ಚಿನ್ನಮ್ಮನಿಗೆ ಶಾಕ್ ನೀಡಿದ ಚುನಾವಣಾ ಆಯೋಗ..! ದೀಪಾ ತಮಿಳುನಾಡಿನ ಮುಂದಿನ ಸಿಎಂ..?

ಈ ಸುದ್ದಿಯನ್ನು ಶೇರ್ ಮಾಡಿ

Sasikala-Natarajan-And-Deep

ಚೆನ್ನೈ, ಫೆ. 8– ತಮಿಳುನಾಡು ರಾಜಕೀಯ ಕ್ಷಣಕ್ಕೊಂದು ತಿರುವು ಪಡೆಯುತ್ತಿದ್ದು, ಕೇಂದ್ರ ಚುನಾವಣಾ ಆಯೋಗ ಪಕ್ಷದ ಪ್ರಧಾನ ಕಾರ್ಯದರ್ಶಿ ಆಯ್ಕೆಯನ್ನೇ ಪ್ರಶ್ನಿಸಿರುವುದು, ತಿರುಗಿ ಬಿದ್ದ ಹಂಗಾಮಿ ಮುಖ್ಯಮಂತ್ರಿ ಓ.ಪನ್ನೀರ್ ಸೆಲ್ವಂ, ಜಯಾ ಸಾವಿನ ಕುರಿತು ತನಿಖೆ ನಡೆಸುವುದಾಗಿ ಘೋಷಿಸುವುದರೊಂದಿಗೆ, ದೀಪಾ ಅವರಿಗೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಹೇಳಿರುವುದು ಮುಖ್ಯಮಂತ್ರಿ ಪಟ್ಟದ ಕನಸು ಕಾಣುತ್ತಿದ್ದ ಶಶಿಕಲಾರಿಗೆ ಭಾರೀ ಹಿನ್ನಡೆ ಉಂಟು ಮಾಡಿದೆ.   ಎಐಎಡಿಂಕೆ ಪಕ್ಷದ ಸಂವಿಧಾನದ ಪ್ರಕಾರ ಮಧ್ಯಂತರ ಪ್ರಧಾನ ಕಾರ್ಯಕರ್ಶಿ ಆಯ್ಕೆಗೆ ಅವಕಾಶವೇ ಇಲ್ಲ ಎಂದು ಹೇಳಿರುವ ಕೇಂದ್ರ ಚುನಾವಣಾ ಆಯೋಗ, ಆ ಪಕ್ಷದ ಕ್ರಮದ ಬಗ್ಗೆ ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಯಾವ ಆಧಾರದಲ್ಲಿ ಈ ಆಯ್ಕೆ ಮಾಡಿದ್ದೀರಿ ಎಂದು ಪ್ರಶ್ನಿಸಿರುವುದು ಶಶಿಕಲಾರಿಗೆ ಅರಗಿಸಿಕೊಳ್ಳದ ಹೊಡೆತವಾಗಿದೆ. ಈ ಮಧ್ಯೆ ಜಯಲಲಿತಾ ಸಾವಿನ ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದ್ದು ಅದು ಶಶಿಕಲಾರ ಕೊರಳಿಗೆ ಬಲವಾಗಿ ಸುತ್ತಿಕೊಳ್ಳುವ ಲಕ್ಷಣಗಳು ಸ್ಪಷ್ಟವಾಗಿ ಕಂಡು ಬರುತ್ತಿದೆ.

ತಮ್ಮನ್ನು ಖಜಾಂಚಿ ಹುದ್ದೆಯಿಂದ ವಜಾಗೊಳಿಸಿದ ಪಕ್ಷದ ಕ್ರಮದ ವಿರುದ್ಧ ಸೆಟೆದು ನಿಂತ ಪನ್ನೀರ್ ಸೆಲ್ವಂ, ಒಂದು ಹಂತದಲ್ಲಿ ಜಯಾರ ಸಹೋದರನ ಪುತ್ರಿ ದೀಪಾ ಅವರನ್ನೇ ಚಿನ್ನಮನ ವಿರುದ್ಧ ನಿಲ್ಲಿಸುವ ತಂತ್ರ ರೂಪಿಸಿದ್ದು, ದೀಪಾರನ್ನೇ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಬಿಂಬಿಸಲು ಸಿದ್ದತೆ ನಡೆಸಿದ್ಧಾರೆ.   ತಮಿಳುನಾಡು ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದ್ದು, ಬೆಳಗ್ಗೆಯಿಂದಲೇ ಬಿರುಸಿನ ಚಟುವಟಿಕೆಗಳು ನಡೆದು ಕ್ಲೈಮ್ಯಾಕ್ಸ್ ಹಂತ ತಲುಪಿವೆ.  ತಮಿಳುನಾಡಿನ ನಿಯೋಜಿತ ಮುಖ್ಯಮಂತ್ರಿ ಶಶಿಕಲಾ ನಟರಾಜನ್ ಅವರಿಗೆ ವಿವಾದಗಳು ಮತ್ತು ವಿಘ್ನಗಳ ಕುಣಿಕೆಯೇ ಕೊರಳನ್ನು ಬಿಗಿಯುತ್ತಿರುವಾಗ ಮತ್ತೊಂದು ಭಾರೀ ಹಿನ್ನಡೆ ಉಂಟಾಗಿದೆ. ಎಐಎಡಿಎಂಕ ಪ್ರಧಾನ ಕಾರ್ಯದರ್ಶಿ ಆಗಿ ಅವರು ಆಯ್ಕೆಯಾಗಿರುವ ಕ್ರಮವೇ ಸರಿಯಿಲ್ಲ ಎಂದು ರಾಜ್ಯ ಚುನಾವಣಾ ಆಯೋಗ ಹೇಳಿದೆ.

ಅವರ ಪದನ್ನೋತಿಯ ಔಚಿತ್ಯವನ್ನು ಪ್ರಶ್ನಿಸಿರುವ ಆಯೋಗವು ಶಶಿಕಲಾ ಅವರ ಆಯ್ಕೆಯಾಗಿ ನೀತಿ-ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ಹೇಳುವ ಮೂಲಕ ಚಿನ್ನಮ್ಮನಿಗೆ ದೊಡ್ಡ ಮುಖಭಂಗವಾಗುವಂತೆ ಮಾಡಿದೆ.

ತನಿಖೆಗೆ ಆದೇಶ :

ತಮಿಳುನಾಡಿನ ಜನರು ಬಯಸಿದರೆ ನಾನು ರಾಜೀನಾಮೆ ಹಿಂದಕ್ಕೆ ಪಡೆಯುತ್ತೇನೆ. ಜಯಲಲಿತಾ ಸಾವಿನ ಬಗ್ಗೆ ನಾನು ತನಿಖೆ ನಡೆಸುತ್ತೇನೆ. ಇದರ ತನಿಖೆಗಾಗಿ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸುತ್ತೇನೆ ಎಂದು ಹಂಗಾಮಿ ಮುಖ್ಯಮಂತ್ರಿ ಓ.ಪನ್ನೀರ್ ಸೆಲ್ವಂ ಇಂದು ಹೇಳುವ ಮೂಲಕ ನಿಯೋಜಿತ ಮುಖ್ಯಮಂತ್ರಿ ಶಶಿಕಲಾ ನಟರಾಜನ್ ಅವರಿಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.   ಚೆನ್ನೈನಲ್ಲಿಂದು ಬೆಳಗ್ಗೆ ಸುದ್ದಿಗೋಷ್ಠಿಯಲ್ಲಿ ಮತನಾಡಿದ ಅವರು, ಜಯಲಲಿತಾರ ಸಾವಿನ ಸತ್ಯಾಂಶವನ್ನು ರಾಜ್ಯದ ಜನತೆಗೆ ತಿಳಿಸುವುದು ಸರ್ಕಾರದ ಕರ್ತವ್ಯ. ಈ ಬಗ್ಗೆ ತನಿಖೆಗೆ ಆದೇಶಿಸಲು ನಾನು ಸಿದ್ಧನಿದ್ದೇನೆ ಎಂದು ಅವರು ಹೇಳಿದ್ದಾರೆ.

ಜಯಾರ ಅಣ್ಣನ ಮಗಳಾದ ದೀಪಾ ಜಯಕುಮಾರ್ ಅವರಿಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಹೇಳುವ ಪನ್ನೀರ್ ಹೇಳುವ ಮೂಲಕ ಅವರು ಮುಖ್ಯಮಂತ್ರಿಯಾದರೆ ತಮ್ಮ ಸಂಪೂರ್ಣ ಬೆಂಬಲ ನೀಡುವುದಾಗಿ ಪರೋಕ್ಷವಾಗಿ ಘೋಷಿಸಿದರು.  ನಾನು ಎಐಎಡಿಎಂಕೆ ವಿರುದ್ಧ ಎಲ್ಲೂ ಮಾತನಾಡಿಲ್ಲ. ನನ್ನ ವಿರುದ್ಧ ವಿನಾಕಾರಣ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ಪಕ್ಷದ ಘನತೆಗೆ ಧಕ್ಕೆಯಾಗುವಂತೆ ಯಾವುದೇ ಹೇಳಿಕೆಗಳನ್ನು ನಾನು ನೀಡಿಲ್ಲ. ನನ್ನನ್ನು ಬಲವಂತವಾಗಿ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಲಾಗಿದೆ ಎಂದು ಆರೋಪಿಸಿದರು.
ಈ ಬೆಳವಣಿಗೆ ಹಿಂದೆ ಬಿಜೆಪಿ ಅಥವಾ ಡಿಎಂಕೆ ಪಕ್ಷದ ಕೈವಾಡ ಇಲ್ಲ. ತಮಿಳುನಾಡಿನ ಜನರು ಬಯಸಿದರೆ ನಾನು ರಾಜೀನಾಮೆ ಹಿಂದಕ್ಕೆ ಪಡೆಯುತ್ತೇನೆ. ತಮಿಳುನಾಡು ವಿಧಾನಸಭೆಯಲ್ಲಿ ನನ್ನ ಬಲ ಪ್ರದರ್ಶಿಸುತ್ತೇನೆ ಮತ್ತು ಬಹುಮತ ಸಾಬೀತು ಮಾಡುತ್ತೇನೆ ಎಂದು ಅವರು ಹೇಳಿದರು.

ಪಕ್ಷದ ಸಂಸ್ಥಾಪಕ ಎಂಜಿಆರ್ ಅವರ ಕನಸಿನಂತೆ ಹಾಗೂ ಜಯಲಿಲಿತಾರ ಮಾರ್ಗದರ್ಶನದಂತೆ ಎಐಎಡಿಎಂಕೆ ಮುನ್ನಡೆಯಲಿದೆ. ನನಗೆ ಜಯಾರ ನಿಷ್ಠರು, ಸಂಸದರು ಮತ್ತು ಶಾಸಕರ ಅಪಾರ ಬೆಂಬಲವಿದೆ ಎಂದು ಹೇಳಿದ್ದಾರೆ.   ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ನಿಧನಾನಂತರ ಅನಿರೀಕ್ಷಿತ ತಿರುವುಗಳ ಬೆಳವಣಿಗೆಗಳ ನಡುವೆಯೇ ಈ ವಿದ್ಯಮಾನ ನಡೆದಿದ್ದು, ಜಯಾ ಪರಮಾಪ್ತೆ ಮತ್ತು ನಿಷ್ಠಾವಂತ-ಈ ಎರಡು ಬಣಗಳ ನಡುವೆ ದೊಡ್ಡ ಮಟ್ಟದ ಸಂಘರ್ಷಕ್ಕೆ ವೇದಿಕೆ ಸಜ್ಜುಗೊಂಡಿದೆ.   ಸಭೆ ನಂತರ ಮಾತನಾಡಿದ ಶಶಿಕಲಾ ಪಕ್ಷದ ಒಗ್ಗಟ್ಟನ್ನು ಮುರಿಯಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ.

ಸೆಲ್ವಂ ರಾಜೀನಾಮೆಗೆ ನಾವು ಒತ್ತಡ ಹೇರಿಲ್ಲ. ಪಕ್ಷ ವಿರೋಧಿ ಚಟುವಟಿಕೆಯನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಪನ್ನೀರ್ ಜಯಾರಿಗೆ ಅಪಮಾನ ಮಾಡುವಂತೆ ನಡೆದುಕೊಂಡಿದ್ದಾರೆ. ಪಕ್ಷದಲ್ಲಿ ಉದ್ಭವಿಸಿರುವ ಬಿಕ್ಕಟ್ಟಿನ ಹಿಂದೆ ಡಿಎಂಕೆ ಕೈವಾಡವಿದೆ ಎಂದು ಶಶಿಕಲಾ ಆರೋಪಿಸಿದರು.   ಈ ಮಧ್ಯೆ, ಮುಂಬೈನಲ್ಲಿರುವ ತಮಿಳುನಾಡಿನ ಹಂಗಾಮಿ ರಾಜ್ಯಪಾಲ ವಿದ್ಯಾಸಾಗರ್ ರಾವ್ ಮುಂದಿನ ಬೆಳವಣಿಗೆಯನ್ನು ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ. ಶಶಿಕಲಾ ಮುಖ್ಯಮಂತ್ರಿಯಾಗಲು ಅರ್ಹರೇ ಅಥವಾ ಇಲ್ಲವೇ ಎಂಬ ಬಗ್ಗೆ ಈಗಾಗಲೇ ಕಾನೂನು ತಜ್ಞರ ಸಲಹೆ ಪಡೆದು ಪರಾಮರ್ಶೆ ನಡೆಸುತ್ತಿದ್ದಾರೆ.

ತಮಿಳುನಾಡಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಜ್ಯಪಾಲರು ಇಂದು ಚೆನ್ನೈಗೆ ಹಿಂದಿರುಗಲಿದ್ದಾರೆ. ಪನ್ನೀರ್ ಸೆಲ್ವಂ, ಶಶಿಕಲಾ ಮತ್ತು ಸ್ಟಾಲಿನ್ ಪ್ರತ್ಯೇಕವಾಗಿ ವಿದ್ಯಾಸಾಗರ್ ರಾವ್ ಅವರನ್ನು ಭೈೀಟಿ ಮಾಡಿ ತಮ್ಮ ಮನವಿಗಳನ್ನು ಸಲ್ಲಿಸಲಿದ್ದಾರೆ.   ತಮಗೆ 134 ಸಚಿವರು ಸೇರಿದಂತೆ ಬಹುತೇಕ ಎಐಎಡಿಎಂಕೆ ಶಾಸಕರ ಬೆಂಬಲವಿದೆ ಎಂದು ಶಶಿಕಲಾ ಹೇಳಿಕೊಂಡಿದ್ದರೆ, ತಮಿಳುನಾಡಿನ ಜನರು ಮತ್ತು ಜಯಾಲಲಿತಾರ ಬೆಂಬಲಿಗರು ತಮ್ಮ ವರವಾಗಿದ್ದಾರೆ ಎಂದು ಪನ್ನೀರ್ ತಿಳಿಸಿದ್ದಾರೆ.  ಶಶಿಕಲಾ ಮತ್ತು ಪನ್ನೀರ್ ಪರಸ್ಪರ ಕೆಸರೆರೆಚಾಟ ಮುಂದುವರಿದಿದೆ.  ಪನ್ನೀರ್ ಬಂಡಾಯದ ಹಿಂದೆ ಡಿಎಂಕೆ ಕೈವಾಡ ಇದೆ ಎಂದು ಶಶಿಕಲಾ ಆರೋಪಿಸಿದ್ದಾರೆ ಆದರೆ ಇದನ್ನು ಪನ್ನೀರ್ ತಳ್ಳಿ ಹಾಕಿದ್ದಾರೆ.

ತಮ್ಮನ್ನು ಪಕ್ಷದಿಂದ ವಜಾಗೊಳಿಸುವ ಅಧಿಕಾರ ಯಾರಿಗೂ ಇಲ್ಲ ಎಂದು ತಿರುಗೇಟು ನೀಡಿದ್ದಾರೆ. ಅಲ್ಲದೇ ತಮ್ಮ ದಂಗೆ ಹಿಂದೆ ಡಿಎಂಕೆ ಕೈವಾಡವಿದೆ ಎಂಬ ಆರೋಪವನ್ನೂ ತಳ್ಳಿಹಾಕಿದ್ದಾರೆ.
ಶಶಿಕಲಾ ನಟರಾಜನ್ ವಿರುದ್ಧ ವಾಗ್ದಾಳಿ ನಡೆಸಿರುವ ಡಿಎಂಕೆ ಕಾರ್ಯಾಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕ ಎಂ.ಕೆ.ಸ್ಟಾಲಿನ್, ಪನ್ನೀರ್ ಸೆಲ್ವಂ ಮಾಡಿರುವ ಆರೋಪಗಳ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.   ಚೆನ್ನೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪನ್ನೀರ್ ಸೆಲ್ವಂರಿಂದ ಬಲವಂತವಾಗಿ ರಾಜೀನಾಮೆ ಪಡೆದಿರುವ ಬಗ್ಗೆ ಶಶಿಕಲಾ ವಿರುದ್ಧ ತನಿಖೆ ನಡೆಸಬೇಕು. ರಾಜ್ಯಪಾಲರು ಈ ಕೂಡಲೇ ಇಲ್ಲಿಗೆ ಧಾವಿಸಿ ಅಲ್ಲೋಲ್ಲಕಲ್ಲೋಲವಾಗಿರುವ ರಾಜಕೀಯ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಬೇಕೆಂದು ಆಗ್ರಹಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin