ಸಮಾವೇಶಕ್ಕೆ ಟ್ರ್ಯಾಕ್ಟರ್ ಬಳಕೆ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

ಪಾಂಡವಪುರ, ಫೆ.7- ಜೆಡಿಎಸ್ ಸಮಾವೇಶಕ್ಕೆ ಪುರಸಭೆ ಟ್ರಾಕ್ಟರ್‍ನ್ನು ದುರ್ಬಳಕೆ ಮಾಡಿಕೊಂಡ ಪುರಸಭೆ ಅಧ್ಯಕ್ಷರು ಹಾಗೂ ಅಧಿಕಾರಿ-ಸಿಬ್ಬಂದಿಗಳ ಕ್ರಮ ಖಂಡಿಸಿ ಬಿಜೆಪಿ ಕಾರ್ಯಕರ್ತರು ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಪಟ್ಟಣದ ಪುರಸಭೆ ಕಚೇರಿ ಮುಂದೆ ಜಮಾವಣೆಗೊಂಡ ನೂರಾರು ಬಿಜೆಪಿ ಕಾರ್ಯಕರ್ತರು, ಜೆಡಿಎಸ್ ಸಮಾವೇಶಕ್ಕಾಗಿ ಟ್ರಾಕ್ಟರ್ ದುರ್ಬಳಕೆ ಮಾಡಿದ ಹಿನ್ನೆಲೆಯಲ್ಲಿ ಪುರಸಭೆ ಅಧ್ಯಕ್ಷರು, ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಜೆಡಿಸ್ ಸಮಾವೇಶಕ್ಕೆ ಪುರಸಭೆ ಟ್ರಾಕ್ಟರ್ ಹಾಗೂ ಸಿಬ್ಬಂದಿ ವರ್ಗದವರನ್ನು ಕಳುಹಿಸಲು ನಿಮಗೆ ಅಧಿಕಾರ ಕೊಟ್ಟವರ್ಯಾರು? ಎಂದು ಪ್ರಶ್ನಿಸಿದ ಬಿಜೆಪಿ ಕಾರ್ಯಕರ್ತರು, ಎಲ್ಲಾ ಪಕ್ಷಗಳ ಕಾರ್ಯಕ್ರಮಗಳಿಗೂ ಪುರಸಭೆ ಟ್ರಾಕ್ಟರ್ ಕಳುಹಿಸಬಹುದಾದರೆ ಪುರಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಿ ಎಂದು ಛೇಡಿಸಿದರು.

ಜೆಡಿಎಸ್ ಸಮಾವೇಶಕ್ಕೆ ಟ್ರ್ಯಾಕ್ಟರ್ ಮತ್ತು ಸಿಬ್ಬಂದಿ ದುರ್ಬಳಕೆ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು. ಪುರಸಭೆ ಸದಸ್ಯರಿಬ್ಬರು ಮೃತಪಟ್ಟಿರುವ 3, 4ನೇ ವಾರ್ಡ್‍ನಲ್ಲಿ ಉಪ ಚುನಾವಣೆ ನಡೆಸದಿರುವ ಬಗ್ಗೆ, ಮೈಸೂರು-ನಾಗಮಂಗಲ ರಸ್ತೆ (ಪೊಲೀಸ್ ಕಾಲನಿ ಹತ್ತಿರ) ಚರಂಡಿ ನೀರು ಶೇಖರಣೆಗೊಂಡಿರುವ ಬಗ್ಗೆ, ರಸ್ತೆ ಬದಿಯಲ್ಲಿರುವ ತಿಪ್ಪೆಗಳನ್ನು ತೆರವುಗೊಳಿಸುವ ಬಗ್ಗೆ, ಸಂತೆ ಮೈದಾನಲದಲ್ಲಿ ಒತ್ತುವರಿಯಾಗಿರುವ ಜಾಗ ತೆರವುಗೊಳಿಸುವ ಬಗ್ಗೆ, ಸಂತೆ ಮೈದಾನಕ್ಕೆ ಹೈಮಾಸ್ಟ್ ದೀಪ ಅಳವಡಿಸುವ ಬಗ್ಗೆ, ಕೋಳಿ ಅಂಗಡಿಗಳ ತ್ಯಾಜ್ಯಗಳನ್ನು ಬೇರೆಡೆ ಸಾಗಿಸುವ ಬಗ್ಗೆ, ಪುರಸಭೆ ಖಾಲಿ ಸ್ಥಳಗಳಲ್ಲಿ ಫಲಕಗಳ ಅಳವಡಿಸುವ ಬಗ್ಗೆ, ಕಾಮಗಾರಿ ಮಾಡಿ ಉಳಿದಿರುವ ಹಳೆಯ ಕಲ್ಲುಗಳ ಮಾರಾಟ ಬಗ್ಗೆ ಸೂಕ್ತ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಪುರಸಭೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಕೋಕಿಲಾ ಚಿತ್ರಮಂದಿರ ಹಿಂಭಾಗದ ನಿವೇಶನಕ್ಕೆ ಖಾತೆ ಹಾಗೂ ಲಕ್ಷ್ಮೀ ಚಿತ್ರಮಂದಿರದ ಜಾಗ ಖಾತೆ ವಿಚಾರಕ್ಕೆ ಸಂಬಂಧಿಸಿದಂತೆ ಲಕ್ಷ ರೂ.ಗೆ ಒತ್ತಾಯಿಸಿದ್ದೀರಾ ಎಂದು ನಮಗೆ ದೂರು ಬಂದಿದೆ. ಪುರಸಭೆ ವ್ಯಾಪ್ತಿಯ ಹತ್ತಾರು ಸಮಸ್ಯೆಗಳಿಗೆ 15ದಿನಗಳಲ್ಲಿ ಸೂಕ್ತ ಪರಿಹಾರ ಕಂಡುಹಿಡಿದು ಸಮಸ್ಯೆ ಬಗೆಹರಿಸದಿದ್ದರೆ ಫೆ. 20ರಂದು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಶ್ರೀನಿವಾಸನಾಯಕ, ನೀಲನಹಳ್ಳಿ ಧನಂಜಯ, ಹಿರೇಮರಳಿ ಎಚ್.ಶ್ರೀನಿವಾಸ್, ಪುರಸಭೆ ಮಾಜಿ ಅಧ್ಯಕ್ಷ ಹೊನ್ನಗಿರಿಗೌಡ, ಜನಪರ ವೇದಿಕೆ ಕಾರ್ಯದರ್ಶಿ ಮರಿಸ್ವಾಮಿಗೌಡ, ನಾಗರಿಕ ಹಿತರಕ್ಷಣಾ ವೇದಿಕೆ ಕಾರ್ಯದರ್ಶಿ ಲಕ್ಷ್ಮಯ್ಯ ಸೇರಿದಂತೆ ಇತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin