ಅಭಿವೃದ್ಧಿಯ ಅನುದಾನ ಬಿಡುಗಡೆಯಲ್ಲಿ ಸಿಎಂ ಪಕ್ಷಪಾತ ಧೋರಣೆ : ಎನ್.ಆರ್.ರಮೇಶ್ ಆರೋಪ

ಈ ಸುದ್ದಿಯನ್ನು ಶೇರ್ ಮಾಡಿ

NR-Ramesah

ಬೆಂಗಳೂರು, ಫೆ.3-ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಕಾನೂನು ಬಾಹಿರವಾಗಿ 110ಹಳ್ಳಿಗಳು/ನಗರಸಭೆ/ಪುರಸಭೆ ಪ್ರದೇಶಗಳ ಅಭಿವೃದ್ಧಿಯ ಅನುದಾನದ ಪೈಕಿ 25 ಕೋಟಿ ರೂ.ಗಳನ್ನು ಈ ಪ್ರದೇಶಗಳ ವ್ಯಾಪ್ತಿಗೆ ಒಳಪಡದ ಸಚಿವ ಕೆ.ಜೆ.ಜಾರ್ಜ್ ಅವರ ಸರ್ವಜ್ಞ ನಗರ ಕ್ಷೇತ್ರಕ್ಕೆ ಬಿಡುಗಡೆ ಮಾಡುವ ಮೂಲಕ ಪಕ್ಷಪಾತ ಧೋರಣೆ ಅನುಸರಿಸಿದ್ದಾರೆ. ಈ ಬಗ್ಗೆ ಹೋರಾಟ ಮಾಡುವುದಾಗಿ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಹೇಳಿದ್ದಾರೆ.  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಬಿಎಂಪಿಗೆ ಸೇರ್ಪಡೆಯಾದ 110 ಹಳ್ಳಿಗಳು, 7 ಸಿಎಂಸಿ, 1 ಟಿಎಂಸಿ ಪ್ರದೇಶದ ಅಭಿವೃದ್ಧಿಗೆ ಪ್ರತಿವರ್ಷ ನೀಡುವ 250 ಕೋಟಿ ವಿಶೇಷ ಅನುದಾನದಲ್ಲಿ ನಗರಾಭಿವೃದ್ಧಿ ಸಚಿವ ಜಾರ್ಜ್ ಅವರು ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರಕ್ಕೆ 25 ಕೋಟಿ ರೂ.ಗಳ ಅನುದಾನವನ್ನು ಕಾನೂನು ಬಾಹಿರವಾಗಿ ಮುಖ್ಯಮಂತ್ರಿಯವರು ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಿದರು.

ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಯಾದಂತಹ ಪ್ರದೇಶಗಳ ವ್ಯಾಪ್ತಿಗೆ ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರ ಸೇರದಿದ್ದರೂ 25 ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿರುವ ಅವರು, ಇದರ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ ಹೇಳಿದ್ದಾರೆ.  9 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ 110 ಹಳ್ಳಿಗಳು, 7 ಸಿಎಂಸಿ ಮತ್ತು 1 ಟಿಎಂಸಿ ಪ್ರದೇಶದ ಅಭಿವೃದ್ಧಿಗೆ ರಾಜ್ಯ ಸರ್ಕಾರ 250 ಕೋಟಿ ರೂ. ವಿಶೇಷ ಅನುದಾನ ನೀಡುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುದಾನವನ್ನು ನಿಷ್ಪಕ್ಷಪಾತವಾಗಿ ಹಂಚಿಕೆ ಮಾಡದೆ ತಾರತಮ್ಯ ಅನುಸರಿಸಿದ್ದಾರೆ ಎಂದು ರಮೇಶ್ ಆರೋಪಿಸಿದರು.  ಯಲಹಂಕ, ಬ್ಯಾಟರಾಯನಪುರ, ದಾಸರಹಳ್ಳಿ, ರಾಜರಾಜೇಶ್ವರಿನಗರ, ಯಶವಂತಪುರ, ಬೆಂಗಳೂರು ದಕ್ಷಿಣ, ಬೊಮ್ಮನಹಳ್ಳಿ, ಕೆ.ಆರ್.ಪುರ ಮತ್ತು ಮಹದೇವಪುರ ವಿಧಾನಸಭಾ ಕ್ಷೇತ್ರಗಳ ಪ್ರದೇಶಗಳನ್ನು ಸೇರಿಸಿ ರಚಿಸಿರುವ ಬಿಬಿಎಂಪಿಯ ಹೊರಭಾಗದ ಅಭಿವೃದ್ಧಿಗೆ ಮೀಸಲಿಡುವ ವಿಶೇಷ ಅನುದಾನಗಳನ್ನು ಈ ವ್ಯಾಪ್ತಿಗೆ ಒಳಪಡದ ಪ್ರದೇಶಗಳಿಗೆ ಬಳಸುವಂತಿಲ್ಲ ಎಂದು 2008ರಲ್ಲಿ ರಾಜ್ಯಪತ್ರದಲ್ಲಿಯೇ ತಿಳಿಸಲಾಗಿದೆ. ಆದರೂ ಇದನ್ನು ಉಲ್ಲಂಘಿಸಿ ಮುಖ್ಯಮಂತ್ರಿಯವರು ಸರ್ವಜ್ಞ ನಗರಕ್ಕೆ 25 ಕೋಟಿ ರೂ.ಗಳನ್ನು ನೀಡಿದ್ದಾರೆ ಎಂದು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin