ಜಗದಲಪುರ-ಭುವನೇಶ್ವರ ಹಿರಾಖಂಡ್ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿ 36ಕ್ಕೂ ಹೆಚ್ಚು ಮಂದಿ ಸಾವು :ವಿಧ್ವಂಸಕ ಕೃತ್ಯ ಶಂಕೆ

ಈ ಸುದ್ದಿಯನ್ನು ಶೇರ್ ಮಾಡಿ

Train-Accident

 ಹೈದರಾಬಾದ್/ಭುವನೇಶ್ವರ, ಜ.22-ಜಗದಲ್ಪುರ್-ಭುವನೇಶ್ವರ್ ಎಕ್ಸ್ ಪ್ರೆಸ್ ರೈಲಿನ 13 ಬೋಗಿಗಳು ಹಳಿ ತಪ್ಪಿ 36ಕ್ಕೂ ಹೆಚ್ಚು ಮಂದಿ ದುರಂತ ಸಾವಿಗೀಡಾಗಿ, 100ಕ್ಕೂ ಹೆಚ್ಚು ಜನ ಗಾಯಗೊಂಡಿರುವ ಘಟನೆ ನಿನ್ನೆ ರಾತ್ರಿ ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ಕೊನೆರು ರೈಲ್ವೆ ನಿಲ್ದಾಣದ ಬಳಿ ಸಂಭವಿಸಿದೆ. ಇದೊಂದು ವಿಧ್ವಂಸಕ ಕೃತ್ಯ ಎಂದು ಶಂಕಿಸಿರುವ ರೈಲ್ವೆ ಇಲಾಖೆ ಉನ್ನತಮಟ್ಟದ ತನಿಖೆಗೆ ಆದೇಶಿಸಿದೆ.   ಗಾಯಾಳುಗಳನ್ನು ಪಾರ್ವತಿಪುರಂ, ರಾಯಗಢ್ ಮತ್ತು ವಿಜಯನಗರಂ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. 54 ಜನರ ಸ್ಥಿತಿ ಶೋಚನೀಯವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.
ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ರೈಲ್ವೆ ಇಲಾಖೆ ತಲಾ ಎರಡು ಲಕ್ಷ ರೂ. ಪರಿಹಾರ ಘೋಷಿಸಿದೆ. ರೈಲ್ವೆ ಸಚಿವ ಸುರೇಶ್ ಪ್ರಭು ಘಟನಾ ಸ್ಥಳಕ್ಕೆ ಭೈೀಟಿ ನೀಡಿ ಪರಿಶೀಲಿಸಿ, ತನಿಖೆಗೆ ಆದೇಶ ನೀಡಿದ್ದಾರೆ.  ಈ ಎರಡೂ ಜಿಲ್ಲೆಗಳ ಅಧಿಕಾರಿಗಳು ಸಮರೋಪಾದಿಯಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆ ಕೈಗೊಂಡರು.  ಭುವನೇಶ್ವರದಿಂದ ಜಗದಲ್ಪುರಕ್ಕೆ ತೆರಳುತ್ತಿದ್ದ 22 ಕೋಚ್‍ಗಳಿದ್ದ ಎಕ್ಸ್ ಪ್ರೆಸ್ ರೈಲಿನ (ಟ್ರೈನ್ ಸಂಖ್ಯೆ 18448) ಎಂಜಿನ್ ಮತ್ತು 13 ಬೋಗಿಗಳು ವಿಜಯನಗರಂನ ಕೊನೆರು ನಿಲ್ದಾಣದ ಬಳಿ ರಾತ್ರಿ 11.30 ಸುಮಾರಿನಲ್ಲಿ ಹಳಿ ತಪ್ಪಿತು ಎಂದು ಪೂರ್ವ ಕರಾವಳಿ ರೈಲ್ವೆ ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಜೆ.ಪಿ.ಮಿಶ್ರಾ ತಿಳಿಸಿದ್ದಾರೆ.

 

ಈವರೆಗೆ 32 ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ತೀವ್ರ ಜಖಂಗೊಂಡ ರೈಲಿನ ಐದು ಬೋಗಿಗಳ ಒಳಗೆ ಸಿಲುಕಿರಬಹುದಾದ ಪ್ರಯಾಣಿಕರನ್ನು ರಕ್ಷಿಸುವ ಕಾರ್ಯಾಚರಣೆ ಮುಂದುವರೆದಿದೆ. ಗಾಯಾಳುಗಳ ಸಂಖ್ಯೆಯೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ರಾಯಗಢ ಸಬ್-ಕಲೆಕ್ಟರ್ ಮುರಳೀಧರ್ ಕೂಡ ಹೇಳಿದ್ದಾರೆ. ಈ ದುರ್ಘಟನೆಯಿಂದ ರಾಯಗಢ ಮತ್ತು ವಿಜಯನಗರಂ ಮಾರ್ಗದ ರೈಲು ಸಂಚಾರಕ್ಕೆ ಅಡಚಣೆಯಾಗಿದೆ. ಕನಿಷ್ಠ ಮೂರು ಟ್ರೈನ್‍ಗಳ ಸಂಚಾರ ರದ್ದಾಗಿದೆ ಹಾಗೂ ಇತರ ಎಂಟು ರೈಲುಗಳ ಮಾರ್ಗವನ್ನು ಬದಲಿಸಲಾಗಿದೆ.  ಸುರಕ್ಷಿತವಾಗಿರುವ ಪ್ರಯಾಣಿಕರು ತಮ್ಮ ಪ್ರಯಾಣವನ್ನು ಮುಂದುವರಿಸುವುದಕ್ಕಾಗಿ ಪಾರ್ವತಿಪುರಂ ಬಸ್ ನಿಲ್ದಾಣದಿಂದ ಪರ್ಯಾಯ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.

 

ವಿಧ್ವಂಸಕ ಕೃತ್ಯ ಶಂಕೆ : ರೈಲು ಹಳಿ ತಪ್ಪಲು ವಿಧ್ವಂಸಕ ಕೃತ್ಯ ನಡೆದಿರುವ ಸಾಧ್ಯತೆಯನ್ನು ರೈಲ್ವೆ ಇಲಾಖೆ ತಳ್ಳಿ ಹಾಕಿಲ್ಲ. ರೈಲು ಹಳಿಯನ್ನು ಜಖಂಗೊಳಿಸಿರುವುದು ಮೇಲ್ನೋಟಕ್ಕೆ ಸಾಬೀತಾಗಿದ್ದು, ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ. ರೈಲು ದುರಂತ ಸಂಭವಿಸಿದ ಸ್ಥಳವು ನಕ್ಸಲ್ ಹಾವಳಿ ಪೀಡಿತ ಪ್ರದೇಶವಾಗಿದೆ. ಅಲ್ಲದೇ ಗಣರಾಜೋತ್ಸವ ಸಮೀಪಿಸುತ್ತಿರುವುದರಿಂದ ಇದು ವಿಧ್ವಂಸಕ ಕೃತ್ಯ ಇರಬಹುದೆಂಬ ಬಲವಾದ ಶಂಕೆ ಇದೆ ಎಂದು ಮೂಲಗಳು ತಿಳಿಸಿವೆ.  ಈ ದುರಂತದ ಬಗ್ಗೆ ನಿಖರ ಕಾರಣ ತಿಳಿಯಲು ರೈಲ್ವೆ ಸುರಕ್ಷಿತ ಆಯುಕ್ತರು ತನಿಖೆ ನಡೆಸಲಿದ್ದಾರೆ.

ದುರ್ಘಟನೆ ಸಂಭವಿಸುವುದಕ್ಕೂ ಕೆಲವು ನಿಮಿಷಗಳಿಗೆ ಮುನ್ನ ಗೂಡ್ಸ್ ರೈಲು ಸುರಕ್ಷಿತವಾಗಿ ದಾಟಿ ಹೋಗಿದೆ. ಗಾರ್ಡ್‍ಗಳು ಕೂಡ ರೈಲು ಹಳಿಯನ್ನು ತಪಾಸಣೆ ಮಾಡಿದ್ದಾರೆ. ಆದರೆ ಈ ರೈಲು ಸಾಗುವುದಕ್ಕೆ ಮುನ್ನ ಸ್ವಲ್ಪ ದೂರದಲ್ಲಿ ಪಟಾಕಿಯಂಥ ಸ್ಫೋಟದ ಸದ್ದು ಕೇಳಿದ್ದಾಗಿ ರೈಲಿನ ಚಾಲಕ ಹೇಳಿದ್ದಾನೆ. ಇದರಿಂದಾಗಿ ರೈಲು ಹಳಿಗಳಿಗೆ ಹಾನಿಯುಂಟು ಮಾಡಿರುವುದು ಮೇಲ್ಮೋಟಕ್ಕೆ ಕಂಡುಬಂದಿದೆ ಎಂದು ರೈಲ್ವೆ ಮೂಲಗಳು ಹೇಳಿವೆ.  ಕಳೆದ ಡಿಸೆಂಬರ್‍ನಲ್ಲಿ ಕಾನ್ಪುರದಲ್ಲಿ ರೈಲು ಹಳಿ ತಪ್ಪಿ ಸಂಭವಿಸಿದ್ದ ದುರಂತದಲ್ಲಿ 150ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಈ ಸಂಬಂಧ ಬಂಧಿಸಲಾದ ಮೂವರು ದುಷ್ಕರ್ಮಿಗಳು ಪಾಕಿಸ್ತಾನದ ಐಎಸ್ ಆದೇಶದ ಮೇಲೆ ಕುಕ್ಕರ್‍ನಲ್ಲಿ ಸ್ಫೋಟಕಗಳನ್ನು ಇಟ್ಟು ಹಳಿಯನ್ನು ಸ್ಫೋಟಿಸಿದ್ದ ಆತಂಕಕಾರಿ ಮಾಹಿತಿ ನೀಡಿದ್ದರು.

ಪ್ರಧಾನಿ ದಿಗ್ಭ್ರಮೆ: ಜಗದಲ್ಪುರ್-ಭುವನೇಶ್ವರ್ ಎಕ್ಸ್‍ಪ್ರೆಸ್ ರೈಲು ಹಳಿ ತಪ್ಪಿ ಸಂಭವಿಸಿದ ಘೋರ ದುರಂತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿರುವ ಅವರು, ಗಾಯಾಳುಗಳು ಶೀಘ್ರ ಗುಣಮುಖರಾಗಲೆಂದು ಹಾರೈಸಿದ್ದಾರೆ.  ರೈಲ್ವೆ ಸಚಿವ ಸುರೇಶ್ ಪ್ರಭು ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆ ಬಗ್ಗೆ ಅವಲೋಕಿಸುತ್ತಿದ್ದಾರೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

ಸಹಾಯವಾಣಿ :

ವಿಜಯನಗರಂ: 83331, 83332, 83333, 83334, 08922-221202, 08922-221206

ವಿಶಾಖಪಟ್ಟಣಂ: 83003, 83005, 83006, 0891-2746344, 0891-2746330, 08500358610, 08500358712

ರಾಯಘಡ: 06856-223400, 06856-223500, 09439741181, 09439741071, 07681878777

ಖುರ್ದಾ: 0674 2490670.

ಭುವನೇಶ್ವರ ರೈಲು ನಿಲ್ದಾಣ: 06742543360.

ಬಹರ್ಪುರ ರೈಲು ನಿಲ್ದಾಣ: 06802229632.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin