ಮಹಾಮಸ್ತಕಾಭಿಷೇಕ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಹಾಸನಕ್ಕೆ ನೇರ ರೈಲು ಸಂಪರ್ಕ

ಈ ಸುದ್ದಿಯನ್ನು ಶೇರ್ ಮಾಡಿ

Hassan-New-trains
ಶ್ರವಣಬೆಳಗೊಳ, ಫೆ.1– ಬೆಂಗಳೂರಿನಿಂದ ಹಾಸನಕ್ಕೆ ನೇರ ರೈಲು ಸಂಪರ್ಕ ಕಲ್ಪಿಸುವುದರಿಂದ ಈ ಭಾಗದ ಜನರಿಗೆ ಹಾಗೂ 2018ರ ಫೆಬ್ರವರಿಯಲ್ಲಿ ಜರುಗಲಿರುವ ಮಹಾಮಸ್ತಕಾಭಿಷೇಕಕ್ಕೆ ದೇಶದ ನಾನಾ ಭಾಗಗಳಿಂದ ಆಗಮಿಸುವ ಪ್ರವಾಸಿಗರಿಗೆ ಅನುಕೂಲವಾಗಲಿದೆ ಎಂದು ಕೇಂದ್ರ ರೈಲ್ವೆ ಇಲಾಖೆಯ ಬೆಂಗಳೂರು ವಿಭಾಗದ ಹಿರಿಯ ವಿಭಾಗೀಯ ಪರಿಚಾಲನಾ ಪ್ರಭಂದಕ ಗೋಪಿನಾಥನ್ ಅಭಿಪ್ರಾಯಪಟ್ಟರು.  ಶ್ರವಣಬೆಳಗೊಳ ರೈಲ್ವೆ ನಿಲ್ಲಾಣಕ್ಕೆ ಭೇಟಿ ನೀಡಿ ರೈಲು ನಿಲ್ದಾಣ, ಹಳಿ, ಸಿಗ್ನಲ್ ಹಾಗೂ ಮೂಲಭೂತ ವ್ಯವಸ್ಥೆಗಳ ಪರಿಶೀಲನೆ ನಡೆಸಿದ ಅವರು, ನಂತರ ಶ್ರೀಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರೊಂದಿಗೆ ಸಮಾಲೋಚನೆ ನಡೆಸಿದರು.

161 ಕಿ.ಮೀ. ಹಾಸನ-ಬೆಂಗಳೂರು ನೇರ ರೈಲ್ವೆ ಸಂಪರ್ಕ ಕೆಲವೇ ದಿನಗಳಲ್ಲಿ ಸಂಚಾರ ಆರಂಭಗೊಳ್ಳಲಿದೆ. ಈಗಾಗಲೇ ಶೇ.95ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಸಿಗ್ನಲಿಂಗ್ ವ್ಯವಸ್ಥೆ ನಡೆಯುತ್ತಿದೆ. ಫೆಬ್ರವರಿ ಎರಡನೇ ವಾರದಲ್ಲಿ ಕೇಂದ್ರ ರೈಲ್ವೆ ಇಲಾಖೆಯ ಸುರಕ್ಷತಾ ಆಯುಕ್ತರು ಬಂದು ಪರಿಶೀಲನೆ ನಡೆಸಿ ಅಂತಿಮ ಆದೇಶ ದೊರೆತ ತಕ್ಷಣ ಸಂಚಾರ ಆರಂಭಗೊಳ್ಳಲಿದೆ ಎಂದು ಮಾಹಿತಿ ನೀಡಿದರು. ಈಗಾಗಲೇ ಗೂಡ್ಸ್ ಗಾಡಿ ಸಂಚಾರ ಪ್ರಾರಂಭಿಸಲಾಗಿದೆ. ಶ್ರವಣಬೆಳಗೊಳ ಧಾರ್ಮಿಕ ಹಾಗೂ ಪ್ರವಾಸಿ ಕೇಂದ್ರವಾಗಿರುವುದರಿಂದ ಪ್ರತಿ ನಿತ್ಯ ಸಾವಿರಾರು ಜನ ಇಲ್ಲಿಗೆ ಆಗಮಿಸುತ್ತಾರೆ. ಆದ್ದರಿಂದ ಈ ರೈಲ್ವೆ ನಿಲ್ದಾಣ ಬಹಳ ಮುಖ್ಯವಾದ ಕೇಂದ್ರವಾಗಿದ್ದು, ಪ್ರಯಾಣಿಕರಿಗೆ ಉತ್ತಮ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು.

ಪ್ರಯಾಣಿಕರು ತಂಗಲು ಉತ್ತಮ ವಸತಿ ವ್ಯವಸ್ಥೆ, ಅಂಗವಿಕಲರಿಗೆ ರ್ಯಾಂಪ್ ವ್ಯವಸ್ಥೆ, ಶುದ್ದ ಕುಡಿಯುವ ನೀರು ಮುಂತಾದ ವ್ಯವಸ್ಥೆ ಕಲ್ಪಿಸಲಾಗಿದ್ದು, ಪ್ರಯಾಣಿಕರ ಆದ್ಯತೆ ಮೇರೆಗೆ ಹೆಚ್ಚಿನ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.  ಶ್ರೀ ಮಠದ ವತಿಯಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಶ್ರವಣಬೆಳಗೊಳದಿಂದ ರೈಲು ನಿಲ್ದಾಣಕ್ಕೆ ಬಸ್ ವ್ಯವಸ್ಥೆ ಮಾಡಲಾಗುವುದು ಎಂದು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ತಿಳಿಸಿದರು.  ಈ ವೇಳೆ ಕೇಂದ್ರ ರೈಲ್ವೆ ಇಲಾಖೆಯ ಪರಿಚಾಲನಾ ನಿರೀಕ್ಷಕರಾದ ಜಾರ್ಜ್ ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin