ಅಕ್ರಮ ಸಂಪತ್ತು ಹೊಂದಿದವರು ಯಾರೇ ಆದರೂ ಮುಲಾಜಿಲ್ಲದೆ ಬಲಿ ಹಾಕಿ : ರಮೇಶ್‍ಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

Ramesh-Kumar

ಬೆಂಗಳೂರು, ಜ.24 – ಅಕ್ರಮ ಸಂಪತ್ತನ್ನು ಯಾರೇ ದಾಸ್ತಾನು ಮಾಡಿದರೂ ಮುಲಾಜಿಲ್ಲದೆ ಬಲಿ ಹಾಕಿಕೊಳ್ಳಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ರಮೇಶ್‍ಕುಮಾರ್ ಹೇಳಿದರು. ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ವೇಳೆ ಬೆಳಗಾವಿಯಲ್ಲಿ ಸಚಿವ ರಮೇಶ್ ಜಾರಕಿಹೊಳಿ ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿ 162 ಕೋಟಿ ರೂ. ಅಕ್ರಮ ಸಂಪತ್ತು ಪತ್ತೆ ಹಚ್ಚಿರುವ ಕುರಿತು ವರದಿಗಾರರು ಕೇಳಿದ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯಿಸಿದರು. ದೇಶದ ಸಂಪತ್ತನ್ನು ಯಾರೇ ಕೊಳ್ಳೆ ಹೊಡೆದು ಅಕ್ರಮವಾಗಿಟ್ಟಿದ್ದರೂ ಅದನ್ನು ಮುಲಾಜಿಲ್ಲದೆ ಬಲಿ ಹಾಕಬೇಕು. ಯಾರೇ ಕಳ್ಳ ಒಡವೆಗಳನ್ನು ದಾಸ್ತಾನು ಮಾಡಿದ್ದರೂ ಅದನ್ನು ವಶಪಡಿಸಿಕೊಳ್ಳಬೇಕು. ಇದರಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಎಂಬ ಭೇದವಿಲ್ಲ ಎಂದರು.

ಸಾರ್ವಜನಿಕ ಜೀವನದಲ್ಲಿ ಇಂತಹ ವಿಷಯಗಳನ್ನು ಮಾತನಾಡುತ್ತೇವೆ. ಕೇವಲ ಭಾಷಣದಿಂದ ಏನೂ ಪ್ರಯೋಜನವಿಲ್ಲ. ವಾಸ್ತವದಲ್ಲೂ ಪ್ರಾಮಾಣಿಕತೆ ಇರಬೇಕು. ಯಾರೇ ಅಕ್ರಮ ಎಸಗಿದ್ದರೂ ಅದು ಅಕ್ರಮವೇ. ಇದರಲ್ಲಿ ಪಕ್ಷಗಳ ಪ್ರಶ್ನೆ ಉದ್ಭವಿಸುವುದಿಲ್ಲ ಎಂದರು.  ಖಾಸಗಿ ಆಸ್ಪತ್ರೆಗಳು ಬಾಕಿ ಹಣ ಬಿಡುಗಡೆಗೆ ಒತ್ತಾಯಿಸಿ ಮುಷ್ಕರ ಹೂಡುವ ಬೆದರಿಕೆ ಹಾಕಿವೆಯಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಮೇಶ್‍ಕುಮಾರ್, ಯಾರು, ಎಲ್ಲಿ ಮುಷ್ಕರ ಮಾಡುತ್ತಾರೆ ಎಂದು ಮರುಪ್ರಶ್ನೆ ಹಾಕಿದರು.

ಲಿಖಿತ ಭರವಸೆ ನೀಡದೆ ಇದ್ದರೆ ಮುಷ್ಕರ ನಡೆಸುವುದರಿಂದ ಹಿಂದೆ ಸರಿಯುವುದಿಲ್ಲ ಎಂದು ಖಾಸಗಿ ಆಸ್ಪತ್ರೆಗಳು ಹೇಳಿವೆಯಲ್ಲ ಎಂದು ಕೇಳಿದುದಕ್ಕೆ ಪೆನ್ನು-ಪೇಪರ್ ಸಿಕ್ಕಿದರೆ ಬರೆದುಕೊಡೋಣ. ಮುಷ್ಕರ-ಗಿಷ್ಕರ ಯಾವುದೂ ಇಲ್ಲ. ಯಾರೋ ಕೆಲವರು ಸರ್ಕಾರವನ್ನು ಹಿಡಿತದಲ್ಲಿಟ್ಟುಕೊಳ್ಳಬೇಕೆಂಬ ದುರುದ್ದೇಶದಿಂದ ಇಂತಹ ಬೆದರಿಕೆ ಒಡ್ಡುತ್ತಿದ್ದಾರೆ. ಇದಕ್ಕೆಲ್ಲ ಬಗ್ಗುವುದಿಲ್ಲ ಎಂದು ಉತ್ತರಿಸಿದರು. 2009ರಿಂದ ಸರ್ಕಾರದ ನಾನಾ ಯೋಜನೆಗಳಲ್ಲಿ ಖಾಸಗಿ ಆಸ್ಪತ್ರೆಗಳು ಹಣ ಪಡೆದುಕೊಂಡು ಇಂತಹ ಬೆದರಿಕೆ ಒಡ್ಡುತ್ತಿವೆ. ಸರ್ಕಾರ ಇದಕ್ಕೆಲ್ಲ ಮಣಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin