ಸ್ಕೌಟ್ಸ್-ಗೈಡ್ಸ್ ವಿದ್ಯಾರ್ಥಿಗಳಲ್ಲಿ ರಾಷ್ಟ್ರಭಕ್ತಿ ಮೂಡಿಸುತ್ತಿದೆ : ವಜುಭಾಯಿ ವಾಲಾ

ಈ ಸುದ್ದಿಯನ್ನು ಶೇರ್ ಮಾಡಿ

vajubhai-wala

ಬೆಂಗಳೂರು, ಫೆ.3-ಸ್ಕೌಟ್ಸ್ ಮತ್ತು ಗೈಡ್ಸ್ ಸೇರಿದ ವಿದ್ಯಾರ್ಥಿಗಳಲ್ಲಿ ಸೇವಾಮನೋಭಾವದ ಜೊತೆಗೆ ರಾಷ್ಟ್ರಭಕ್ತಿಯನ್ನು ಮೂಡಿಸುತ್ತದೆ ಎಂದು ರಾಜ್ಯಪಾಲ ವಜುಭಾಯಿ ವಾಲಾ ಹೇಳಿದ್ದಾರೆ.  ರಾಜಭವನದಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ಕಬ್ಸ್, ಬುಲ್‍ಬುಲ್ಸ್, ಸ್ಕೌಟ್ಸ್, ಗೈಡ್ಸ್, ರೋವರ್ಸ್ ಮತ್ತು ರೇಂಜರ್ಸ್‍ಗಳಿಗೆ ಚತುರ್ಥ ಚರಣ್, ಹೀರಕ್ ಪಂಕ್ ಮತ್ತು ರಾಜ್ಯ ಪುರಸ್ಕಾರ ಪ್ರಮಾಣ ಪತ್ರಗಳನ್ನು ವಿತರಿಸಿ ಮಾತನಾಡಿದ ಅವರು, ಉತ್ತಮ ಸಮಾಜ ನಿರ್ಮಿಸುವುದು ಪ್ರತಿಯೊಬ್ಬರ ಗುರಿಯಾಗಿರಬೇಕು. ಸಮಾಜದಲ್ಲಿರುವ ರಾಕ್ಷಸೀ ಮನೋಭಾವ, ಕೆಡುಕುಗಳನ್ನು ನಾಶ ಮಾಡಿದರೆ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.

ಕೇವಲ ಶಿಕ್ಷಿತರಾದರೆ ಸಮಾಜ ಉದ್ದಾರವಾಗುವುದಿಲ್ಲ. ವಿದ್ಯೆಯ ಜೊತೆಗೆ ಸಂಸ್ಕಾರ ಕೂಡ ಬೆಳೆಸಿಕೊಂಡಾಗ ಮಾತ್ರ ಸಂಸ್ಕಾರಯುತ ಸಮಾಜ ನಿರ್ಮಾಣವಾಗಲಿದೆ ಎಂದು ಹೇಳಿದರು.  ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಲ್ಲಿ ಮಾನವೀಯ ಸಂಬಂಧ, ಶಿಸ್ತು, ಜವಾಬ್ದಾರಿಗಳನ್ನು ಬೆಳೆಸುತ್ತದೆ. ಇದರೊಂದಿಗೆ ಹೃದಯ ಶ್ರೀಮಂತಿಕೆ, ಸಾಮಾಜಿಕ ಬದ್ಧತೆ, ದೇಶಪ್ರೇಮ, ಪ್ರೀತಿ ವಾತ್ಸಲ್ಯ ಮೂಡಿಸುತ್ತದೆ ಎಂದರು. ಭಾರತ್ ಸ್ಕೌಟ್ಸ್-ಗೈಡ್ಸ್‍ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಮಾತನಾಡಿ, ರಾಜ್ಯದಲ್ಲಿ ಪ್ರಸಕ್ತ 4.5 ಲಕ್ಷ ಸ್ಕೌಟ್ಸ್-ಗೈಡ್ಸ್ ವಿದ್ಯಾರ್ಥಿಗಳಿದ್ದು, ಅವರನ್ನು 10 ಲಕ್ಷಕ್ಕೆ ಏರಿಸುವ ಗುರಿ ಹೊಂದಲಾಗಿದೆ. 5000 ಶಿಕ್ಷಕರು ಸರ್ಕಾರದಿಂದ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಈ ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವಲ್ಲಿ ನಿರತರಾಗಿದ್ದಾರೆ. ಅವರಿಗೆ ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಸ್ಕೌಟ್ಸ್-ಗೈಡ್ಸ್‍ನ ಅಕಾರಿಗಳಾದ ವಿಶ್ವನಾಥ, ಗೀತಾ, ಎಸ್.ಕೆ.ಪ್ರಭಾ ಮತ್ತಿತರರು ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ  ಕಾರ್ಯಕ್ರಮ ನಡೆಯಿತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin