‘ಕೈ’ಬಿಟ್ಟ ಕೃಷ್ಣ ಕಮಲ ಪಕ್ಷ ಸೇರಿವುದು ಪಕ್ಕಾ : ಖಚಿತಪಡಿಸಿದ ಯಡಿಯೂರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ
Yadiyurappa - Krishna
ಸಂಗ್ರಹ ಚಿತ್ರ

ಕಲಬುರಗಿ, ಫೆ.4- ಕಾಂಗ್ರೆಸ್ ಪಕ್ಷ ತೊರೆದಿರುವ ಕೇಂದ್ರದ ಮಾಜಿ ಸಚಿವ ರಾಜ್ಯದ ಹಿರಿಯ ರಾಜಕಾರಣಿ ಎಸ್.ಎಂ.ಕೃಷ್ಣ ಬಿಜೆಪಿಗೆ ಸೇರುವುದು ಬಹುತೇಕ ಖಚಿತವಾಗಿದ್ದು, ಈ ನಿಟ್ಟಿನಲ್ಲಿ ಅವರ ಜೊತೆ ನಾಳೆ ಮಾತುಕತೆ ನಡೆಸುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಕಳೆದ ಭಾನುವಾರ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಬಳಿಕ ಎಸ್.ಎಂ.ಕೃಷ್ಣ ಯಾವ ಪಕ್ಷ ಸೇರಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿತ್ತು. ಇದೀಗ ಯಡಿಯೂರಪ್ಪ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳುವ ಮೂಲಕ ಇನ್ನಷ್ಟು ಕುತೂಹಲ ಕೆರಳಿಸಿದ್ದಾರೆ.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷ್ಣ ಅವರನ್ನು ಕರೆತರುವ ಪ್ರಯತ್ನಗಳು ಮುಂದುವರೆದಿವೆ. ಪಕ್ಷದ ಮುಖಂಡ ಆರ್.ಅಶೋಕ್ ಅವರ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ರಾಷ್ಟ್ರೀಯ ನಾಯಕರು ಕೂಡ ಮಾತುಕತ ನಡೆಸುವಂತೆ ಸೂಚನೆ ನೀಡಿದ್ದಾರೆ ಎಂದು ಹೇಳಿದರು.

ರಾಜ್ಯ ಕಂಡ ಅತ್ಯಂತ ಹಿರಿಯ ರಾಜಕಾರಣಿಯಾಗಿರುವ ಕೃಷ್ಣ ಬಿಜೆಪಿಗೆ ಬಂದರೆ ಆನೆ ಬಲ ಬರುತ್ತದೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ಒಪ್ಪಿಕೊಂಡು ಯಾರೇ ಬಂದರೂ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಿದ್ದೇವೆ. ಸ್ವತಃ ಕೃಷ್ಣ ಅವರೇ ಅನೇಕ ಸಂದರ್ಭಗಳಲ್ಲಿ ಮೋದಿಯವರ ನಾಯಕತ್ವವನ್ನು ಪ್ರಶಂಸಿಸಿದ್ದಾರೆ ಎಂದರು. ವರಿಷ್ಠರ ಸೂಚನೆಯಂತೆ ನಾನು ಅವರ ಜೊತೆ ಮಾತುಕತೆ ನಡೆಸುತ್ತೇನೆ. ಪಕ್ಷಕ್ಕೆ ಸೇರ್ಪಡೆಯಾಗುವಂತೆ ಮನವಿ ಮಾಡಲಾಗುವುದು ಅಂತಿಮವಾಗಿ ಅವರೇ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

ಬಗೆಹರಿದ ಗೊಂದಲ:

ಪಕ್ಷದಲ್ಲಿ ಉಂಟಾಗಿದ್ದ ಎಲ್ಲಾ ಸಣ್ಣ ಪುಟ್ಟ ಸಮಸ್ಯೆಗಳು ಬಗೆಹರಿದಿವೆ. ಈಶ್ವರಪ್ಪ-ನಾನು ಪಕ್ಷವನ್ನು ಸಂಘಟಿಸಿ ಅಧಿಕಾರಕ್ಕೆ ತರುವುದು ನಮ್ಮ ಮುಖ್ಯ ಉದ್ದೇಶ. ಸಂಗೊಳ್ಳಿರಾಯಣ್ಣ ಬ್ರಿಗೇಡ್ ಮುಗಿದ ಅಧ್ಯಾಯ ಎಂದು ಹೇಳಿದರು. ಈ ಹಿಂದೆ ರಾಯಣ್ಣ ಬ್ರಿಗೇಡ್‍ನಲ್ಲಿ ಗುರುತಿಸಿಕೊಂಡವರನ್ನು ಕೆಲ ಕಾರಣಗಳಿಂದ ಪಕ್ಷದಿಂದ ಅಮಾನತು ಮಾಡಲಾಗಿತ್ತು. ತಮ್ಮ ನಡವಳಿಕೆಗಳನ್ನು ಸರಿಪಡಿಸಿಕೊಂಡರೆ ಅಮಾನತು ಆದೇಶ ಹಿಂಪಡೆಯುವ ಬಗ್ಗೆ ಆಲೋಚಿಸುವುದಾಗಿ ತಿಳಿಸಿದರು.  ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಿತ್ತು ಹಾಕಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಎಲ್ಲರೂ ಶ್ರಮಿಸಲಿದ್ದೇವೆ. ಇನ್ನು ಮುಂದೆ ಸಣ್ಣಪುಟ್ಟ ಗೊಂದಲಗಳಿಗೆ ಅವಕಾಶ ನೀಡುವುದಿಲ್ಲ ಎಂಬ ಭರವಸೆ ನೀಡಿದರು.

ಆಡಳಿತಾರೂಢ ಕಾಂಗ್ರೆಸ್‍ನಲ್ಲಿ ಹಲವು ಗೊಂದಲಗಳಿದ್ದರೂ ಐದು ವರ್ಷ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತ ಪೂರೈಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಯಾವುದೇ ವೇಳೆ ಚುನಾವಣೆ ಎದುರಾದರೂ ಅದನ್ನು ಸಮರ್ಥವಾಗಿ ಎದುರಿಸಿ ಪಕ್ಷವನ್ನು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ತರುವುದೇ ನಮ್ಮ ಮುಖ್ಯ ಉದ್ದೇಶ ಎಂದು ಯಡಿಯೂರಪ್ಪ ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin