ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಮಾತ್ರ ಐಟಿ ದಾಳಿಗಳು ನಡೆಯುತ್ತಿವೆ : ಮೋದಿ ವಿರುದ್ಧ ಸಿದ್ದು ಗುಡುಗು

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah-01

ಬೆಂಗಳೂರು, ಜ.28-ಬಿಜೆಪಿ ಆಡಳಿತ ಇರುವ ರಾಜ್ಯಗಳ ಮೇಲೆ ಆದಾಯ ತೆರಿಗೆ ದಾಳಿ ನಡೆಯುತ್ತಿಲ್ಲ. ಕೇವಲ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳನ್ನು ಗುರಿಯಾಗಿಸಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ. ನಗರದ ಅರಮನೆ ಮೈದಾನದಲ್ಲಿ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಜನವೇದನ ರ್ಯಾಲಿಯಲ್ಲಿ ಮಾತನಾಡಿದ ಅವರು, ಪಂಜಾಬ್, ಹರಿಯಾಣ, ಹಿಮಾಚಲಪ್ರದೇಶ, ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನ ರಾಷ್ಟ್ರಗಳಲ್ಲಿ ಕಪ್ಪು ಹಣವಿದೆ. ಅಲ್ಲಿ ಏಕೆ ಆದಾಯ ತೆರಿಗೆ ದಾಳಿ ನಡೆಯುತ್ತಿಲ್ಲ. ಕೇವಲ ಕರ್ನಾಟಕ, ತಮಿಳುನಾಡನ್ನು ಮಾತ್ರ ಏಕೆ ಗುರಿಯಾಗಿಸಿಕೊಳ್ಳಲಾಗಿದೆ. ಅದರಲ್ಲೂ ರಾಜಕೀಯ ಪ್ರೇರಿತ ದಾಳಿಗಳು ನಡೆಯುತ್ತಿರುವುದು ಖಂಡನೀಯ ಎಂದು ಹೇಳಿದರು.

ಭ್ರಷ್ಟಾಚಾರ ತಡೆಯಲು ನಿಯಂತ್ರಿಸಲು ನಮ್ಮ ವಿರೋಧವಿಲ್ಲ. ತಪ್ಪು ಮಾಡಿದವರನ್ನು ಹಿಡಿದು ಜೈಲಿಗೆ ಹಾಕಿ. ಆದರೆ ರಾಜಕೀಯ ಪ್ರೇರಿತ ಆದಾಯ ತೆರಿಗೆ ದಾಳಿಯಿಂದ ಕಪ್ಪು ಹಣ ನಿಯಂತ್ರಣವಾಗುತ್ತದೆ, ಭ್ರಷ್ಟಾಚಾರ ಕಡಿಮೆಯಾಗಲಿದೆ ಎಂದು ಭಾವಿಸಿದರೆ ಅದು ಭ್ರಮನಿರಸನವಾಗುತ್ತದೆ. ನೋಟು ಅಮಾನೀಕರಣದ ನಂತರ ಭ್ರಷ್ಟಾಚಾರ ನಿಂತು ಹೋಗಿಲ್ಲ. ದೇಶದಲ್ಲಿ ದಿನನಿತ್ಯ ಭ್ರಷ್ಟಾಚಾರ ನಡೆಯುತ್ತಲೇ ಇದೆ. ಅಗತ್ಯ ವಸ್ತುಗಳ ಬೆಲೆ ನಿಯಂತ್ರಣಕ್ಕೆ ಬಂದಿಲ್ಲ. ಮೋದಿ ಪ್ರಜಾಪ್ರಭುತ್ವವಾದಿಯಲ್ಲ, ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿದ್ದಾರೆ.
100 ದಿನಗಳಲ್ಲಿ ಸ್ವಿಸ್ ಬ್ಯಾಂಕ್‍ನಿಂದ ಕಪ್ಪು ಹಣ ತರುತ್ತಾನೆ. ಬಡವರ ಖಾತೆಗೆ 15 ಲಕ್ಷ ಜಮಾ ಮಾಡುತ್ತೇನೆ ಎಂದು ಹೇಳಿದ್ದ ಮೋದಿ ಎರಡೂವರೆ ವರ್ಷವಾದರೂ 15 ಪೈಸೆಯನ್ನೂ ಹಾಕಿಲ್ಲ.

ಇವರಿಗೆ ಮಾನ-ಮರ್ಯಾದೆ ಇದೆಯೇ?

ಮೋದಿ ಕ್ರಮವನ್ನು ಹೊಗಳಿದ ಮಾಧ್ಯಮಗಳಿಗೆ ಈಗ ವಾಸ್ತವ ಅರ್ಥವಾಗಿದೆ. ಟೀಕಿಸಲಾರಂಭಿಸಿವೆ. ದೇಶದಲ್ಲಿ 17.9 ಲಕ್ಷ ಕೋಟಿ ನೋಟುಗಳು ಚಲಾವಣೆಯಲ್ಲಿವೆ. ಅದರಲ್ಲಿ 14.55 ಲಕ್ಷ ಕೋಟಿ 500 ಮತ್ತು 1000 ಮುಖಬೆಲೆಯ ನೋಟುಗಳಾಗಿವೆ.  1946 ಮತ್ತು 1978ರಲ್ಲಿ ನೋಟುಗಳನ್ನು ಅಮಾನ್ಯ ಮಾಡಲಾಗಿತ್ತು. 1978ರಲ್ಲಿ 500, 1000, 10,000 ಮುಖಬೆಲೆಯ ಪ್ರಮಾಣ ಶೇ.2ರಷ್ಟಿತ್ತು. ಹೆಚ್ಚು ಹಾನಿಯಾಗಲಿಲ್ಲ. ಆದರೆ ಈಗ ಶೇ.86ರಷ್ಟು ಚಲಾವಣೆ ಇದ್ದ ನೋಟುಗಳನ್ನು ಏಕಾಏಕಿ ಅಮಾನ್ಯ ಮಾಡಲಾಗಿದೆ. ಇದರಿಂದ ಜನಸಾಮಾನ್ಯರು ತೊಂದರೆ ಸಿಲುಕಿದ್ದಾರ. ಅಗತ್ಯದಷ್ಟು ನೋಟುಗಳನ್ನು ಮುದ್ರಣ ಮಾಡಿ ಪೂರೈಸದೆ ಇರುವುದರಿಂದ ಎಟಿಎಂ, ಬ್ಯಾಂಕ್‍ಗಳ ಮುಂದೆ ಜನ ಸಾಲುಗಟ್ಟಿ ನಿಲ್ಲಬೇಕಾಯಿತು. ಇದನ್ನು ಅಚ್ಛೆ ದಿನ್ ಎಂದು

ಕರೆಯಲು ಸಾಧ್ಯವೇ?

ನಮ್ಮ ದೇಹದ ಶೇ.86ರಷ್ಟು ರಕ್ತವನ್ನು ತೆಗೆದು ಹಂತ ಹಂತವಾಗಿ ಶೇ.5ರಷ್ಟು ರಕ್ತವನ್ನು ಪೂರೈಸಿದರೆ ಜೀವ ಉಳಿಯಲು ಸಾಧ್ಯವಿಲ್ಲ ಎಂದು ಜೆಎನ್‍ಯುನ ಅರ್ಥಶಾಸ್ತ್ರ ಉಪ ಅಧ್ಯಾಪಕರು ಹೇಳಿದ್ದಾರೆ. ಅಮತ್ರ್ಯಸೇನ್, ಅರುಣ್‍ಕುಮಾರ್, ಮನ್‍ಮೋಹನ್‍ಸಿಂಗ್‍ರಂತಹ ಆರ್ಥಿಕ ತಜ್ಞರು ನೋಟು ಅಮಾನ್ಯವನ್ನು ವಿರೋಧಿಸಿದ್ದಾರೆ. ಬಲಾಢ್ಯ ಶಕ್ತಿಗಳನ್ನು ಎದುರು ಹಾಕಿಕೊಂಡಿದ್ದೇನೆ. ನನ್ನ ಪ್ರಾಣಕ್ಕೆ ಅಪಾಯವಿದೆ ಎಂದು ಕಣ್ಣೀರು ಹಾಕಿ ಜನರನ್ನು ಮೋಸಗೊಳಿಸುವ ಪ್ರಯತ್ನವನ್ನು ಮೋದಿ ಮಾಡಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಕರ್ನಾಟಕ ಸರ್ಕಾರವನ್ನು ಭ್ರಷ್ಟ ಸರ್ಕಾರವೆಂದು ಈ ಹಿಂದೆ ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಟೀಕಿಸಿದ್ದರು. ಆ ವೇದಿಕೆಯಲ್ಲಿ ಅಕ್ಕಪಕ್ಕ ಯಡಿಯೂರಪ್ಪ-ಈಶ್ವರಪ್ಪ ಇದ್ದರು. ರೆಡ್ಡಿ ಬ್ರದರ್ಸ್, ಶ್ರೀರಾಮುಲು, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅಂಥವರು ಕುಳಿತಿದ್ದರು. ನಮ್ಮ ಸರ್ಕಾರ ಮೂರು ಮುಕ್ಕಾಲು ವರ್ಷದಲ್ಲಿ ಒಂದು ಭ್ರಷ್ಟಾಚಾರ ನಡೆಸಿಲ್ಲ, ಯಾವುದೇ ಹಗರಣಕ್ಕೆ ಸಿಲುಕಿಲ್ಲ. 2018ರಲ್ಲಿ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದರು. ತಮ್ಮ ಭಾಷಣದುದ್ದಕ್ಕೂ ಮೋದಿ ಕ್ರಮವನ್ನು, ಕೇಂದ್ರ ಸರ್ಕಾರವನ್ನು ಹಿಗ್ಗಾಮುಗ್ಗಾ ಟೀಕಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin