ಹಸೆ ಮಣೆ ಏರಬೇಕಿದ್ದ ಹಾಸನದ ವೀರಯೋಧ ಸಂದೀಪ್‍ಶೆಟ್ಟಿ ಹಿಮಪಾತಕ್ಕೆ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

Sandeep-Shetty

ಹಾಸನ, ಜ.27- ಮುಂದಿನ ತಿಂಗಳು ಹಸೆ ಮಣೆ ಏರಬೇಕಿದ್ದ ಹಾಸನದ ವೀರಯೋಧ ಸಂದೀಪ್‍ಶೆಟ್ಟಿಯವರನ್ನು ಜಮ್ಮುವಿನ ಹಿಮಪಾತ ಬಲಿ ತೆಗೆದುಕೊಂಡಿದೆ. ಶಾಂತಿಗ್ರಾಮ ಹೋಬಳಿ ದೇವಿಹಳ್ಳಿಯ ಸಂದೀಪ್ ಶೆಟ್ಟಿ (28) ಹುತಾತ್ಮ ಯೋಧ. ಏಳು ವರ್ಷದ ಹಿಂದೆ ಸೇನೆಗೆ ಸೇರಿದ್ದ ಇವರು, ಜಮ್ಮು-ಕಾಶ್ಮೀರದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಎರಡು ತಿಂಗಳ ಹಿಂದೆಯಷ್ಟೆ ಮನೆಗೆ ಬಂದಿದ್ದ ಸಂದೀಪ್‍ಶೆಟ್ಟಿಗೆ ನಿಶ್ಚಿತಾರ್ಥವಾಗಿ ಮುಂದಿನ ತಿಂಗಳು 22 ರಂದು ಮದುವೆ ನಿಶ್ಚಯವಾಗಿತ್ತು. ಈ ಸಂದರ್ಭದಲ್ಲಿ ಸಂಬಂಧಿಕರನ್ನೆಲ್ಲಾ ಮಾತನಾಡಿಸಿಕೊಂಡು ಸೇನೆಗೆ ಮರಳಿದ್ದರು.

ಜ.8 ರಂದು ಹಾಸನಕ್ಕೆ ಬರುವುದಾಗಿ ಹೇಳಿದ್ದ ಇವರು, ತದನಂತರ ಜಮ್ಮುವಿನಲ್ಲಿ ಹೆಚ್ಚು ಹಿಮ ಬೀಳುತ್ತಿರುವುದರಿಂದ ಸದ್ಯಕ್ಕೆ ಊರಿಗೆ ಬರಲು ಸಾಧ್ಯವಿಲ್ಲ ಎಂದು ದೂರವಾಣಿ ಕರೆ ಮಾಡಿ ತಿಳಿಸಿದ್ದರು.  ತದನಂತರ ಇವರ ಕರೆ ಪೋಷಕರಿಗೆ ಬಂದಿಲ್ಲ. ಸಂದೀಪ್ ಅವರ ದೂರವಾಣಿ ಕರೆಯನ್ನೇ ನಿರೀಕ್ಷಿಸುತ್ತಿದ್ದ ಕುಟುಂಬಸ್ಥರಿಗೆ ರಾತ್ರಿ ಬಂದ ಕರೆ ಗರಬಡಿದಂತಾಗಿದೆ.
ಸೇನೆಯ ಹಿರಿಯ ಅಧಿಕಾರಿಯೊಬ್ಬರು ಸಂದೀಪ್ ಅವರ ಕುಟುಂಬಕ್ಕೆ ದೂರವಾಣಿ ಕರೆ ಮಾಡಿ ಹಿಮಪಾತದಡಿ ಸಿಲುಕಿ ಸಂದೀಪ್ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮದಲ್ಲಿ ಶೋಕ ಮಡುಗಟ್ಟಿತ್ತು. ಸಂದೀಪ್‍ಶೆಟ್ಟಿ ಮನೆಯಲ್ಲಿ ಪೋಷಕರು, ಬಂಧುಬಳಗ, ಹಿತೈಷಿಗಳು, ಸ್ನೇಹಿತರ ರೋದನ ಮುಗಿಲುಮುಟ್ಟಿತ್ತು.

ಮಾಹಿತಿ ಇಲ್ಲ:

ಹಾಸನದ ಯೋಧ ಸಂದೀಪ್‍ಶೆಟ್ಟಿ ಅವರು ಮೃತಪಟ್ಟಿರುವ ಬಗ್ಗೆ ಸೇನೆಯಿಂದ ಜಿಲ್ಲಾಡಳಿತಕ್ಕೆ ಯಾವುದೇ ಮಾಹಿತಿ ಈವರೆಗೂ ಬಂದಿಲ್ಲ.  ಸೇನೆಯವರು ಕುಟುಂಬಸ್ಥರಿಗೆ ಮಾತ್ರ ವಿಷಯ ತಿಳಿಸಿರುವುದರಿಂದ ಜಿಲ್ಲಾಡಳಿತ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಯೋಧನ ಪಾರ್ಥೀವ ಶರೀರ ಗ್ರಾಮಕ್ಕೆ ಯಾವಾಗ ಬರುತ್ತದೆ ಎಂಬ ಬಗ್ಗೆ ಜಿಲ್ಲಾಡಳಿತವಷ್ಟೆ ಮಾಹಿತಿ ನೀಡಬೇಕಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin