ಮಾರ್ಚ್‍ನೊಳಗೆ ವಿವೇಕಾನಂದ ಕಾಲೇಜು ಅಂಡರ್‍ಪಾಸ್ ಲೋಕಾರ್ಪಣೆ

ಈ ಸುದ್ದಿಯನ್ನು ಶೇರ್ ಮಾಡಿ

BBMP-Mayor

ಬೆಂಗಳೂರು,ಜ.27-ಡಾ.ರಾಜ್‍ಕುಮಾರ್ ರಸ್ತೆಯ ವಿವೇಕಾನಂದ ಕಾಲೇಜು ಸಮೀಪ ನಿರ್ಮಿಸಲಾಗುತ್ತಿರುವ ಕೆಳಸೇತುವೆಯನ್ನು ಮಾರ್ಚ್ ಅಂತ್ಯದೊಳಗೆ ಸಾರ್ವಜನಿಕ ಸೇವೆಗೆ ಬಿಡುಗಡೆ ಮಾಡಬೇಕು ಎಂದು ಮೇಯರ್ ಜಿ.ಪದ್ಮಾವತಿ ಇಂದಿಲ್ಲಿ ತಾಕೀತು ಮಾಡಿದರು.   ಉಪಮೇಯರ್ ಆನಂದ್, ವಾರ್ಡ್ ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಭದ್ರೇಗೌಡ ಮತ್ತಿತರರೊಂದಿಗೆ ರಾಜಾಜಿನಗರ ಸುತ್ತಮುತ್ತಲ ಪ್ರದೇಶಗಳಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ದಿ ಕಾಮಗಾರಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಕೆಳಸೇತುವೆ ನಿರ್ಮಾಣ ಜಾಗದಲ್ಲಿ ಆಸ್ಪತ್ರೆಗೆ ಸೇರಿದ ಭೂಮಿ ಬಿಡಿಸಿಕೊಳ್ಳುವ ಸಂಬಂಧ ಕೆಲವು ಎಡರು-ತೊಡರು ಉಂಟಾಗಿದೆ. ಅದನ್ನೇ ಗಮನದಲ್ಲಿಟ್ಟುಕೊಂಡು ಕಾಮಗಾರಿ ವಿಳಂಬ ಮಾಡದಂತೆ ಗುತ್ತಿಗೆದಾರರಿಗೆ ಸೂಚಿಸಿದ್ದೇನೆ ಎಂದರು.  ಈ ಪ್ರದೇಶದಲ್ಲಿ ಅತಿಹೆಚ್ಚು ವಾಹನ ದಟ್ಟಣೆ ಉಂಟಾಗುವುದರಿಂದ ಮಾರ್ಚ್ ವೇಳೆಗೆ ಕೆಳಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಹಾಗೂ ಸರ್ವೀಸ್ ರಸ್ತೆಯನ್ನು ಸಾರ್ವಜನಿಕ ಸೇವೆಗೆ ಬಿಡುಗಡೆ ಮಾಡಬೇಕು ಎಂದು ತಾಕೀತು ಮಾಡಿದ್ದೇನೆ ಎಂದು ಮೇಯರ್ ಹೇಳಿದರು.  ಸಿಗ್ನಲ್ ಫ್ರೀ ಕಾರಿಡಾರ್ ಉದ್ದೇಶದಿಂದ ಡಾ.ರಾಜ್‍ಕುಮಾರ್ ವಾರ್ಡ್ ಮತ್ತು ರಾಜಾಜಿನಗರ ವಾರ್ಡ್‍ನ ವೆಸ್ಟ್ ಆಫ್ ಕಾರ್ಡ್‍ರೋಡ್‍ನಲ್ಲಿ ಕೈಗೆತ್ತಿಕೊಳ್ಳಲಾಗಿರುವ ಎರಡು ಮೇಲ್ಸೇತುವೆ ಮತ್ತು ಕೆಳಸೇತುವೆ ಕಾಮಗಾರಿಗಳ ಪ್ರದೇಶಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರಾಜ್‍ಕುಮಾರ್ ವಾರ್ಡ್‍ನಲ್ಲಿ ಒಂದು ಮೇಲ್ಸೇತುವೆ ಮತ್ತು ಕೆಳಸೇತುವೆ ಹಾಗೂ ರಾಜಾಜಿನಗರ ವಾರ್ಡ್‍ನಲ್ಲಿ ಒಂದು ಮೇಲ್ಸೇತುವೆ ಮತ್ತು ಕೆಳಸೇತುವೆ ಕಾಮಗಾರಿ ನಡೆಸಲಾಗುತ್ತಿದೆ.
90 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಈ ಕಾಮಗಾರಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟಿಸಿ ಹಲವು ದಿನಗಳು ಕಳೆದರೂ ಇದುವರೆಗೂ ಯೋಜನೆ ಆರಂಭವಾಗಿಲ್ಲ.  ಹೀಗಾಗಿ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಲಾಗಿದ್ದು , ಆಗಸ್ಟ್‍ನೊಳಗೆ ಎರಡು ಮೇಲ್ಸೇತುವೆ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಸ್ಪಷ್ಟ ಸೂಚನೆ ನೀಡಿದ್ದೇನೆ. ಅದೇ ರೀತಿ ಎರಡು ಕೆಳಸೇತುವೆ ಕಾಮಗಾರಿಗಳನ್ನು 2018ರ ಆಗಸ್ಟ್‍ನೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದ್ದೇನೆ ಎಂದು ಮೇಯರ್ ಪದ್ಮಾವತಿ ಹೇಳಿದರು.

ಮೋದಿ ಆಸ್ಪತ್ರೆ ರಸ್ತೆಯನ್ನು ಅತ್ಯಾಧುನಿಕವಾಗಿ ಟೆಂಡರ್ ಶ್ಯೂರ್ ಯೋಜನೆಯಡಿ ನಿರ್ಮಿಸಲಾಗುತ್ತಿದ್ದು , ಈ ರಸ್ತೆಯನ್ನು ಫೆಬ್ರವರಿ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ ಎಂದರು.  ಬಿಬಿಎಂಪಿ ಸದಸ್ಯರಾದ ರೂಪಾಲಿಂಗೇಶ್ವರ್, ಕೃಷ್ಣಮೂರ್ತಿ, ಕಾಂಗ್ರೆಸ್ ಮುಖಂಡ ಲಿಂಗೇಶ್ವರ್ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin