಕಾರ್ಯವೈಖರಿಯಿಂದ ಅಸಮಾಧಾನಗೊಂಡಿದ್ದಾರೆ. ನಾನು ಬಹಿರಂಗವಾಗಿ ಹೇಳಿರಬಹುದು. ಕೆಲವರು ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮೊದಲು ಪದಾಧಿಕಾರಿಗಳ ಪಟ್ಟಿ ಬದಲಾವಣೆಯಾಗಬೇಕು. ಇದು ನನ್ನೊಬ್ಬನ ಹಿತಾಸಕ್ತಿಗಾಗಿ ಹೇಳುತ್ತಿಲ್ಲ. ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಿದರೆ ಅಧಿಕಾರಕ್ಕೆ ಬರಲು ಸಾಧ್ಯವೇ ಎಂದು ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಮುರಳೀಧರರಾವ್ ಅವರ ಗಮನಕ್ಕೆ ಈಶ್ವರಪ್ಪ ತಂದಿದ್ದಾರೆ.

 

ಪಟ್ಟಿ ಬದಲಾಯಿಸಲು ಸಾಧ್ಯವಿಲ್ಲ:
ಇನ್ನು ಯಾವುದೇ ಕಾರಣಕ್ಕೂ ನಾವು ಪದಾಧಿಕಾರಿಗಳ ಪಟ್ಟಿಯನ್ನು ಬದಲಾಯಿಸಲು ಸಾಧ್ಯವಿಲ್ಲ. ವರಿಷ್ಠರ ಅನುಮತಿ ಪಡೆದು ತೀರ್ಮಾನ ಕೈಗೊಳ್ಳಲಾಗಿತ್ತು. ಇದ್ದಕ್ಕಿದ್ದಂತೆ ಪಟ್ಟಿ ಬದಲಾಯಿಸಬೇಕೆಂದರೆ ಕಾರ್ಯಕರ್ತರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಅಲ್ಲದೆ, ಈಶ್ವರಪ್ಪ ಪಕ್ಷದಲ್ಲಿ ಒಡಕು ಹುಟ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ಪಕ್ಷದಲ್ಲಿರುವವರೇ ಕುಮ್ಮಕ್ಕು ನೀಡುತ್ತಿದ್ದಾರೆ. ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ವರಿಷ್ಠರು ನನಗೆ ಸೂಚಿಸಿ ನನ್ನನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ. ಆದರೂ ಈಶ್ವರಪ್ಪ ಯಡಿಯೂರಪ್ಪ ಮುಖ ನೋಡಿಕೊಂಡು ಮತ ಹಾಕುವುದಿಲ್ಲ ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ.  ಇತ್ತೀಚೆಗೆ ನಡೆದ ಎಪಿಎಂಸಿ ಚುನಾವಣಾವಣೆಯಲ್ಲಿ ಇವರು ಪ್ರತಿನಿಧಿಸುವ ಶಿವಮೊಗ್ಗದಲ್ಲೇ ಬಿಜೆಪಿ ಅಭ್ಯರ್ಥಿಗಳು ಪರಾಭವಗೊಂಡಿದ್ದಾರೆ. ಪಕ್ಷದ ಮೋರ್ಚದಡಿ ಸಂಘಟನೆ ಮಾಡುವಂತೆ ನಾನು ಹೇಳಿದ್ದೇ ಮಹಾ ಅಪರಾಧವಾಗಿದೆ. ಇದಕ್ಕಾಗಿ ನನ್ನನ್ನು ದಲಿತ ಹಾಗೂ ಹಿಂದುಳಿದ ವರ್ಗದ ವಿರೋಧಿ ಎಂದು ಬಿಂಬಿಸುತ್ತಿದ್ದಾರೆ.  ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕೆಂದರೆ ಯಾವುದೇ ರೀತಿಯ ಒಡಕಿಗೆ ವರಿಷ್ಠರು ಅವಕಾಶ ಕೊಡಬಾರದು. ಒಂದು ಈಶ್ವರಪ್ಪನವರ ಆಟೋಪಟಗಳಿಗೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಅಧಿಕಾರವನ್ನು ನನಗೆ ನೀಡಿ ಎಂದು ಯಡಿಯೂರಪ್ಪ ಪಟ್ಟು ಹಿಡಿದರು.
ಹೀಗೆ ಉಭಯ ನಾಯಕರ ನಡುವೆ ಪ್ರತಿಷ್ಠೆಗಳೇ ಮೇಳೈಸಿದ್ದರಿಂದ ಕಾರ್ಯಕಾರಿಣಿಯಲ್ಲಿ ಇಬ್ಬರು ಹಿರಿಯ ನಾಯಕರ ನಡುವೆ ನಡೆಸಿದ ಸಂಧಾನ ನಿರೀಕ್ಷಿತ ಫಲ ಕೊಟ್ಟಿಲ್ಲ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin