ಪಠ್ಯ ಪರಿಷ್ಕರಣೆ ಪಾರದರ್ಶಕವಾಗಿಲ್ಲ : ಶೋಭಾ ಕರಂದ್ಲಾಜೆ ಆರೋಪ

ಈ ಸುದ್ದಿಯನ್ನು ಶೇರ್ ಮಾಡಿ

Shobha-Karandlaje

ಮೈಸೂರು, ಜ.27-ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದ ಪಠ್ಯ ಪರಿಷ್ಕರಣಾ ಕಾರ್ಯ ಪಾರದರ್ಶಕವಾಗಿ ಮಾಡುತ್ತಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಇಂದಿಲ್ಲಿ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದರಿಂದ 8ನೆ ತರಗತಿವರೆಗಿನ ಪಠ್ಯ ಬದಲಾವಣೆಗೆ ರಾಜ್ಯ ಮುಂದಾಗಿದೆ. ಆದರೆ ಪರಿಷ್ಕರಣಾ ಸಮಿತಿಯ ನೇತೃತ್ವ ವಹಿಸಿರುವ ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ಪಾರದರ್ಶಕವಾಗಿ ಕೆಲಸ ನಿರ್ವಹಿಸಿಲ್ಲ. ಮಹಾಪುರುಷರ ವಿಷಯವನ್ನು ಪಠ್ಯದಿಂದ ತೆಗೆದು ನಕ್ಸಲ್ ಚಟುವಟಿಕೆಯಲ್ಲಿ ತೊಡಗಿದ್ದವರ ಬಗೆಗಿನ ಮಾಹಿತಿಯನ್ನು ಸೇರಿಸಲಾಗಿದೆ ಎಂಬ ಮಾಹಿತಿ ಸಿಕ್ಕಿದೆ ಎಂದು ಹೇಳಿದರು.

ಕನಿಷ್ಠ ಕರಡು ಪ್ರತಿಯನ್ನು ನೀಡದೆ ಶಿಕ್ಷಣ ತಜ್ಞರ ಅಭಿಪ್ರಾಯವನ್ನೂ ಪಡೆಯದೆ ಏಕಾಏಕಿ ಪಠ್ಯ ಪರಿಷ್ಕರಣೆಗೆ ಮುಂದಾಗಿರುವ ಪ್ರಯತ್ನ ಸರಿಯಲ್ಲ. ಸಚಿವರಿಗೆ ತಮ್ಮ ಇಲಾಖೆಯ ಮೇಲೆ ಕಂಟ್ರೋಲ್ ಇಲ್ಲವೆ ಎಂದು ಪ್ರಶ್ನಿಸಿದರು. ನೀಟ್ ಬಂದ ಮೇಲೆ ಮತ್ತೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಬೇಕಿದೆ. ಅದಕ್ಕೆ ಅನುಗುಣವಾಗಿ ಕೇಂದ್ರದಿಂದ ಸಿಬಿಎಸ್‍ಸಿ ಜಾರಿಗೆ ಬರುತ್ತಿದೆ. ಹಾಗಾಗಿ ಕೆಳಹಂತದಲ್ಲಿ ಬದಲು ಮಾಡಬೇಕಿತ್ತು ಎಂದರು. ರಾಷ್ಟ್ರೀಯ ಪಠ್ಯ ನೀತಿ ಜಾರಿಗೆ ತರುವ ಬಗ್ಗೆ ಎಲ್ಲಾ ರಾಜ್ಯಗಳ ಅಭಿಪ್ರಾಯವನ್ನು ಕೇಳಲಾಗಿದ್ದು, ಅದಕ್ಕೆ ತನ್ನ ಅಭಿಪ್ರಾಯ ತಿಳಿಸಿದ ಮೇಲೆ ಕೇವಲ ಒಂದು ವರ್ಷದ ಅವಧಿಗೆ ಪಠ್ಯ ಬದಲಾವಣೆ ಏಕೆ ಎಂದು ಕೇಳಿದರು.

ಕಸ್ತೂರಿ ರಂಗನ್ ನೇತೃತ್ವದ ಜ್ಞಾನ ಆಯೋಗವೂ ಸಹ ನೀಟ್ ಪರೀಕ್ಷೆಗೆ ಅನುಗುಣವಾಗಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವಂತೆ ಶಿಫಾರಸು ಮಾಡಿದೆ. ಇದರ ನಡುವೆ ಈ ಕಾರ್ಯ ಎಷ್ಟು ಸಮಂಜಸವಾಗಿದೆ ಎಂದು ಪ್ರಶ್ನಿಸಿದರು.

ರಾಜ್ಯ ಸರ್ಕಾರ ದಿವಾಳಿ ಘೋಷಿಸಲಿ:

ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂದು ಘೋಷಿಸುವಂತೆ ಆಗ್ರಹಿಸಿದ ಸಂಸದೆ ಶೋಭಾ ಕರಂದ್ಲಾಜೆ, ರಾಜ್ಯ ಸರ್ಕಾರ ಸುವರ್ಣ ಆರೋಗ್ಯ ಟ್ರಸ್ಟ್ ವತಿಯಿಂದ ಹಲವಾರು ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದಕ್ಕಾಗಿ ವ್ಯಯಿಸಿರುವ 150 ಕೋಟಿ ರೂ.ಗಳನ್ನು ಖಾಸಗಿಯವರಿಗೆ ನೀಡಬೇಕಿದೆ. ಹಣ ಇಲ್ಲದ ಸರ್ಕಾರ ಇದನ್ನು ಪಾವತಿಸಿಲ್ಲ ಎಂದರು. ಸರ್ಕಾರದಲ್ಲಿ ಹಣ ಇಲ್ಲದಿದ್ದರೆ ಕೂಡಲೇ ದಿವಾಳಿಯಾಗಿದೆ ಎಂದು ಘೋಷಿಸಿ ಎಂದರು. ಸುವರ್ಣ ಆರೋಗ್ಯ ಯೋಜನೆಗೆ ಇನ್ನೂ 5 ಯೋಜನೆ ಸೇರ್ಪಡೆಗೊಳಿಸುವಂತೆ ಒತ್ತಾಯಿಸಿದರು. ಪಕ್ಷದಲ್ಲಿ ಬೆಳವಣಿಗೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇಂದು ರಾತ್ರಿಯೊಳಗೆ ಎಲ್ಲಾ ಬದಲಾಗುತ್ತದೆ ಎಂದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin