ರಾಯಣ್ಣ ಬ್ರಿಗೇಡ್ ಸಮಾವೇಶದಲ್ಲಿ ಪಾಲ್ಗೊಂಡರೆ ಶಿಸ್ತು ಕ್ರಮ : ಬಿಎಸ್ವೈ ಖಡಕ್ ಸಂದೇಶ
ಬೆಂಗಳೂರು, ಜ.25– ನಾಳೆ ನಡೆಯಲಿರುವ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಮಾವೇಶದಲ್ಲಿ ಪಕ್ಷದ ಮುಖಂಡರು ಸೇರಿದಂತೆ ಯಾವುದೇ ನಾಯಕರು ಭಾಗವಹಿಸಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಟ್ಟಪ್ಪಣೆ ಮಾಡಿದ್ದಾರೆ. ರಾಯಣ್ಣ ಬ್ರಿಗೇಡ್ಗೂ ಬಿಜೆಪಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ಅಲ್ಲಿನ ಚಟುವಟಿಕೆಗಳಲ್ಲಿ ನಮ್ಮ ಪಕ್ಷದ ಯಾವುದೇ ಮುಖಂಡರು ಭಾಗವಹಿಸಬಾರದೆಂದು ಹಿಂದೆಯೇ ಸೂಚನೆ ನೀಡಲಾಗಿದೆ. ಅದೇ ರೀತಿ ರಾಯಣ್ಣ ಕಾರ್ಯಕ್ರಮಕ್ಕೆ ಭಾಗವಹಿಸಿದರೆ ಶಿಸ್ತುಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಿಗೇಡ್ ಸಂಬಂಧ ಉಂಟಾಗಿರುವ ವಿವಾದವನ್ನು ಪಕ್ಷದ ಚೌಕಟ್ಟಿನಲ್ಲಿಯೇ ಕುಳಿತು ಚರ್ಚಿಸಲಾಗುವುದು ಎಂದರು.
ಬಜೆಟ್ ಅಧಿವೇಶನ ಫೆ.1ರಿಂದ ಆರಂಭವಾಗಲಿದ್ದು, ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಷಾ ಅವರ ಜತೆ ಚರ್ಚಿಸಿ ಸಮಸ್ಯೆಯನ್ನು ಇತ್ಯರ್ಥಪಡಿಸಲಾಗುವುದು ಎಂದು ತಿಳಿಸಿದರು.
ನಾಲ್ಕು ಗೋಡೆಗಳ ಮಧ್ಯೆ ಚರ್ಚಿಸಬೇಕಾದ ವಿಷಯಗಳನ್ನು ಹಾದಿಬೀದಿಯಲ್ಲಿ ಕುಳಿತು ಚರ್ಚೆ ಮಾಡುವುದಿಲ್ಲ. ರಾಯಣ್ಣ ಬ್ರಿಗೇಡ್ ಕುರಿತಂತೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ನಮಗೆ ಇಲ್ಲದ ಕುತೂಹಲ ನಿಮ್ಮಲ್ಲಿಯೇ ಹೆಚ್ಚಾಗಿದೆ ಎಂದು ಹಾಸ್ಯ ಚಟಾಕಿ ಹಾರಿಸಿದರು. ಇನ್ನು ಮುಂದೆ ಯಾರೊಬ್ಬರೂ ಸಹ ಸಹಿ ಸಂಗ್ರಹ ಮಾಡಬೇಕಾದ ಅಗತ್ಯವಿಲ್ಲ. ಪಕ್ಷದ ಚೌಕಟ್ಟಿನಲ್ಲೇ ಎಲ್ಲಾ ಸಮಸ್ಯೆಗಳೂ ಪರಿಹಾರವಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜೀನಾಮೆಗೆ ಒತ್ತಾಯ:
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ವೇಳೆ 160 ಕೋಟಿ ಬೇನಾಮಿ ಆಸ್ತಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸಣ್ಣ ಕೈಗಾರಿಕೆ ಸಚಿವ ರಮೇಶ್ ಜಾರಕಿಹೊಳಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಅವರು ಒತ್ತಾಯಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವೇಳೆಗೆ ಅವರಿಂದ ರಾಜೀನಾಮೆ ಪಡೆಯುತ್ತಾರೆ ಎಂದು ನಿರೀಕ್ಷೆ ಮಾಡಿದ್ದೆ. ಯಾವ ಕಾರಣದಿಂದ ಅವರನ್ನು ಸಂಪುಟದಲ್ಲಿ ಇಟ್ಟುಕೊಂಡಿದ್ದೀರಿ ಎಂದು ಪ್ರಶ್ನಿಸಿದರು. ರಮೇಶ್ ಜಾರಕಿಹೊಳಿ ಬಳಿ 117 ಕೋಟಿ ಬೇನಾಮಿ ಆಸ್ತಿ ಪತ್ತೆಯಾಗಿದೆ. ಕೇಂದ್ರ ಸರ್ಕಾರ ಈ ಹಿಂದೆ ಬೇನಾಮಿ ಆಸ್ತಿ ಘೋಷಣೆ ಮಾಡಿದರೆ ಶೇ.50ರಷ್ಟು ವಿನಾಯಿತಿ ನೀಡುವುದಾಗಿ ಹೇಳಿದರು.
ನೋಟು ಅಮಾನೀಕರಣದ ನಂತರ ಕಾಂಗ್ರೆಸ್ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದರು. ಬೆಳಗಾವಿಯಲ್ಲಿ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ನಮ್ಮ ಪಕ್ಷದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದರು. ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮನಬಂದಂತೆ ಆರೋಪ ಮಾಡಿದ್ದರು. ಇದೀಗ ಅವರ ಸಚಿವ ಸಂಪುಟದವರೇ ಬೇನಾಮಿ ಆಸ್ತಿ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವುದರಿಂದ ಏನು ಮಾಡುತ್ತಾರೆ ಎಂದು ಪ್ರಶ್ನಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಸದರಾದ ಶೋಭಾ ಕರಂದ್ಲಾಜೆ, ಪಿ.ಸಿ.ಮೋಹನ್, ಶಾಸಕರಾದ ಮುನಿರಾಜು, ನಾರಾಯಣಸ್ವಾಮಿ, ಎಸ್.ಆರ್.ವಿಶ್ವನಾಥ್, ಪುಟ್ಟಸ್ವಾಮಿ, ರವಿಕುಮಾರ್, ಅಶ್ವತ್ಥ ನಾರಾಯಣ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS