ಒಂಟಿ ಮಹಿಳೆಯ ನೆರವಿಗೆ ಬಂದು ಇಲಾಖೆಯ ಘನತೆ ಹೆಚ್ಚಿಸಿದ ಎಎಸ್‍ಐಗೆ ಬಹುಮಾನ ಘೋಷಣೆ

ಈ ಸುದ್ದಿಯನ್ನು ಶೇರ್ ಮಾಡಿ

Narayana

ಬೆಂಗಳೂರು, ಜ.28- ವಾಹನದ ಪೆಟ್ರೋಲ್ ಖಾಲಿಯಾಗಿ ಜೆಸಿ ನಗರದ ಟಿವಿ ಟವರ್‍ನ ನಿರ್ಜನ ಪರಿಸರದಲ್ಲಿ ಒಂಟಿಯಾಗಿ ನಿಂತಿದ್ದ ಮಹಿಳೆಯ ನೆರವಿಗೆ ಧಾವಿಸಿ ಮಾನವೀಯತೆ ಮೆರೆದು ಇಲಾಖೆಯ ಘನತೆ ಹೆಚ್ಚಿಸಿದ ಕೆಜಿ ಹಳ್ಳಿ ಸಂಚಾರಿ ಪೊಲೀಸ್ ಠಾಣೆಯ ಎಎಸ್‍ಐ ನಾರಾಯಣ ಅವರ ಸೇವೆಯನ್ನು ಮುಕ್ತ ಕಂಠದಿಂದ ಪ್ರಶಂಸಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ನಗದು ಬಹುಮಾನ ಘೋಷಿಸಿದ್ದಾರೆ. ಪೊಲೀಸ್ ಇಲಾಖೆ ಮೇಲೆ ಅಪನಂಬಿಕೆ ಇರುವಂತಹ ಸನ್ನಿವೇಶದಲ್ಲಿ ನಾರಾಯಣ ಅವರಂತಹ ಅಧಿಕಾರಿಗಳು ನಾಗರಿಕರಿಗೆ ನಂಬಿಕೆ ಬರುವಂತಹ, ಮಾನವೀಯತೆ ಮೆರೆಯುವಂತಹ,ಇಲಾಖೆಯ ಗೌರವ ಹೆಚ್ಚಿಸುವಂತಹ ಕೆಲಸ ಮಾಡಿದ್ದಾರೆ. ಅವರ ಕೆಲಸ ಬೇರೆಯವರಿಗೆ ಮಾದರಿಯಾಗಿದೆ. ಇಲಾಖೆಯ ದಕ್ಷತೆ, ನಂಬಿಕೆಯನ್ನು ಹೆಚ್ಚಿಸಿದೆ.

ಅವರ ಈ ಸೇವೆ ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ಪ್ರಶಂಸೆಗೆ ಪಾತ್ರವಾಗಿರುವುದು ನನ್ನ ಗಮನಕ್ಕೆ ಬಂದಿದೆ. ಇವರಿಂದ ಸಹಕಾರ ಪಡೆದವರು ಕೂಡ ಇವರ ಸೇವೆಯನ್ನು ಕೊಂಡಾಡಿದ್ದಾರೆ. ಇತರ ಪೊಲೀಸರಿಗೂ, ನೌಕರರಿಗೂ ಇವರು ಮಾದರಿಯಾಗಿರಲಿ. ಇವರಿಗೆ ಇಲಾಖೆ ವತಿಯಿಂದ 15 ಸಾವಿರ ರೂ. ನಗದು ಬಹುಮಾನ ನೀಡಲು ಪರಮೇಶ್ವರ್ ಮುಂದಾಗಿದ್ದಾರೆ.

Narayana-Police

ನನ್ನ ಕರ್ತವ್ಯ ಮಾಡಿದ್ದೇನೆ ಅಷ್ಟೆ…

ಬೆಂಗಳೂರು, ಜ.28- ಪೊಲೀಸ್ ಇಲಾಖೆಗೆ ಸೇರಿದ ಮೇಲೆ ಒಳ್ಳೆ ಕೆಲಸ ಮಾಡಬೇಕು. ನಾನು ನನ್ನ ಕರ್ತವ್ಯ ನಿರ್ವಹಿಸಿದ್ದೇನೆ ಅಷ್ಟೆ ಎಂದು ಒಂಟಿ ಮಹಿಳೆಗೆ ಸಹಾಯ ಮಾಡಿದ ಕೆಜಿ ಹಳ್ಳಿ ಸಂಚಾರ ಠಾಣೆ ಎಎಸ್‍ಐ ನಾರಾಯಣ ತಿಳಿಸಿದರು.  ಈ ಸಂಜೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಇಲಾಖೆಯಲ್ಲಿ ಇದು ನನ್ನ ಕರ್ತವ್ಯ. ಭಯದಿಂದ ಒಂಟಿಯಾಗಿ ನಿಂತಿದ್ದ ಮಹಿಳೆಗೆ ಚಿಕ್ಕ ಸೇವೆ ಮಾಡಿದ್ದೇನೆ. ಇದರಿಂದ ನನಗೆ ಸಂತೋಷ ಸಿಕ್ಕಿದೆ ಎಂದು ಹೇಳಿದರು. ಫೇಸ್‍ಬುಕ್‍ನಲ್ಲಿ ವಿಚಾರ ಅರಿತ ಹಲವರು ನನ್ನನ್ನು ಸಂಪರ್ಕಿಸಿ ಅಭಿನಂದನೆ ಸಲ್ಲಿಸಿದ್ದಾರೆ. ಇದಕ್ಕಿಂತ ನನಗೆ ಬೇರೆ ಏನು ಬೇಕು ಎಂದು ಹರ್ಷ ವ್ಯಕ್ತಪಡಿಸಿದ ಅವರು, ಒಳ್ಳೆ ಕೆಲಸ ಮಾಡಿದರೆ ಜನ ಗುರುತಿಸುತ್ತಾರೆ ಎನ್ನುವುದಕ್ಕೆ ನಾನೇ ಸಾಕ್ಷಿ ಎಂದರು. ಹಿರಿಯ ಅಧಿಕಾರಿಗಳು ಕೂಡ ನನ್ನನ್ನು ಪ್ರಶಂಸಿಸಿದ್ದಾರೆ. ನನಗೆ ತುಂಬ ಸಂತೋಷವಾಗಿದೆ ಎಂದು ಹೇಳಿದರು.

ರಾತ್ರಿ ಒಂಟಿಯಾಗಿ ಚಳಿಯಲ್ಲಿ ಭಯದಿಂದ ನಡುಗುತ್ತಾ ನಿಂತಿದ್ದ ನಿರ್ಮಲಾ ಅವರನ್ನು ಕಂಡು ತೊಂದರೆಯಲ್ಲಿರಬೇಕೆಂದು ಹತ್ತಿರ ಹೋಗಿ ವಿಚಾರಿಸಿದೆ. ಆಗ ಅವರು ತಮ್ಮ ಸ್ಕೂಟರ್‍ನ ಪೆಟ್ರೋಲ್ ಖಾಲಿಯಾಗಿದೆ. ಪತಿಗೆ ಕರೆ ಮಾಡಿ ಬರುವಂತೆ ತಿಳಿಸಿರುವುದಾಗಿ ಹೇಳಿದರು. ಆಗ ನನ್ನ ಸ್ಕೂಟರ್ ಕೊಟ್ಟು ಮುಂದೆ ಮೇಖ್ರಿ ಸರ್ಕಲ್ ಬಳಿ ಜನ ಇರುವ ಕಡೆ ಹೋಗಿ ನಿಲ್ಲಿ ಎಂದು ಹೇಳಿ ಅವರ ಸ್ಕೂಟರ್‍ನ್ನು ತಳ್ಳಿಕೊಂಡು ಹೋದೆ. ಅಲ್ಲಿಗೆ ಮಹಿಳೆ ನಿರ್ಮಲಾ ಅವರ ಪತಿಯೂ ಬಂದಿದ್ದರು. ದಂಪತಿ ಥ್ಯಾಂಕ್ಸ್ ಹೇಳಿ ಹೋದರು ಎಂದು ಘಟನೆಯನ್ನು ಸ್ಮರಿಸಿದರು.
ಗುರುವಾರ ರಾತ್ರಿ 9.30ರ ಸುಮಾರಿನಲ್ಲಿ ಟಿವಿ ಟವರ್ ಬಳಿ ಮಹಿಳೆಯೊಬ್ಬರು ಸ್ಕೂಟರ್ ನಿಲ್ಲಿಸಿಕೊಂಡು ನಿಂತಿದ್ದನ್ನು ಗಮನಿಸಿದ ಸಂಚಾರ ವಿಭಾಗದ ಎಎಸ್‍ಐ ನಾರಾಯಣ ಅವರು ಮಹಿಳೆ ಬಳಿಗೆ ತೆರಳಿ ವಿಚಾರಿಸಿದ್ದರು.

ಆಕೆಗೆ ತಮ್ಮ ಸ್ಕೂಟರ್ ನೀಡಿ ಜನಸಂದಣಿ ಇರುವ ಮೇಖ್ರಿ ವೃತ್ತದ ಬಳಿಗೆ ಹೋಗಲು ನೆರವು ನೀಡಿ ಅವರ ಸ್ಕೂಟರ್‍ಅನ್ನು ತಳ್ಳಿಕೊಂಡು ಹೋಗಿದ್ದರು. ಮೇಖ್ರಿ ವೃತ್ತಕ್ಕೆ ಮಹಿಳೆಯ ಪತಿಯೂ ಬಂದಿದ್ದು, ಪತ್ನಿಗೆ ಸಹಾಯ ಮಾಡಿದ ಎಎಸ್‍ಐ ಅವರಿಗೆ ಅಭಿನಂದನೆ ಹೇಳಿ ತೆರಳಿದ್ದರು. ಎಎಸ್‍ಐ ಅವರ ಸಹಾಯ ಕುರಿತು ನಿರ್ಮಲಾ ಅವರು ತಮ್ಮ ಫೇಸ್‍ಬುಕ್‍ನಲ್ಲಿ ಹೇಳಿಕೊಂಡಿದ್ದರು. ಇದನ್ನು ನೋಡಿದ ಹಲವರು ನಾರಾಯಣ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ರಾತ್ರಿ ಒಂಟಿಯಾಗಿ ಭಯದಿಂದ ನಿಂತಿದ್ದ ಮಹಿಳೆಗೆ ಸಹಾಯ ಮಾಡಿದ ಎಎಸ್‍ಐ ನಾರಾಯಣ ಅವರು ಮೂಲತಃ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಬೈರಾಪಟ್ಟಣದವರಾಗಿದ್ದು, ಮಹಾಲಕ್ಷ್ಮಿ ಲೇಔಟ್‍ನ ಪೊಲೀಸ್ ಕ್ವಾಟ್ರಸ್‍ನಲ್ಲಿ ವಾಸವಿದ್ದಾರೆ. ಸದ್ಯ ಕೆಜಿ ಹಳ್ಳಿ ಸಂಚಾರ ಠಾಣೆಯಲ್ಲಿ ಎಎಸ್‍ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin