ಯಡಿಯೂರಪ್ಪಗೆ ಮತ್ತೆ ಸೆಡ್ಡು ಹೊಡೆದ ಈಶ್ವರಪ್ಪ, 11ರಂದು ಬ್ರಿಗೇಡ್ ಮುಖಂಡರ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

Eshwarappa-Yadiyurappa

ಬೆಂಗಳೂರು, ಫೆ.8– ಪದಾಧಿಕಾರಿಗಳ ಪಟ್ಟಿ ಪರಿಷ್ಕರಣೆಗೆ ಮೀನಾಮೇಷ ಎಣಿಸುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ಮತ್ತೆ ಸಡ್ಡು ಹೊಡೆದಿದ್ದಾರೆ.  ಯಡಿಯೂರಪ್ಪನವರ ಧೋರಣೆ ವಿರುದ್ಧ ಅಸಮಾಧಾನಗೊಂಡಿರುವ ಈಶ್ವರಪ್ಪ ಮುಂದಿನ ಕಾರ್ಯತಂತ್ರಗಳ ಕುರಿತು ಚರ್ಚಿಸಲು ಇದೇ 11ರಂದು ಶಾಸಕರ ಭವನದಲ್ಲಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮುಖಂಡರ ಸಭೆ ಕರೆದಿದ್ದಾರೆ. ಸಭೆಗೆ ಜಿಲ್ಲಾಧ್ಯಕ್ಷರು, ಮುಖಂಡರು, ಪದಾಧಿಕಾರಿಗಳು ಸೇರಿದಂತೆ ಸುಮಾರು 250ಕ್ಕೂ ಹೆಚ್ಚು ಮಂದಿ ಪ್ರಮುಖರು ಭಾಗವಹಿಸಲಿದ್ದಾರೆ. ಮಾಜಿ ಸಂಸದ ವಿರುಪಾಕ್ಷಪ್ಪ, ಬಿಬಿಎಂಪಿ ಮಾಜಿ ಮೇಯರ್ ವೆಂಕಟೇಶಮೂರ್ತಿ ಸೇರಿದಂತೆ ಹಲವರು ಭಾಗವಹಿಸಲಿದ್ದು, ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಚಟುವಟಿಕೆಗಳ ಬಗ್ಗೆ ಚರ್ಚೆ ನಡೆಯಲಿದೆ.

ಈ ಹಿಂದೆ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮುಂದೆ ನಡೆದ ಸಂಧಾನ ಸಭೆ ವೇಳೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಚಟುವಟಿಕೆಯಲ್ಲಿ ಭಾಗವಹಿಸದಂತೆ ಸೂಚಿಸಲಾಗಿತ್ತು. ಆದರೆ, ಯಡಿಯೂರಪ್ಪ ನಡವಳಿಕೆ ಅವರ ಕಣ್ಣು ಕೆಂಪಾಗುವಂತೆ ಮಾಡಿದೆ. ದೆಹಲಿಯಲ್ಲಿ ನಡೆದ ಸಭೆಯಂತೆ ಇದೇ 10ರೊಳಗೆ ಪದಾಧಿಕಾರಿಗಳ ಪಟ್ಟಿಯನ್ನು ಪರಿಷ್ಕರಿಸುವ ಸಂಬಂಧ ಮುಖಂಡರ ಜತೆ ಚರ್ಚಿಸಿ ವರದಿ ನೀಡಬೇಕೆಂಬುದು ಅಮಿತ್ ಷಾ ನೀಡಿದ ಸೂಚನೆಯಾಗಿತ್ತು.

ರಾಜ್ಯ ಉಸ್ತುವಾರಿ ಮುರಳೀಧರ್‍ರಾವ್, ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಸಂಘಟನಾ ಸಹ ಕಾರ್ಯದರ್ಶಿ ಸಂತೋಷ್, ಆರ್‍ಎಸ್‍ಎಸ್ ಮುಖಂಡ ಮುಕುಂದ್ ಈ ಸಮಿತಿಯ ಸದಸ್ಯರಾಗಿದ್ದರು.  ಸಮಿತಿಯು ಸಭೆ ನಡೆಸಿ ಯಾವ ಯಾವ ಜಿಲ್ಲೆಗಳಲ್ಲಿ ಪದಾಧಿಕಾರಿಗಳ ಪಟ್ಟಿ ಬದಲಾವಣೆ ಮಾಡಬೇಕು ಎಂಬುದರ ಬಗ್ಗೆ ವರದಿ ನೀಡಬೇಕಿತ್ತು. ಆದರೆ, ಈವರೆಗೂ ಯಡಿಯೂರಪ್ಪ ಸಭೆ ನಡೆಸುವ ಗೋಜಿಗೆ ಹೋಗಿಲ್ಲ.  ಮೂಲಗಳ ಪ್ರಕಾರ, ಈಶ್ವರಪ್ಪ 11ರಂದು ಸಭೆ ನಡೆಸಲು ತೀರ್ಮಾನಿಸಿರುವ ಹಿನ್ನೆಲೆಯಲ್ಲಿ 13ರಂದು ಪ್ರಮುಖರ ಸಭೆಯನ್ನು ಬಿಎಸ್‍ವೈ ಕರೆದಿದ್ದಾರೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಲಭ್ಯವಾಗಿಲ್ಲ.ಬಿಎಸ್‍ವೈ ರಾಜ್ಯಾಧ್ಯಕ್ಷರಾದ ಮೇಲೆ ಪದಾಧಿಕಾರಿಗಳ ಪಟ್ಟಿ ರಚಿಸಿದ್ದರು. ಕೆಜೆಪಿಯಿಂದ ವಲಸೆ ಬಂದವರಿಗೆ ಆದ್ಯತೆ ನೀಡಲಾಗಿದೆ. ಇದರಿಂದ ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ ಎಂಬುದು ಈಶ್ವರಪ್ಪನವರ ದೂರಾಗಿತ್ತು.

ಹೀಗೆ ಪದಾಧಿಕಾರಿಗಳ ಪಟ್ಟಿ ಬಿಜೆಪಿಯಲ್ಲಿ ಕೆಟ್ಟ ರಾದ್ಧಾಂತ ಸೃಷ್ಟಿಸಿ ಯಡಿಯೂರಪ್ಪ ವಿರುದ್ಧವೇ ಶಾಸಕರು ತಿರುಗಿಬಿದ್ದು ಪತ್ರ ಬರೆದಿದ್ದರು. ಇದು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಚಟುವಟಿಕೆಗೂ ಕಾರಣವಾಗಿತ್ತು.  ಬಿಎಸ್‍ವೈ ವಿರುದ್ಧ ಬಹಿರಂಗವಾಗಿಯೇ ತೊಡೆ ತಟ್ಟಿದ್ದ ಈಶ್ವರಪ್ಪ ಪಕ್ಷದ ವಿರೋಧದ ನಡುವೆಯೂ ಕೂಡಲ ಸಂಗಮದಲ್ಲಿ ಭರ್ಜರಿ ರಾಯಣ್ಣ ಬ್ರಿಗೇಡ್ ಸಮಾವೇಶ ನಡೆಸಿದ್ದರು. ಅಂತಿಮವಾಗಿ ಬಿಜೆಪಿಯ ಭಿನ್ನಮತ ದೆಹಲಿಗೆ ವರ್ಗಾವಣೆಯಾಗಿತ್ತು.  ಅಮಿತ್ ಷಾ ಸಂಧಾನ ನಡೆಸಿ ಕೆಲವು ಕಡೆ ಪದಾಧಿಕಾರಿಗಳ ಪಟ್ಟಿ ಬದಲಾಯಿಸಲು ನಿರ್ದೇಶನ ನೀಡಿದ್ದರು. ತುಮಕೂರು, ಮೈಸೂರು, ಚಾಮರಾಜನಗರ, ಬಳ್ಳಾರಿ, ದಾವಣಗೆರೆ, ಕಲಬುರಗಿ, ಬೀದರ್, ಹಾವೇರಿ, ಹಾಸನ ಸೇರಿದಂತೆ ಕೆಲವು ಕಡೆ ಜಿಲ್ಲಾಧ್ಯಕ್ಷರನ್ನು ಬದಲಾಯಿಸುವುದರ ಜತೆಗೆ ಮೋರ್ಚಾಗಳ ಪದಾಧಿಕಾರಿಗಳ ಬದಲಾವಣೆಗೆ ಈಶ್ವರಪ್ಪ ಪಟ್ಟು ಹಿಡಿದಿದ್ದರು. ಈ ಪಟ್ಟಿ ಪರಿಷ್ಕøತವಾದರೆ ರಾಜಕೀಯವಾಗಿ ತಮಗೆ ಹಿನ್ನಡೆಯಾಗಬಹುದು ಎಂಬ ಕಾರಣಕ್ಕಾಗಿಯೇ ವರಿಷ್ಠರ ಸೂಚನೆಯನ್ನೂ ಲೆಕ್ಕಿಸದೆ ಯಡಿಯೂರಪ್ಪ ಸಭೆ ನಡೆಸದಿರುವುದು ಈಶ್ವರಪ್ಪನವರ ಬಂಡಾಯಕ್ಕೆ ಕಾರಣವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin