ಹಿರಾಖುಂಡ್ ಎಕ್ಸ್‍ಪ್ರೆಸ್ ರೈಲು ದುರಂತದಲ್ಲಿ ಸತ್ತವರ ಸಂಖ್ಯೆ 42ಕ್ಕೇರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Train-Accident

ವಿಜಯನಗರಂ, ಜ.24-ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ಕೊನೇರು ರೈಲ್ವೆ ನಿಲ್ದಾಣದ ಬಳಿ ಶನಿವಾರ ಸಂಭವಿಸಿದ ರೈಲು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 42ಕ್ಕೇರಿದೆ. ಇದೇ ವೇಳೆ ಅಪಘಾತ ಸ್ಥಳದಲ್ಲಿ ಕೂಲಂಕಷ ತಪಾಸಣೆ ನಡೆಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಮತ್ತು ಅಪರಾಧ ತನಿಖಾ ದಳ (ಸಿಐಡಿ) ಅಧಿಕಾರಿಗಳು ವಿಧ್ವಂಸಕ ಕೃತ್ಯದ ಸಾಧ್ಯತೆ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.   ಜಗದಲ್‍ಪುರ್-ಭುವನೇಶ್ವರ ಹಿರಾಖುಂಡ್ ಎಕ್ಸ್‍ಪ್ರೆಸ್ ರೈಲು ಆಂಧ್ರ-ಒಡಿಶಾ ಗಡಿಭಾಗದಲ್ಲಿರುವ ರಾಯಗಢ ಸಮೀಪ ರಾತ್ರಿ 11.30ರಲ್ಲಿ ಎಂಜಿನ್ ಮತ್ತು ಒಂಭತ್ತು ಬೋಗಿಗಳು ಹಳಿ ತಪ್ಪಿ ಘೋರ ದುರಂತ ಸಂಭವಿಸಿತ್ತು. ಭಾನುವಾರ ಸಂಜೆ ವೇಳೆಗೆ 39 ಜನರು ಸಾವಿಗೀಡಾಗಿದ್ದಾರೆ ಎಂದು ತಿಳಿಸಲಾಗಿತ್ತು. ಆದರೆ ಗಾಯಗೊಂಡ 70ಕ್ಕೂ ಹೆಚ್ಚು ಜನರಲ್ಲಿ ಮೂವರು ಮೃತಪಟ್ಟಿರುವುದರಿಂದ ಸತ್ತವರ ಸಂಖ್ಯೆ 42ಕ್ಕೆ ಏರಿಕೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಗಾಯಾಳುಗಳಿಗೆ ಆಂಧ್ರ ಮತ್ತು ಒಡಿಶಾದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ರೈಲು ದುರಂತ ಸಂಭವಿಸಿದ ಸ್ಥಳವು ನಕ್ಸಲರ (ಮಾವೋವಾದಿಗಳು) ಪ್ರಾಬಲ್ಯವಿರುವ ಪ್ರದೇಶವಾಗಿದ್ದು, ವಿಧ್ವಂಸಕ ಕೃತ್ಯದ ಸಾಧ್ಯತೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ರೈಲ್ವೆ ಸುರಕ್ಷತಾ ಆಯುಕ್ತರ ನೇತೃತ್ವದಲ್ಲಿ ವಿಶೇಷ ತಂಡಗಳು ಎಲ್ಲ ಆಯಾಮಗಳಿಂದಲೂ ತನಿಖೆ ಮುಂದುವರಿದಿದೆ.  ಉತ್ತರಪ್ರದೇಶದ ಕಾನ್ಪುರದಲ್ಲಿ ಡಿಸೆಂಬರ್ 20ರಂದು 150ಕ್ಕೂ ಹೆಚ್ಚು ಪ್ರಯಾಣಿಕರನ್ನು ಬಲಿ ತೆಗೆದುಕೊಂಡ ಇಂದೋರ್-ಪಾಟ್ನಾ ಎಕ್ಸ್‍ಪ್ರೆಸ್ ಹಳಿ ತಪ್ಪಿದ ಘಟನೆ ಹಿಂದೆ ಪಾಕಿಸ್ತಾನ ಬೇಹುಗಾರಿಕೆ ಸಂಸ್ಥೆ ಐಎಸ್‍ಐ ಕೈವಾಡ ಇರುವ ಸಾಧ್ಯತೆ ಬಗ್ಗೆ ಎನ್‍ಐಎ ತನಿಖೆಯ ನಡೆಸುತ್ತಿದೆ. ಈ ಸಂಬಂಧ ಕೆಲವರನ್ನು ಬಂಧಿಸಲಾಗಿದ್ದು, ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin