ತಮಿಳುನಾಡಿನ ರಾಜಕೀಯ ಹೈಡ್ರಾಮಾಗೆ ಸಂಜೆ ಕ್ಲೈಮ್ಯಾಕ್ಸ್

ಈ ಸುದ್ದಿಯನ್ನು ಶೇರ್ ಮಾಡಿ

Sasikala-Paneerselvam

ಚೆನ್ನೈ, ಫೆ.9-ಅನಿರೀಕ್ಷಿತ ರಾಜಕೀಯ ಬೆಳವಣಿಗೆಗಳಿಂದ ಅಲ್ಲೋಲ-ಕಲ್ಲೋಲವಾಗಿರುವ ತಮಿಳುನಾಡಿನಲ್ಲಿ ಮುಂದೇನಾಗಲಿದೆ ಎಂಬ ಕುತೂಹಲ ಇಡೀ ದೇಶವನ್ನು ತುದಿಗಾಲಲ್ಲಿ ನಿಲ್ಲಿಸಿದೆ. 125ಕ್ಕೂ ಹೆಚ್ಚು ಶಾಸಕರ ಬೆಂಬಲ ತಮಗಿದೆ ಎಂದು ಘೋಷಿಸಿಕೊಂಡಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ನಟರಾಜನ್ ಮುಖ್ಯಮಂತ್ರಿ ಗಾದಿಗೇರುವರೇ ಅಥವಾ ಮುಖಭಂಗ ಅನುಭವಿಸುವರೇ ಎಂಬುದು ಇದೀಗ ಮಿಲಿಯನ್ ಡಾಲರ್ ಪ್ರಶ್ನೆ ಆಗಿದೆ.   ತಮಿಳುನಾಡು ಬೆಳವಣಿಗೆ ಕುರಿತು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರನ್ನು ಭೇಟಿ ಮಾಡಲು ನಿನ್ನೆ ಪಕ್ಷದ ಸಂಸದರು, ಶಾಸಕರು, ಮತ್ತು ಮುಖಂಡರು ದೆಹಲಿಗೆ ತೆರಳಿದ್ದರು. ಶಶಿಕಲಾ ಅವರ ಸೂಚನೆ ಮೇರೆಗೆ ಈ ನಿಯೋಗ ಮುಖರ್ಜಿ ಅವರನ್ನು ಭೇಟಿ ಮಾಡದೇ ಹಿಂದಿರುಗಿದೆ.

ಪ್ರಸ್ತುತ ವಿದ್ಯಮಾನದ ಹಿನ್ನೆಲೆಯಲ್ಲಿ ಕುದುರೆ ವ್ಯಾಪಾರ ನಡೆಯಬಹುದಾದ ಆತಂಕದಿಂದ ಶಶಿಕಲಾ ಶಾಸಕರನ್ನು ಗೋಪ್ಯ ಸ್ಥಳದಲ್ಲಿ ಇರಿಸಿದ್ದಾರೆ. ರಾಜ್ಯಪಾಲರು ಚೆನ್ನೈಗೆ ಹಿಂದಿರುಗುವ ತನಕ ಅವರು ಯಾರ ಸಂಪರ್ಕಕ್ಕೆ ಲಭಿಸಬಾರದು ಎಂಬುದು ಇದರ ಉದ್ದೇಶ.   ಜಯಲಲಿತಾರ ಸಮಾಧಿ ಮುಂದೆ ಪನ್ನೀರ್ ಕಣ್ಣೀರು ಹಾಕುತ್ತಾ ಮೌ ನಾಚರಿಸಿದ ಬಳಿಕ ತಮಿಳುನಾಡು ರಾಜಕೀಯದ ಶಾಂತಿ-ನೆಮ್ಮದಿಗೆ ಭಂಗವಾಗಿದೆ ಎಂದು ಚಿನ್ನಮ್ಮ ಬಣ ಆಕ್ರೋಶಗೊಂಡಿದ್ದು, ಮುಂದಿನ ಬೆಳವಣಿಗೆ ಆಸಕ್ತಿ ಕೆರಳಿಸಿದೆ.   ಒಂದೆಡೆ 66 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಗಳಿಕೆ ಪ್ರಕರಣ, ಇನ್ನೊಂದೆಡೆ ಮುಖ್ಯಮಂತ್ರಿಯಾಗಲು ಅವಕಾಶ ನೀಡಬಾರದು ಎಂದು ಜಯಾರ ಸೊಸೆ ದೀಪಾ ಜಯಕುಮಾರ್ ಮತ್ತಿತರು ಕೋರ್ಟ್‍ನಲ್ಲಿ ಸಲ್ಲಿರುವ ಅರ್ಜಿ, ಮತ್ತೊಂದೆಡೆ ಪಕ್ಷ ಪ್ರಧಾನ ಕಾರ್ಯದರ್ಶಿ ಆಯ್ಕೆ ಅಸಿಂಧು ಎಂದು ಚುನಾವಣಾ ಆಯೋಗ ನೀಡಿರುವ ನೋಟಿಸ್, ಮಗದೊಂದೆಡೆ ಸಿಎಂ ಆಗಲು ಇರುವ ಸಂವಿಧಾನಾತ್ಮಕ ತೊಡಕು-ಈ ಗಂಡಾಂತರಗಳಿಂದ ಪಾರಾದ ನಂತರವಷ್ಟೇ ಚಿನ್ನಮ್ಮ ಅಮ್ಮನ ಕುರ್ಚಿಗೇರಲು ಸಾಧ್ಯ ಎಂಬುದು ಸರ್ವವಿದಿತ.

ರಾಜಧಾನಿ ಚೆನ್ನೈನಲ್ಲಿ ನಿನ್ನೆ ಇಡೀ ದಿನ ಮಹತ್ವದ ರಾಜಕೀಯ ಬೆಳವಣಿಗೆಗಳ ನಂತರ ಈಗ ಎಲ್ಲರ ಕಣ್ಣು ರಾಜ್ಯಪಾಲ ವಿದ್ಯಾಸಾಗರ ರಾವ್ ಅವರತ್ತ ನೆಟ್ಟಿದೆ. ರಾಜ್ಯಪಾಲರೇ ಈ ವಿಷಯದಲ್ಲಿ ತೀವ್ರ ಗೊಂದಲಕ್ಕೆ ಒಳಗಾಗಿದ್ದಾರೆ.   ಮಹಾರಾಷ್ಟ್ರದ ರಾಜ್ಯಪಾಲರೂ ಆಗಿರುವ ರಾವ್, ಶಶಿಕಲಾ ಪಕ್ಷದ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬಳಕ ಇದೇ ಕಾರಣಕ್ಕಾಗಿ ಕಳೆದ ನಾಲ್ಕು ದಿನಗಳಿಂದ ತಮಿಳುನಾಡಿಗೆ ಹಿಂದಿರುಗಿಲಲ್ಲ. ಮುಂಬೈನಲ್ಲಿದ್ದುಕೊಂಡೇ ರಾಜ್ಯದ ಬೆಳವಣಿಗೆಗಳನ್ನು ಗಮನಿಸುತ್ತಾ ಕಾನೂನು ತಜ್ಞರ ಸಲಹೆಗಳನ್ನು ಪಡೆದಿದ್ದಾರೆ.    ಇಂದು ಅಪರಾಹ್ನದ ನಂತರ ಚೆನ್ನೈಗೆ ಆಗಮಿಸುವ ನಿರೀಕ್ಷೆ ಇದೆ.

ಶಶಿಕಲಾ ನಟರಾಜನ್ ನೇತೃತ್ವದಲ್ಲಿ 125ಕ್ಕೂ ಹೆಚ್ಚು ಶಾಸಕರು ಸಂಜೆ ರಾಜ್ಯಪಾಲರನ್ನು ಭೇಟಿ ಮಾಡಿ ತಮಗಿರುವ ಬೆಂಬಲದ ಹಕ್ಕುಪ್ರತಿಪಾದನೆ ಮಾಡಲಿದ್ದಾರೆ ಎಂಬ ವದಂತಿಯೂ ಇದೆ. ತಮ್ಮ ಭೇಟಿಗೆ ರಾಜ್ಯಪಾಲರು ಉದ್ದೇಶಪೂರ್ವಕವಾಗಿಯೇ ಅವಕಾಶ ನೀಡುತ್ತಿಲ್ಲ ಎಂದು ನಿನ್ನೆ ಚಿನ್ನಮ್ಮ ರಾವ್ ವಿರುದ್ಧ ಹರಿಹಾಯ್ದಿದ್ದರು.   ಇನ್ನೊಂದೆಡೆ ಉಸ್ತುವಾರಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಸಹ ವಿದ್ಯಾಸಾಗರರಾವ್ ಅವರನ್ನು ಭೇಟಿ ಮಾಡಿ ಇಡೀ ಬೆಳವಣಿಗೆಗಳ ಬಗ್ಗೆ ವಿವರಿಸಿ ತಮ್ಮ ವಾದವನ್ನು ಮಂಡಿಸುವ ನಿರೀಕ್ಷೆಯೂ ಇದೆ.   ಈವರೆಗೆ ಒಂದೇ ಒಂದು ಚುನಾವಣೆಯನ್ನೂ ಎದುರಿಸದ ಹಾಗೂ ರಾಜಕಾರಣದ ಅನುಭವವೇ ಇಲ್ಲದ ಶಶಿಕಲಾರನ್ನು ಮುಖ್ಯಮಂತ್ರಿ ಹುದ್ದೆಯಲ್ಲಿ ನೋಡಲು ರಾಜ್ಯಪಾಲರಿಗೆ ಲವಲೇಶವೂ ಇಷ್ಟವಿಲ್ಲ. ಆದರೆ ಶಶಿಕಲಾ ಅವರ ಪರವಾಗಿ 125ಕ್ಕೂ ಹೆಚ್ಚು ಶಾಸಕರು ಬೆಂಬಲ ವ್ಯಕ್ತಪಡಿಸಿದರೆ ಅದನ್ನು ಗಣನೆಗೆ ತೆಗೆದುಕೊಂಡು ಸಂವಿಧಾನಾತ್ಮಕವಾಗಿ ಅನಿವಾರ್ಯ ನಿರ್ಧಾರ ಕೈಗೊಳ್ಳಬೇಕಾಗುತ್ತದೆ.

ಇನ್ನೊಂದೆಡೆ ತಮಗೆ ಎಐಎಡಿಎಂಕೆ ಸಂಸದರು, ಶಾಸಕರು ಮತ್ತು ಜಯಾ ನಿಷ್ಠರ ಬೆಂಬಲವಿದೆ ಹಾಗೂ ಇದನ್ನು ವಿಧಾನಸಭೆಯಲ್ಲಿ ಸಾಬೀತುಪಡಿಸುವುದಾಗಿ ಪನ್ನೀರ್ ರಾಜ್ಯಪಾಲರ ಮುಂದೆ ಹಕ್ಕು ಪ್ರತಿಪಾದಿಸಿದರೆ ಅದನ್ನೂ ಕೂಡ ಪರಿಗಣಿಸಬೇಕಾಗುತ್ತದೆ.   ಒಟ್ಟಾರೆ ಈಗ ಜಯಲಲಿತಾರ ಪರಮಾಪ್ತೆ ಮತ್ತು ನಿಷ್ಠಾವಂತ-ಈ ಉಭಯತ್ರರ ನಡುವೆ ಮುಖ್ಯಮಂತ್ರಿ ಗಾದಿಗೆ ಪೈಪೋಟಿ ಮುಂದುವರಿದಿದ್ದು, ಒಟ್ಟಾರೆ ತಮಿಳುನಾಡು ಪರಿಸ್ಥಿತಿ ಅತಂತ್ರವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin