ಎಸ್‍ಎಂಕೆಗೆ ರಾಷ್ಟ್ರಪತಿ ಪಟ್ಟ ಒಲಿಯುವುದೇ..?

ಈ ಸುದ್ದಿಯನ್ನು ಶೇರ್ ಮಾಡಿ

Krishna-01

ಬೆಂಗಳೂರು, ಜ.31- ನಾಲ್ಕೂವರೆ ದಶಕಗಳ ಕಾಂಗ್ರೆಸ್ ಸಂಬಂಧಕ್ಕೆ ವಿದಾಯ ಹೇಳಿರುವ ಕೇಂದ್ರದ ಮಾಜಿ ಸಚಿವ, ರಾಜ್ಯದ ಹಿರಿಯ ರಾಜಕಾರಣಿ ಹಾಗೂ ಅತ್ಯುತ್ತಮ ಸಂಸದೀಯ ಪಟು ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಎಸ್.ಎಂ. ಕೃಷ್ಣ ಅವರಿಗೆ ಹೊಸ ಜವಾಬ್ದಾರಿ ಸಿಗಲಿದೆಯೇ.? ತಕ್ಷಣವೇ ಇದಕ್ಕೆ ಹೌದು ಎನ್ನಲು ಸಾಧ್ಯವಿಲ್ಲದಿದ್ದರೂ, ಕೃಷ್ಣ ಅವರಿಗೆ ಕೇಂದ್ರದಲ್ಲಿ ಅತ್ಯಂತ ಮಹತ್ವದ ಸ್ಥಾನ ಸಿಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದು ರಾಷ್ಟ್ರಪತಿಯಿಂದ ಹಿಡಿದು ಉಪ ರಾಷ್ಟ್ರಪತಿಯ ಸ್ಥಾನದವರೆಗೂ ಎಂಬುದು ಪ್ರಚಲಿತದಲ್ಲಿರುವ ಮಾತು.
ಕಾಂಗ್ರೆಸ್ ಬಿಟ್ಟಿದ್ದರೂ ಅವರು ಪ್ರಾದೇಶಿಕ ಪಕ್ಷ ಕಟ್ಟುವಂತಹ ದುಸ್ಸಾಹಸಕ್ಕೆ ಕೈ ಹಾಕಲಾರರು. ಈಗಾಗಲೇ ಹಲವರು ಪಕ್ಷ ಕಟ್ಟಿ ಸೋತಿರುವ ನಿದರ್ಶನಗಳು ತಮ್ಮ ಕಣ್ಣ ಮುಂದೆ ಇರುವಾಗ, ಇರಳು ಕಂಡ ಬಾವಿಯಲ್ಲಿ ಹಗಲನಲ್ಲಿ ಬೀಳುವಂತಹ ರಾಜಕಾರಣಿಯಲ್ಲ.ಕೂಡಲೇ ಬಿಜೆಪಿಯನ್ನು ಅಪ್ಪಿಕೊಳ್ಳುವಂತಹ ಸ್ಥಿತಿಯಲ್ಲಿ ಕೃಷ್ಣ ಇಲ್ಲದಿದ್ದರೂ ತಮ್ಮನ್ನು ಕಡೆಗಣಿಸಿದ ಪಕ್ಷದ ವಿರುದ್ದ ಸುಮ್ಮನಿರುವ ಜಾಯಮಾನ ಅವರದ್ದಲ್ಲ.

ವಯಸ್ಸಗಿದೆ ಎಂಬ ಒಂದೇ ಕಾರಣಕ್ಕಾಗಿ ಮೂಲೆ ಗುಂಪು ಮಾಡಿರುವ ಕಾಂಗ್ರೆಸ್ ವಿರುದ್ದ ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ನೊಣ ತಿಂದು ಜಾತಿ ಕೆಡಿಸಿಕೊಂಡರು ಎಂಬ ನಾಣ್ಣುಡಿಯಂತೆ ತಾವು ನಂಬಿದ್ದ ತತ್ವ-ಸಿದ್ಧಾಂತಗಳಿಗೆ ವಿರುದ್ಧವಾಗಿ ಬಿಜೆಪಿಯನ್ನು ಸೇರಿಕೊಳ್ಳುವ ಮನಸ್ಥಿತಿಯಲ್ಲೂ ಅವರಿಲ್ಲ. ಹಾಗೊಂದು ವೇಳೆ ಕಮಲ ಮುಡಿಗೇರಿಸಿಕೊಂಡರೆ ಉನ್ನತ ಹುದ್ದೆ ಪಡೆಯುವ ಸಲುವಾಗಿಯೇ ಪಕ್ಷ ಬಿಟ್ಟರೆಂಬ ಅಪಕೀರ್ತಿಯೂ ಬರಲಿದೆ ಎಂಬ ಆತಂಕ ಮಾಡುತ್ತಿದೆ.
ಆದರೂ ಸಕ್ರಿಯ ರಾಜಕಾರಣದಲ್ಲಿರಬೇಕಾದರೆ ಯಾವುದಾದರೊಂದು ಪಕ್ಷ ಸೇರಲೇಬೇಕೆಂಬ ದೃಢ ಸಂಕಲ್ಪ ಮಾಡಿರುವ ಮನಸ್ಥಿತಿಯಲ್ಲಿದ್ದಾರೆ ಕೃಷ್ಣ. ಇನ್ನು ಜೆಡಿಎಸ್ ಪ್ರಾದೇಶಿಕ ಪಕ್ಷವಾಗಿದ್ದರೂ ಅದರ ಶಕ್ತಿ ಏನೆಂಬುದರ ಅರಿವು ಅವರಿಗಿದೆ. ಹೀಗಾಗಿ ಕೊನೆ ಕ್ಷಣದಲ್ಲಿ ಬಿಜೆಪಿ ಅಪ್ಪಿಕೊಂಡರೂ ಆಶ್ಚರ್ಯವಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಉನ್ನತ ಹುದ್ದೆ ಸಾಧ್ಯತೆ:

ಇನ್ನು ಕಾಂಗ್ರೆಸ್ ತೊರೆದಿರುವ ಕೃಷ್ಣ ಅವರಿಗೆ ರಾಷ್ಟ್ರಪತಿಯಿಂದ ಉಪರಾಷ್ಟ್ರಪತಿ ಹುದ್ದೆವರೆಗೂ ನೀಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಜುಲೈ ತಿಂಗಳ ಅಂತ್ಯಕ್ಕೆ ಹಾಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಧಿಕಾರಾವಧಿ ಮುಗಿಯಲಿದೆ. ಸದ್ಯದ ಸ್ಥಿತಿಯಲ್ಲಿ ಅವರು ಇನ್ನೊಂದು ಅವಧಿಗೆ ಮುಂದುವರಿಯುವ ಲಕ್ಷಣಗಳು ಕಂಡುಬರುತ್ತಿಲ್ಲ. ಈಗಾಗಲೇ ರಾಷ್ಟ್ರಪತಿ ಭವನದಿಂದ ನಿರ್ಗಮಿಸುವ ಸುಳಿವನ್ನು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ.

ಇದೇ ರೀತಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರ ಅಧಿಕಾರಾವಧಿಯು ಆಗಸ್ಟ್‍ಗೆ ಕೊನೆಗೊಳ್ಳಲಿದೆ. ದೇಶದಲ್ಲೇ ಅತಿ ಉನ್ನತವಾದ ಈ ಹುದ್ದೆಯನ್ನು ಅಲಂಕರಿಸಲು ನಾನಾ ಹೆಸರುಗಳು ಈಗಾಗಲೇ ಚಾಲ್ತಿಯಲ್ಲಿವೆ. ಬಿಜೆಪಿ ಹಿರಿಯ ನಾಯಕ ಲಾಲ್‍ಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಷಿ ಹೆಸರುಗಳು ರಾಷ್ಟ್ರಪತಿ ಹುದ್ದೆಗೆ ಕೇಳಿಬಂದರೆ, ಉಪರಾಷ್ಟ್ರಪತಿ ಹುದ್ದೆಗೆ ಸಂಘ ಪರಿವಾರದವರ ಹೆಸರುಗಳು ಹರಿದಾಡುತ್ತಿವೆ.

ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ವಿರುದ್ಧ ಆಗಾಗ ಗುಟುರು ಹಾಕುವ ಅಡ್ವಾಣಿಯವರನ್ನು ರಾಷ್ಟ್ರಪತಿ ಸ್ಥಾನದಲ್ಲಿ ಕೂರಿಸಲು ಮನಸ್ಸಿಲ್ಲ. ಒಂದು ವೇಳೆ ಪಕ್ಷದ ವರಿಷ್ಠರು ಮತ್ತು ಆರ್‍ಎಸ್‍ಎಸ್ ನಾಯಕರು ಪಟ್ಟು ಹಿಡಿದರೆ ಒಪ್ಪಿಕೊಳ್ಳದೆ ಬೇರೆ ದಾರಿಯೂ ಇಲ್ಲ. ಹಾಗೊಂದು ವೇಳೆ ನಾನು ರಾಷ್ಟ್ರಪತಿ ಸ್ಥಾನದ ಆಕಾಂಕ್ಷಿಯಲ್ಲ ಎಂದು ಅಡ್ವಾಣಿ ಸ್ಪಷ್ಟಪಡಿಸಿದರೆ ಕೃಷ್ಣ ಹೆಸರನ್ನು ತಳ್ಳಿಹಾಕುವಂತಿಲ್ಲ.

ವಿದೇಶದಲ್ಲಿ ವ್ಯಾಸಂಗ, ಅಪಾರ ಜ್ಞಾನ, ಇಂಗ್ಲಿಷ್ ಭಾಷೆ ಮೇಲೆ ಹಿಡಿತ, ರಾಜಕೀಯ ಅನುಭವಗಳೇ ರಾಷ್ಟ್ರಪತಿ ಹುದ್ದೆಗೆ ಅವರನ್ನು ತಂದು ಕೂರಿಸಿದರೂ ಅಚ್ಚರಿಯಿಲ್ಲ.  ಈಗಿನ ಸ್ಥಿತಿಗತಿಯಲ್ಲಿ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗುವ ಲಕ್ಷಣಗಳಿಲ್ಲ. ಬಿಜೆಪಿ ಅನೇಕ ರಾಜ್ಯಗಳಲ್ಲಿ ಸ್ವಂತ ಬಲದ ಮೇಲೆ ಅಧಿಕಾರದಲ್ಲಿದ್ದರೂ ಮೈತ್ರಿ ಪಕ್ಷಗಳ ಬೆಂಬಲ ಬೇಕೇಬೇಕು.

ಮಾರ್ಚ್ ತಿಂಗಳ ಎರಡನೆ ವಾರದಲ್ಲಿ ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ಸಹಜವಾಗಿ ರಾಷ್ಟ್ರಪತಿ ಚುನಾವಣೆ ಗರಿಗೆದರುತ್ತದೆ. ಕೃಷ್ಣ ಸಮ್ಮತಿಸಿದರೆ ಅವರನ್ನು ರಾಷ್ಟ್ರಪತಿ ಇಲ್ಲವೆ ಉಪರಾಷ್ಟ್ರಪತಿ ಹುದ್ದೆಯ ಅಭ್ಯರ್ಥಿಯನ್ನಾಗಿ ಮಾಡುವ ಲೆಕ್ಕಾಚಾರ ನರೇಂದ್ರಮೋದಿ ತಲೆಯಲ್ಲಿದೆ. ಆ ಮೂಲಕ ಒಂದೇ ಕಲ್ಲಿನಲ್ಲಿ ಹಲವು ಹಕ್ಕಿ ಹೊಡೆಯುವುದು ಈ ಚಾಣಾಕ್ಷನ ಲೆಕ್ಕಾಚಾರ.

ಕೃಷ್ಣ ಅವರಿಗೆ ಸೂಕ್ತ ಸ್ಥಾನಮಾನ ನೀಡಿದರೆ ರಾಜ್ಯದಲ್ಲಿ ಬಿಜೆಪಿಗೆ ಹೆಚ್ಚಿನ ಶಕ್ತಿ ಬರುವುದರ ಜತೆಗೆ ಒಕ್ಕಲಿಗರ ಮತಗಳನ್ನು ಸೆಳೆಯಬಹುದೆಂಬ ಲೆಕ್ಕಾಚಾರ ಇದರಲ್ಲಿ ಅಡಗಿದೆ.
ಇನ್ನು ಕೃಷ್ಣ ಅಭ್ಯರ್ಥಿಯಾದರೆ ಅವರನ್ನು ಬೆಂಬಲಿಸಲು ಕೆಲವು ಪ್ರಾದೇಶಿಕ ಪಕ್ಷಗಳು ಒಪ್ಪಿಕೊಳ್ಳುವ ಸಾಧ್ಯತೆಯಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್‍ಸಿಪಿ, ಆಂಧ್ರದಲ್ಲಿ ಟಿಡಿಪಿ, ತೆಲಂಗಾಣದಲ್ಲಿ ಆಡಳಿತಾರೂಢ ಟಿಆರ್‍ಎಸ್, ತಮಿಳುನಾಡಿನಲ್ಲಿ ಎಐಎಡಿಎಂಕೆ, ಜೆಡಿಯು, ಆರ್‍ಜೆಡಿ, ಟಿಎಂಸಿ, ಎಸ್‍ಪಿ ಸೇರಿದಂತೆ ಬಹುತೇಕರ ಬೆಂಬಲವೂ ಆವರಿಗೆ ಸಿಗಲಿದೆ.
ಈ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡೇ ಮೋದಿ ಕೃಷ್ಣ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin