ತುಮಕೂರಲ್ಲಿ ಸೆಕ್ಯೂರಿಟಿ ಗಾರ್ಡ್’ನನ್ನ ಕಟ್ಟಿಹಾಕಿ ಎಟಿಎಂ ದರೋಡೆ, ಮೂವರು ವಶಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

ATM-Rob Tumakuru

ತುಮಕೂರು, ಜ.24- ಎಟಿಎಂವೊಂದಕ್ಕೆ ನುಗ್ಗಿರುವ ಮೂವರು ಕಳ್ಳರು 20 ಲಕ್ಷ ರೂ. ದೋಚಿರುವ ಘಟನೆ ಗುಬ್ಬಿ ಗೇಟ್ ಬಳಿ ಇಂದು ನಡೆದಿದೆ. ಸೆಕ್ಯೂರಿಟಿ ಗಾರ್ಡ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಆತನನ್ನು ಕಟ್ಟಿ ಹಾಕಿ ಎಟಿಎಂನಿಂದ 20 ಲಕ್ಷ ರೂ. ದೋಚಿ ಮೂವರು ಕಳ್ಳರು ಪರಾರಿಯಾಗಿರುವ ಘಟನೆ ಇಂದು ಬೆಳಗಿನ ಜಾವ ನಡೆದಿದೆ.
ಕರ್ನಾಟಕ ಬ್ಯಾಂಕ್‍ಗೆ ಸೇರಿದ ಎಟಿಎಂಗೆ ನುಗ್ಗಿದ ಕಳ್ಳರು ಅಲ್ಲಿದ್ದ ಸೆಕ್ಯೂರಿಟಿ ಗಾರ್ಡ್ ಗಂಗಣ್ಣ ಮೇಲೆ ಹಲ್ಲೆ ನಡೆಸಿ ಆತನನ್ನು ಕಟ್ಟಿ ಹಾಕಿ ಸಿಸಿಟಿವಿ ವಯರ್‍ಗಳನ್ನು ಕಟ್ ಮಾಡಿ ನಕಲಿ ಕೀ ಬಳಸಿ ಎಟಿಎಂನಲ್ಲಿದ್ದ ಹಣವನ್ನು ದರೋಡೆ ಮಾಡಿ ಪರಾರಿಯಾಗಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಎಚ್ಚೆತ್ತುಕೊಂಡ ಭದ್ರತಾ ಸಿಬ್ಬಂದಿ ಗಂಗಣ್ಣ ಈ ಬಗ್ಗೆ ಕೂಡಲೇ ತುಮಕೂರು ನಗರ ಠಾಣೆಗೆ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಇನ್ಸ್‍ಪೆಕ್ಟರ್ ಗಂಗಯ್ಯ ಮತ್ತು ತಿಲಕ್‍ಪಾರ್ಕ್ ಪೊಲೀಸ್ ಠಾಣೆ ಸಬ್‍ಇನ್ಸ್‍ಪೆಕ್ಟರ್ ಸ್ಥಳಕ್ಕೆ ದಾವಿಸಿ ಭದ್ರತಾ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡಿದ್ದಾರೆ.  ಬಳಿಕ ಇನ್ಸ್‍ಪೆಕ್ಟರ್ ಗಂಗಯ್ಯ ಈ ಬಗ್ಗೆ ಡಿವೈಎಸ್‍ಪಿ ಚಿದಾನಂದ ಅವರಿಗೆ ಮಾಹಿತಿ ನೀಡಿದ್ದು, ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.  ಪ್ರಕರಣ ಸಂಬಂಧ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಕರ್ನಾಟಕ ಬ್ಯಾಂಕ್ ಎಟಿಎಂಗೆ ತುಮಕೂರಿನ ಪಿಎಂಎಸ್ ಇನ್‍ಫ್ರಾಸ್ಟ್ರಕ್ಚರ್ ಎಂಬ ಏಜೆನ್ಸಿಯು ನಿನ್ನೆ ಸಂಜೆ 20 ಲಕ್ಷ ರೂ. ಮೊತ್ತವನ್ನು ಎಟಿಎಂಗೆ ತುಂಬಿ ಹೋಗಿದ್ದಾರೆ. ಈ ವೇಳೆ ಹಣ ತುಂಬುವ ಏಜೆನ್ಸಿಯ ಅಶ್ವತ್ಥ್, ಮಹೇಶ್, ಮ್ಯಾನೇಜರ್, ಗನ್‍ಮ್ಯಾನ್ ಸೇರಿ ಒಟ್ಟು ನಾಲ್ಕು ಮಂದಿ ಬಂದಿದ್ದರು. ಎಟಿಎಂಗೆ ಹಣ ತುಂಬಿದ ಬಳಿಕ ಇಂದು ಮುಂಜಾನೆ ಈ ದರೋಡೆ ನಡೆದಿದೆ.
ಪ್ರಕರಣ ಸಂಬಂಧ ಪೊಲೀಸರು ಎಟಿಎಂಗೆ ಹಣ ತುಂಬುವ ಏಜೆನ್ಸಿಯ ಸಿಬ್ಬಂದಿಗಳಾದ ಅಶ್ವತ್ಥ್, ಮಹೇಶ್ ಮತ್ತು ಭದ್ರತಾ ಸಿಬ್ಬಂದಿ ಗಂಗಣ್ಣ ಮೇಲೆ ಅನುಮಾನ ವ್ಯಕ್ತಪಡಿಸಿರುವ ಪೊಲೀಸರು ಅವರನ್ನು ವಶಪಡಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಘಟನೆ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಮಾತನಾಡಿ, ಪ್ರಕರಣ ಸಂಬಂಧ ಮೂವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿದೆ. ಎಟಿಎಂನ ಸಿಸಿಟಿವಿಯಲ್ಲಿ ಆರೋಪಿಗಳು ಒಳ ಪ್ರವೇಶಿಸುವುದಷ್ಟೇ ರೆಕಾರ್ಡ್ ಆಗಿದೆ. ಎಟಿಎಂನ ಸೆಕ್ಯೂರಿಟಿ ಹಾಗೂ ಎಟಿಎಂಗೆ ಹಣ ತುಂಬಿಸುವ ಏಜೆನ್ಸಿ, ಸಿಬ್ಬಂದಿಗಳನ್ನು ವಿಚಾರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.  ನಕಲಿ ಕೀ ಬಳಸಿ ಎಟಿಎಂ ದರೋಡೆ ಮಾಡಲಾಗಿದೆ. 20 ಲಕ್ಷ ರೂ. ಹಣವನ್ನು ದೋಚಲಾಗಿದೆ ಎಂದು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin