ಯಡಿಯೂರಪ್ಪ-ಈಶ್ವರಪ್ಪ ನಡುವೆ ‘ಅಮಿತ’ಸಂಧಾನ, ಇಬ್ಬರ ನಾಯಕರ ವಾದವೇನು..?

ಈ ಸುದ್ದಿಯನ್ನು ಶೇರ್ ಮಾಡಿ

Amith-Shah-Yadiyurappa

ಬೆಂಗಳೂರು,ಜ.27-ಸಂಗೊಳ್ಳಿ ರಾಯಣ್ಣ ಬ್ರಿಗೇಡ್‍ನಿಂದ ದೂರ ಉಳಿಯುವುದು ಹಾಗೂ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಮುನ್ನಡೆಸಬೇಕು. ಇದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಪಕ್ಷದ ಮುಖಂಡ ಕೆ.ಎಸ್.ಈಶ್ವರಪ್ಪನವರಿಗೆ ನೀಡಿರುವ ಸ್ಪಷ್ಟ ಆದೇಶ. ನವದೆಹಲಿಯ ಅಕ್ಬರ್ ರಸ್ತೆಯಲ್ಲಿರುವ ಅಮಿತ್ ಷಾ ನಿವಾಸದಲ್ಲಿ ಇಂದು ಯಡಿಯೂರಪ್ಪ , ಈಶ್ವರಪ್ಪ ಪರಸ್ಪರ ಮುಖಾಮುಖಿಯಾದರು. ಹಲವು ದಿನಗಳಿಂದ ಒಬ್ಬರ ವಿರುದ್ಧ ಮತ್ತೊಬ್ಬರು ಕತ್ತಿ ಮಸೆದು ಸಾರ್ವಜನಿಕವಾಗಿ ಆರೋಪ ಪ್ರತ್ಯಾರೋಪಗಳನ್ನು ಮಾಡಿದ್ದ ಉಭಯ ನಾಯಕರ ನಡುವೆ ಹೈಕಮಾಂಡ್ ಸಂಧಾನ ನಡೆಸಲು ಮುಂದಾಯ್ತು.

ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ.ಸದಾನಂದಗೌಡ, ಪ್ರಹ್ಲಾದ್ ಜೋಷಿ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್, ಆರ್‍ಎಸ್‍ಎಸ್ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಮ್‍ಲಾಲ್, ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮತ್ತಿತರರು ಭಾಗವಹಿಸಿದ್ದರು.  ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಇಬ್ಬರು ನಾಯಕರ ದೂರು-ಪ್ರತಿದೂರುಗಳನ್ನು ಆಲಿಸಿದ ಅಮಿತ್ ಷಾ ಇನ್ನು ಮುಂದೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‍ನಲ್ಲಿ ಭಾಗವಹಿಸಬಾರದೆಂದು ಈಶ್ವರಪ್ಪನವರಿಗೆ ಸೂಚಿಸಿದರೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಮುನ್ನಡೆಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಬಿಎಸ್‍ವೈಗೂ ತಾಕೀತು ಮಾಡಿದ್ದಾರೆ.

ನಿಮ್ಮ ನಿಮ್ಮ ವೈಯಕ್ತಿಕ ಪ್ರತಿಷ್ಠೆಗೆ ಪಕ್ಷವನ್ನು ಬಲಿ ಕೊಡುವುದು ಸರಿಯಲ್ಲ. ಈಗಾಗಲೇ ಪಕ್ಷಕ್ಕೆ ಸಾಕಷ್ಟು ಹಾನಿಯಾಗಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಂತಹ ವಾತಾವರಣ ಇದ್ದರೂ ನಾಯಕರ ಕಿತ್ತಾಟದಿಂದ ಕಾರ್ಯಕರ್ತರು ಮುನಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಒಂದಿಷ್ಟು ಅಸಮಾಧಾನಕ್ಕೆ ಅವಕಾಶವಿಲ್ಲದೆ ಪಕ್ಷ ಸಂಘಟಿಸಬೇಕು. ಪ್ರಮುಖ ತೀರ್ಮಾನಗಳು ಪಕ್ಷದ ಕಚೇರಿಯಲ್ಲಿಯೇ ಆಗಬೇಕು, ಚುನಾವಣೆ ಬಂದ ಸಂದರ್ಭದಲ್ಲಿ ಯಾರಿಗೆ ಟಿಕೆಟ್ ಕೊಡಬೇಕು, ಯಾರಿಗೆ ನೀಡಬಾರದೆಂಬುದನ್ನು ಪಕ್ಷ ತೀರ್ಮಾನಿಸುತ್ತದೆ. ಸದ್ಯಕ್ಕೆ ಪಕ್ಷ ಸಂಘಟನೆಯತ್ತ ಗಮನಹರಿಸಬೇಕೆ ಹೊರತು ಬೇರೆ ಅನಗತ್ಯ ವಿಷಯಗಳ ಬಗ್ಗೆ ಕಿವಿಗೊಡಬಾರದೆಂದು ಸಲಹೆ ಮಾಡಿದ್ದಾರೆ.

ಈಶ್ವರಪ್ಪ ವಾದವೇನು?:

ಇನ್ನು ಸಭೆಯಲ್ಲಿ ಭಾಗವಹಿಸಿದ್ದ ಈಶ್ವರಪ್ಪ ದಾಖಲೆಗಳ ಸಮೇತ ಬಿಎಸ್‍ವೈ ವಿರುದ್ದ ದೂರು ನೀಡಿದ್ದಾರೆ. ರಾಜ್ಯಾಧ್ಯಕ್ಷರಾದ ವೇಳೆ ಅವರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಭರವಸೆ ಕೊಟ್ಟಿದ್ದರು. ಪಕ್ಷ ಬಿಟ್ಟು ಹೋಗಿ ಬಂದರೂ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದರೂ ನಾವು ವಿರೋಧಿಸಲಿಲ್ಲ.  ಆದರೆ ಪದಾಧಿಕಾರಿಗಳ ನೇಮಕಾತಿ ವೇಳೆ ಪಕ್ಷದ ನಿಷ್ಠಾವಂತರನ್ನು ಕಡೆಗಣಿಸಿ ಕೆಜೆಪಿಯಿಂದ ವಲಸೆ ಬಂದವರಿಗೆ ಮಣೆ ಹಾಕಿದ್ದು ಸರಿಯಲ್ಲ. ಇದರಿಂದ ಮೂಲ ಕಾರ್ಯಕರ್ತರಿಗೆ ಅಸಮಾಧಾನವಾಗಿದೆ. ಪ್ರತಿ ಜಿಲ್ಲೆಗಳಲ್ಲೂ ಎರಡೆರಡು ಬಣಗಳಾಗಿವೆ ಎಂದು ದಾಖಲೆಗಳನ್ನು ನೀಡಿದ್ದಾರೆ.

ಕರ್ನಾಟಕದಲ್ಲಿ ಅಹಿಂದ ಮತಗಳು ಕಾಂಗ್ರೆಸ್‍ಗೆ ಹೋಗುವುದನ್ನು ತಡೆಗಟ್ಟಬೇಕಾದರೆ ರಾಯಣ್ಣ ಬ್ರಿಗೇಡ್ ಅತ್ಯಗತ್ಯ. ಜನಗಣತಿ ಹೆಸರಿನಲ್ಲಿ ಅಲ್ಲಿನ ಸರ್ಕಾರ ಅಹಿಂದ ಮತಗಳನ್ನು ಕ್ರೋಢೀಕರಿಸುತ್ತಿದೆ. ದಲಿತ ಮತ್ತು ಹಿಂದುಳಿದ ಮತಗಳನ್ನು ಬಿಜೆಪಿಗೆ ಸೆಳೆಯಬೇಕಾದರೆ ಬಿಜೆಪಿ ಇನ್ನಷ್ಟು ಸಂಘಟಿತರಾಗಬೇಕು.  ಆದರೆ ಯಡಿಯೂರಪ್ಪ ರಾಯಣ್ಣ ಬ್ರಿಗೇಡ್ ತಡೆಯಲು ಭಾರೀ ಹರಸಾಹಸ ಮಾಡುತ್ತಿದ್ದಾರೆ. ನನ್ನ ಜನ್ಮದಲ್ಲೇ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳುತ್ತಿರುವುದು ನೋವು ತಂದಿದೆ. ಅನೇಕ ಮಠಾಧೀಶರು ಬ್ರಿಗೇಡ್‍ಗೆ ಬೆಂಬಲಿಸಿದ್ದಾರೆ. ಇದಕ್ಕೆ ಬುಧವಾರ ನಡೆದಿರುವ ಸಮಾವೇಶವೇ ಸಾಕ್ಷಿ.  ನಾನು ಬಿಜೆಪಿಗೆ ಪರ್ಯಾಯವಾಗಿ ಇದನ್ನು ಸಂಘಟಿಸುತ್ತಿಲ್ಲ. ಪಕ್ಷ ನಿಷ್ಠೆ ಬಗ್ಗೆ ನನಗೆ ಯಾರಿಂದಲೂ ಪ್ರಮಾಣಪತ್ರ ಬೇಕಿಲ್ಲ. ಮುಂದೆಯೂ ಇದರಲ್ಲಿ ಭಾಗವಹಿಸುತ್ತೇನೆ ಎಂದು ಹೇಳಿದ್ದಾರೆ.

ಬಿಎಸ್‍ವೈ ಹೇಳಿದ್ದೇನು?:

ಇನ್ನು ಈಶ್ವರಪ್ಪ ದೂರಿಗೆ ಪ್ರತಿದೂರು ನೀಡಿದ ಯಡಿಯೂರಪ್ಪ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಬಿಜೆಪಿಯಲ್ಲಿ ಪರ್ಯಾಯ ಶಕ್ತಿಯಾಗಿ ಬೆಳೆಯುತ್ತಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವುದು ಕೆಲವರಿಗೆ ಇಷ್ಟ ಇಲ್ಲ. ಅತಂತ್ರ ವಿಧಾನಸಭೆ ನಿರ್ಮಾಣವಾದರೆ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದೇ ಇದರ ಮೂಲ ಉದ್ದೇಶವಾಗಿದೆ.   ಪಕ್ಷದ ಚಿಹ್ನೆಯಡಿ ಸಂಘಟಿಸುವಂತೆ ಹೇಳಿದರೆ ನನ್ನನ್ನು ಹಿಂದುಳಿದ ವರ್ಗಗಳ ವಿರೋಧಿ ಎಂದು ಬಿಂಬಿಸಲಾಗುತ್ತದೆ. ಪದಾಧಿಕಾರಿಗಳ ನೇಮಕವಾಗುವ ವೇಳೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿದೆ. ಮೂರ್ನಾಲ್ಕು ಜಿಲ್ಲೆಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ಕಡೆ ಯಾವುದೇ ಸಮಸ್ಯೆ ಇಲ್ಲ. ಇನ್ನು ನನ್ನ ಬಗ್ಗೆ ಈಶ್ವರಪ್ಪ ಏನೇನು ಹೇಳಿಕೆ ಕೊಟ್ಟಿದ್ದಾರೆ ನೋಡಿ ಎಂದು ಅಮಿತ್ ಷಾಗೆ ವಿಡಿಯೋ ತುಣುಕು ಮತ್ತು ದಿನಪತ್ರಿಕೆಗಳಲ್ಲಿ ಬಂದಿರುವ ವರದಿಗಳ ಪ್ರತಿಯನ್ನು ನೀಡಿದರು.

ಕಾರ್ಯಕಾರಿಣಿ ಸಭೆ, ಕೋರ್ ಕಮಿಟಿ ಪಕ್ಷದ ಸಂಘಟನೆ ನಡೆಯುತ್ತಲೇ ಇದೆ. ರಾಯಣ್ಣ ಬ್ರಿಗೇಡ್, ಪಕ್ಷದ ಮೋರ್ಚಾಗಳಡಿ ಸಂಘಟಿಸಿದರೆ ಆಗುವ ಅಡ್ಡಿಯಾದರೂ ಏನು? ಈಶ್ವರಪ್ಪ ಇದರಲ್ಲಿ ಮುಂದುವರಿಯುತ್ತೇನೆ ಎಂದು ಹಠ ಹಿಡಿದಿರುವುದು ಯಾರ ಸ್ವಾರ್ಥಕ್ಕಾಗಿ ಎಂದರು.  ಹೀಗೆ ಇಬ್ಬರ ದೂರುಗಳನ್ನು ಆಲಿಸಿದ ಬಳಿಕ ಹಿಂದುಳಿದ ವರ್ಗಗಳ ಮೋರ್ಚಾದಡಿ ರಾಯಣ್ಣ ಬ್ರಿಗೇಡ್ ಸಂಘಟಿಸಬೇಕು, ಪಕ್ಷದಲ್ಲಿರುವ ಎಲ್ಲ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಅಮಿತ್ ಷಾ ತಾಕೀತು ಮಾಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin