ಮುಕ್ತ ಮಾರುಕಟ್ಟೆಗೆ ಬಿಳಿ ಸೀಮೆಎಣ್ಣೆ ಹಾಗೂ ರಿಯಾಯಿತಿ ದರದಲ್ಲಿ ಹೆಸರುಕಾಳು

ಈ ಸುದ್ದಿಯನ್ನು ಶೇರ್ ಮಾಡಿ

Hesaru-Kalu----n

ಬೆಂಗಳೂರು,ಜ.30- ರಾಜ್ಯಾದ್ಯಂತ ಮುಕ್ತ ಮಾರುಕಟ್ಟೆಯಲ್ಲಿ ಬಿಳಿ ಸೀಮೆಎಣ್ಣೆ ಹಾಗೂ ಬಿಪಿಎಲ್ ಪಡಿತರ ವ್ಯವಸ್ಥೆಯಡಿ ರಿಯಾಯಿತಿ ದರದಲ್ಲಿ ಹೆಸರುಕಾಳು ವಿತರಣೆಗೆ ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಇಂದಿಲ್ಲಿ ತಿಳಿಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಾಳೆ ಬೆಳಗ್ಗೆ 9,30ಕ್ಕೆ ವಿಧಾನಸೌಧದ ಬಾಂಕ್ವೆಟ್ ಹಾಲ್‍ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಈ ವಿನೂತನ ವ್ಯವಸ್ಥೆಗೆ ಮುಖ್ಯಮಂತ್ರಿಗಳು ಚಾಲನೆ ನೀಡುತ್ತಿದ್ದು, ಇದರಿಂದ ರಾಜ್ಯದ ಜನತೆಗೆ ಹೆಚ್ಚಿನ ಉಪಯೋಗವಾಗಲಿದೆ ಎಂದರು.

ಮುಕ್ತ ಮಾರುಕಟ್ಟೆಯಲ್ಲಿ ಒಂದು ಲೀಟರ್ ಬಿಳಿ ಸೀಮೆಎಣ್ಣೆಯನ್ನು 17 ರೂ.ನಂತೆ ಒದಗಿಸಲು ಕ್ರಮ ವಹಿಸಲಾಗಿದ್ದು ಜೊತೆಗೆ ಬಿಪಿಎಲ್ ಪಡಿತರ ವ್ಯವಸ್ಥೆಯಲ್ಲಿ ಈಗಾಗಲೇ ಅಕ್ಕಿ, ಉಪ್ಪು, ಎಣ್ಣೆ ನೀಡುತ್ತಿರುವಂತೆ ಪ್ರತಿ ಕುಟುಂಬಕ್ಕೆ ಒಂದು ಕೆಜಿ ಹೆಸರುಕಾಳನ್ನು 30 ರೂ.ನಂತೆ ವಿತರಿಸಲಾಗುವುದು. ಒಂದು ತಿಂಗಳು ಹೆಸರುಕಾಳು, ಮತ್ತೊಂದು ತಿಂಗಳು ತೊಗರಿಬೇಳೆ ವಿತರಿಸಲು ಕ್ರಮ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ಅಪೌಷ್ಟಿಕತೆ ತಡೆಯಲು ಪಡಿತರ ವ್ಯವಸ್ಥೆ ದ್ವಿದಳಧಾನ್ಯ ವಿತರಣೆಗೆ ರಾಜ್ಯ ಸರ್ಕಾರ ಮುಂದಾಗಿದ್ದು , ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಧಾನ್ಯ ಪಡೆಯುವ ಕೂಪನ್‍ಗಳನ್ನು ವಿತರಿಸುವ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಬೆಂಗಳೂರು ಒನ್ ಸೇವಾ ಕೇಂದ್ರ, ಗ್ರಾಪಂಗಳಲ್ಲಿ ಕೂಪನ್ ನೀಡಲಾಗುತ್ತಿದೆ ಎಂದರು.  ಮಾರ್ಚ್‍ವರೆಗೂ ನ್ಯಾಯಬೆಲೆ ಅಂಗಡಿಗಳಿಗೆ ಕೂಪನ್ ವಿತರಿಸಲಾಗಿದೆ ಎಂದ ಅವರು, ಎಪಿಎಲ್ ಪಡಿತರ ಚೀಟಿ ಪಡೆಯುವ ವ್ಯವಸ್ಥೆಗೆ ಚಾಲನೆ ನೀಡಲಾಗಿದ್ದು, ಅರ್ಜಿ ಸಲ್ಲಿಸಿದ 15 ದಿನದೊಳಗೆ ಅವರ ಮನೆ ಬಾಗಿಲಿಗೆ ಎಪಿಎಲ್ ಪಡಿತರ ಚೀಟಿ ತಲುಪಲಿದೆ. ಇದರ ಅರ್ಜಿ ಸಲ್ಲಿಸಿಕೆ ಪ್ರಕ್ರಿಯೆಯನ್ನು ಸಕಾಲ ವ್ಯಾಪ್ತಿಗೆ ತಂದಿದ್ದು , ಕಾಲಮಿತಿಯಲ್ಲೇ ಪಡಿತರ ಚೀಟಿ ನೀಡುವ ವ್ಯವಸ್ಥೆಗೂ ಚಾಲನೆ ನೀಡಲಾಗಿದೆ ಎಂದು ವಿವರಿಸಿದರು.

ಹರಿಯಾಣದ ಅಧ್ಯಯನ ತಂಡ: ಹರಿಯಾಣ ರಾಜ್ಯದ ಶಾಸಕರು ಹಾಗೂ ಅಧಿಕಾರಿಗಳ 11 ಜನರನ್ನೊಳಗೊಂಡ ತಂಡ ರಾಜ್ಯದಲ್ಲಿ ಅಧ್ಯಯನ ನಡೆಸಲು ಆಗಮಿಸಿದೆ ಎಂದರು.
ಈ ತಂಡ ಎಪಿಎಲ್ ಹಾಗೂ ಬಿಪಿಎಲ್ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸುವ ವಿಧಾನ, ಅದನ್ನು ವಿತರಿಸುವ ವಿಧಾನ ಸೇರಿದಂತೆ ಎಲ್ಲ ರೀತಿಯ ವ್ಯವಸ್ಥೆಯ ಸಮಗ್ರ ಅಧ್ಯಯನ ನಡೆಸಿದೆ ಎಂದು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin