ಕಸದ ಹೆಸರಲ್ಲಿ ಅವ್ಯವಹಾರ : ಬಹಿರಂಗ ಚರ್ಚೆಗೆ ಜಾರ್ಜ್’ಗೆ ಸವಾಲ್ ಹಾಕಿದ N.R.ರಮೇಶ್

ಈ ಸುದ್ದಿಯನ್ನು ಶೇರ್ ಮಾಡಿ

NR-Ramesh

ಬೆಂಗಳೂರು,ಜ.27-ಕಸ ವಿಲೇವಾರಿ ಹಾಗೂ ಸಂಸ್ಕರಣಾ ಘಟಕಗಳಲ್ಲಿ ನಡೆಯುತ್ತಿರುವ ಕೋಟ್ಯಂತರ ರೂ.ಗಳ ಅವ್ಯವಹಾರದ ಹೇಳಿಕೆಗೆ ಈಗಲೂ ನಾನು ಬದ್ಧನಾಗಿದ್ದು , ಈ ಕುರಿತಂತೆ ಬಹಿರಂಗ ಚರ್ಚೆಗೆ ಬನ್ನಿ ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಅವರು ನಗರಾಭಿವೃದ್ಧಿ ಸಚಿವ ಜಾರ್ಜ್ ಅವರಿಗೆ ಸವಾಲು ಹಾಕಿದ್ದಾರೆ.
ಇತ್ತೀಚೆಗೆ ಪೌರಕಾರ್ಮಿಕರ ವೇತನ ಬಿಡುಗಡೆಯಲ್ಲಿ ಆಗುತ್ತಿರುವ ಕೋಟ್ಯಂತ ರೂ. ಅವ್ಯವಹಾರ ಹಾಗೂ 440 ಕೋಟಿ ರೂ. ಅನುದಾನ ಬಂದಿದ್ದರೂ ಕಸ ಸಂಸ್ಕರಣ ಘಟಕಗಳನ್ನು ಅಭಿವೃದ್ದಿಪಡಿಸದಿರುವ ಕುರಿತಂತೆ ನಾನು ಬಿಡುಗಡೆ ಮಾಡಿದ ದಾಖಲೆಗಳ ಬಗ್ಗೆ ಜಾರ್ಜ್ ಅವರು ಅಪಹಾಸ್ಯ ಮಾಡಿದ್ದಾರೆ. ಹೀಗಾಗಿ ನಾನು ಅವರನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದೇನೆ ಎಂದು ಎನ್.ಆರ್.ರಮೇಶ್ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಪಾಲಿಕೆಯಲ್ಲಿ ಖಾಯಂ ಪೌರಕಾರ್ಮಿಕರನ್ನು ಹೊರುತಪಡಿಸಿ 27,716 ಮಂದಿ ಗುತ್ತಿಗೆ ಪೌರಕಾರ್ಮಿಕರಿದ್ದಾರೆ ಎಂದು ತಪ್ಪು ಮಾಹಿತಿ ನೀಡಿ ಗುತ್ತಿಗೆದಾರರು ಬಿಬಿಎಂಪಿಗೆ ವಂಚಿಸುತ್ತಿದ್ದಾರೆ. ಇದರ ಬಗ್ಗೆ ನನ್ನಲ್ಲಿ ಅಗತ್ಯ ದಾಖಲೆ ಇದೆ. ನೀವು ನಗರಾಭಿವೃದ್ದಿ ಸಚಿವರಾಗಿ ಇಂತಹ ವಂಚನೆಯನ್ನು ತಪ್ಪಿಸಬೇಕು ಎಂದು ಪ್ರಾಮಾಣಿಕ ಪ್ರಯತ್ನ ಮಾಡಿದ್ದರೆ 300ರಿಂದ 400 ಕೋಟಿ ಹಣವನ್ನು ಉಳಿಸಬಹುದಾಗಿತ್ತು. ಅದೇ ರೀತಿ ಏಳು ವೈಜ್ಞಾನಿಕವಾಗಿ ಕಸ ಸಂಸ್ಕರಣ ಘಟಕಗಳನ್ನು ಸ್ಥಾಪಿಸುವ ಹೆಸರಿನಲ್ಲಿ 410 ಕೋಟಿ ರೂ. ಖರ್ಚು ಮಾಡಲಾಗಿದೆ ಎಂಬ ಅಧಿಕಾರಿಗಳ ಹೇಳಿಕೆ ತಪ್ಪು ಮಾಹಿತಿಯಿಂದ ಕೂಡಿದೆ.

ನೀವು ಮನಸ್ಸು ಮಾಡಿದ್ದರೆ ನೂರಾರು ಕೋಟಿ ರೂ.ಗಳನ್ನು ಬಿಬಿಎಂಪಿ ಖಜಾನೆಗೆ ಉಳಿಸಬಹುದಾಗಿತ್ತು. ಆದರೆ ನೀವು ನನ್ನ ಹೇಳಿಕೆಯನ್ನು ಲಘುವಾಗಿ ಪರಿಗಣಿಸಿ ಅಪಹಾಸ್ಯ ಮಾಡಿದ್ದೀರಿ. ನನ್ನ ಬಳಿ ಇರುವ ಅಗತ್ಯ ದಾಖಲೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ ರವಾನಿಸಿದ್ದೇನೆ.  ನಗರಾಭಿವೃದ್ದಿ ಸಚಿವರಾಗಿ ನಿಮಗೆ ಕಸ ವಿಲೇವಾರಿಯಲ್ಲಿ ಆಗುತ್ತಿರುವ ಕೋಟ್ಯಂತರ ರೂ. ಅವ್ಯವಹಾರವನ್ನು ತಪ್ಪಿಸಬೇಕು ಎಂಬ ಕಳಕಳಿ ಇದ್ದರೆ ಬಹಿರಂಗ ಚರ್ಚೆಗೆ ಬನ್ನಿ. ಅಗತ್ಯ ದಾಖಲೆಗಳನ್ನು ಒದಗಿಸಲು ನಾನು ಸಿದ್ದ ಎಂದು ಎನ್.ಆರ್.ರಮೇಶ್ ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin