ಸಿಡಿದೆದ್ದ ಸೆಲ್ವಂ, ತಮಿಳುನಾಡಿನಲ್ಲಿ ನಡೀತಿದೆ ರಾಜಕೀಯ ಹೈಡ್ರಾಮಾ

ಈ ಸುದ್ದಿಯನ್ನು ಶೇರ್ ಮಾಡಿ

Jayalalithaa-Sasikala-Panne

ಚೆನ್ನೈ.ಫೆ.08: ಅಮ್ಮನಿಲ್ಲದ ತಮಿಳುನಾಡಿನಲ್ಲಿ ರಾಜಕೀಯ ಹೈಡ್ರಾಮಾ ನಡೆಯುತ್ತಿದೆ, ಸಾಧುವಿನಂತಿದ್ದ  ಸೆಲ್ವಂ ಸಿಡಿದೆದ್ದಿದ್ದಾರೆ, ಚಿನ್ನಮ್ಮ ರಾತ್ರೋ ರಾತ್ರಿ ತುರ್ತು ಸಭೆ ನಡೆಸಿ ಅಮ್ಮನ ಆಪ್ತನನ್ನು ಪಕ್ಷದ ಖಜಾಂಚಿ ಸ್ಥಾನದಿಂದ ಕಿತ್ತೆಸೆದಿದ್ದಾರೆ. ಪ್ರಸ್ತುತ ಬೆಳವಣಿಗಗಳು ಕ್ಷಣ ಕ್ಷಣಕ್ಕೂ ಹೊಸ ಕುತೂಹಲ ಸೃಷ್ಟಿಸುತ್ತಿವೆ. ಜಯಲಲಿತಾರವರು ನಿಧನರಾದ ಬಳಿಕ ಮುಖ್ಯಮಂತ್ರಿ ಹುದ್ದೆಗೇರಿದ್ದ ಓ. ಪನ್ನೀರ್ ಸೆಲ್ವಂ, ಜಯಲಲಿತಾ ಪರಮಾಪ್ತೆ ಶಶಿಕಲಾ ನಟರಾಜನ್ ಮುಖ್ಯಮಂತ್ರಿಯಾಗಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಮರು ದಿನವೇ ಬಂಡಾಯವೆದ್ದಿದ್ದು, ತಮ್ಮಿಂದ ಬಲವಂತವಾಗಿ ರಾಜೀನಾಮೆ ಪಡೆಯಲಾಗಿದೆ ಎಂದು ಹೊಸ ಬಾಂಬ್ ಸಿಡಿಸಿ ತಮಿಳು ನಾಡಿನ ರಾಜಕೀಯ ಅಲ್ಲೋಲಕಲ್ಲೋಲವಾಗುವಂತೆ ಮಾಡಿದ್ದಾರೆ. ಅಲ್ಲದೇ ತಮ್ಮ ರಾಜೀನಾಮೆ ಹಿಂಪಡೆಯಲು ಸಿದ್ದ ಎಂದು ಘೋಷಿಸಿದ್ದಾರೆ.

ಪನ್ನೀರ್ ಸೆಲ್ವಂ ಬೆಂಬಲಕ್ಕೆ ಸಚಿವ ಎಂ.ಸಿ. ಸಂಪತ್ ಹಾಗೂ ಕಡಲೂರಿನ ನಾಯಕರು ನಿಂತಿದ್ದು, ಅತ್ತ ಶಶಿಕಲಾ ಬೆಂಬಲಿಗರು ತಮಗೆ 134 ಶಾಸಕರ ಬೆಂಬಲವಿದೆ ಎಂದು ಹೇಳಿಕೊಂಡಿದ್ದಾರೆ. ಈ ಮೂಲಕ ಶಶಿಕಲಾ ಸಿಎಂ ಕನಸು ಭಗ್ನವಾಗುವ ಎಲ್ಲ ವಾತಾವರಣ ಸೃಷ್ಟಿಯಾಗಿದೆ.  ಬೆಳಿಗ್ಗೆ 10.30 ಕ್ಕೆ ಚೆನ್ನೈನ ಪೋಯಸ್ ಗಾರ್ಡನ್ ನಿವಾಸದಲ್ಲಿ ಪಕ್ಷದ ಶಾಸಕರು,  ಸಚಿವರ ಸಭೆ ಕರೆಯಲಾಗಿದ್ದು, ಸಭೆಯಲ್ಲಿ ಪಕ್ಷದಿಂದ ಪನ್ನೀರ್ ಸೆಲ್ವಂ ಅವರನ್ನು ಉಚ್ಛಾಟನೆ ಮಾಡುವ ಮತ್ತು ಶಾಸಕರ ಬಲ ಪ್ರದರ್ಶಿಸುವ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಈ ಮಧ್ಯೆ ಎಐಎಡಿಎಂಕೆ ಹಿರಿಯ ನಾಯಕರೊಬ್ಬರು ಇಂದು ಬೆಳಗಿನ ಜಾವ ಪನ್ನೀರ್ ಸೆಲ್ವಂ ಮನೆಗೆ ತೆರಳಿ ಶಶಿಕಲಾ ನಟರಾಜನ್ ಪರ ರಾಜಿ ಸಂಧಾನ ನಡೆಸಿದ್ದಾರೆಂದು ಹೇಳಲಾಗುತ್ತಿದೆ. ಇದಕ್ಕೆ ಪನ್ನೀರ್ ಸೆಲ್ವಂ ಕೂಡಾ ಪೂರಕವಾಗಿ ಸ್ಪಂದಿಸಿದ್ದು, ಶಶಿಕಲಾ ನಟರಾಜನ್ ಮುಖ್ಯಮಂತ್ರಿಯಾಗಲು ಸಮ್ಮತಿ ಸೂಚಿಸಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ.

ಪಕ್ಷದ ನೂತನ ಖಜಾಂಚಿಯಾಗಿ ಡಿ. ಶ್ರೀನಿವಾಸನ್ ಅವರನ್ನು ನೇಮಿಸಲಾಗಿದೆ. ಪನ್ನೀರ್ ಸೆಲ್ವಂ ಶಶಿಕಲಾ ನಟರಾಜನ್ ವಿರುದ್ಧ ಸಿಡಿದೇಳುತ್ತಿದ್ದಂತೆ ವಿಪಕ್ಷಗಳಾದ ಡಿಎಂಕೆ, ಕಾಂಗ್ರೆಸ್ ಪನ್ನೀರ್ ಗೆ ಬೆಂಬಲ ನೀಡುವ ಸಾಧ್ಯತೆ ಬಗ್ಗೆ ಮಾತನಾಡುತ್ತಿವೆ.  ತಮಿಳುನಾಡಿನ ರಾಜಕೀಯ ಅಸ್ಥಿರತೆಗೆ ಬಿಜೆಪಿಯೇ ಕಾರಣ ಎಂದು ಕಾಂಗ್ರೆಸ್ ಆರೋಪಿಸಿದೆ. ಇನ್ನೊಂದೆಡೆ ಮುಂಬೈನಲ್ಲಿದ್ದ ರಾಜ್ಯಪಾಲ ವಿದ್ಯಾಸಾಗರ್ ರಾವ್ ಇಂದು ತಮಿಳುನಾಡಿಗೆ ಆಗಮಿಸಿಲಿದ್ದಾರೆ.  ಒಟ್ಟಿನಲ್ಲಿ ತಮಿಳುನಾಡಿನಲ್ಲಿ ನಡೆಯುತ್ತಿರುವ ಈ ರಾಜಕೀಯ ಹೈಡ್ರಾಮಾ ಎಲ್ಲಿಗೆ ಹೋಗಿ ತಲುಪುತ್ತೆ ಎಂಬುದೇ ಸದ್ಯದ ಕುತೂಹಲ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin