‘ನಮ್ಮ ತಾಕತ್ತು ಏನೆಂದು ತೋರಿಸ್ತೀವಿ’ : ಬಿಎಸ್‍ವೈ ವಿರುದ್ಧ ತೊಡೆ ತಟ್ಟಿದ ಈಶ್ವರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

Eshwarapa-01

ಬೆಂಗಳೂರು, ಫೆ.11- ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಬ್ರೇಕ್ ಆಗಿದೆ( ಮುರಿದಿದೆ) ಎಂದು ಬೊಬ್ಬೆ ಹಾಕುತ್ತಿರುವವರಿಗೆ ಮುಂದಿನ ತಿಂಗಳು ಮತ್ತೆ ಸಭೆ ಸೇರಿ ನಮ್ಮ ಶಕ್ತಿ, ಸಾಮಥ್ರ್ಯ ಏನೆಂಬುದನ್ನು ತೋರಿಸುತ್ತೇವೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂಪ್ಪ ಅವರಿಗೆ ಸೆಡ್ಡು ಹೊಡೆದಿದ್ದಾರೆ.
ಶಾಸಕರ ಭವನದಲ್ಲಿ ನಡೆದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕೆಲವರು ರಾಯಣ್ಣ ಬ್ರಿಗೇಡ್ ನಿಂತು ಹೋಗಿದೆ. ಅದರ ಕಥೆ ಮುಗಿಯಿತು ಎಂದು ಅಪಪ್ರಚಾರ ನಡೆಸುತ್ತಿದ್ದಾರೆ. ಇನ್ನು ಕೆಲವರಂತೂ ಏಳು ತಿಂಗಳಿಗೆ ಹುಟ್ಟಿದವರಂತೆ ಆಡುತ್ತಿದ್ದಾರೆಂದು ಬಿಎಸ್‍ವೈ ಅವರ ಹೆಸರನ್ನು ಹೇಳದೆ ಕಿಚಾಯಿಸಿದರು.

ರಾಯಣ್ಣ ಬ್ರಿಗೇಡ್ ಹುಟ್ಟಿ ಏಳು ತಿಂಗಳಲ್ಲೇ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಬ್ರಿಗೇಡ್ ಮುಗಿಯಿತು ಎನ್ನುವವರಿಗೆ ಮುಂದಿನ ತಿಂಗಳ 4ರಂದು ಮತ್ತೆ ಪದಾಧಿಕಾರಿಗಳ ಸಭೆ ನಡೆಸಿ ಇದು ಇನ್ನೂ ಜೀವಂತವಾಗಿದೆ ಎಂಬುದನ್ನು ತೋರಿಸಬೇಕಿದೆ. ಅಲ್ಲಿಯವರೆಗೆ ಯಾರೊಬ್ಬರೂ ವಿರೋಧಿಸಬಾರದೆಂದು ಪದಾಧಿಕಾರಿಗಳಿಗೆ ಮನವಿ ಮಾಡಿದರು.  ರಾಯಣ್ಣ ಬ್ರಿಗೇಡ್‍ಗೂ ನಾನು ಪ್ರತಿನಿಧಿಸುವ ಪಕ್ಷಕ್ಕೂ ಸಂಬಂಧಿವಿಲ್ಲ. ಇದೊಂದು ರಾಜಕೀಯೇತರ ಸಂಘಟನೆಯಾಗಿದೆ. ಆದರೆ, ಕೆಲವರಿಗೆ ಬ್ರಿಗೇಡ್ ಕಂಡರೆ ಆಗುವುದಿಲ್ಲ ಎಂದು ಹರಿಹಾಯ್ದರು.  ಮುಂದಿನ ತಿಂಗಳ ನಾಲ್ಕರಂದು ಬೆಂಗಳೂರಿನ ಕಲ್ಯಾಣ ಮಂಟಪವೊಂದರಲ್ಲಿ ಮತ್ತೆ ಪದಾಧಿಕಾರಿಗಳ ಸಭೆ ನಡೆಸಿ ಜಿಲ್ಲಾ ಸಮಿತಿಗಳನ್ನು ರಚಿಸಬೇಕು. ಮಹಿಳಾ ಘಟಕ, ವಕೀಲರ ಘಟಕ, ಕಾನೂನು ಘಟಕ ಸೇರಿದಂತೆ ವಿವಿಧ ಘಟಕಗಳಿಗೆ ಪದಾಧಿಕಾರಿಗಳ ನೇಮಕವೂ ಆಗಬೇಕಿದೆ ಎಂದು ಹೇಳಿದರು.

ದ್ವಿತೀಯ ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ರಾಜ್ಯದ ಪ್ರತಿಯೊಂದು ಕಾಲೇಜಿನ ಇಬ್ಬರು ವಿದ್ಯಾರ್ಥಿಗಳಿಗೆ ತಲಾ ಎರಡೂವರೆಗೆ ಸಾವಿರ ಬಹುಮಾನ ನೀಡಿ ಸನ್ಮಾನಿಸಬೇಕು. ಒಟ್ಟು 5000 ಪದವಿ ಪೂರ್ವ ಕಾಲೇಜುಗಳಿದ್ದು, ವಿದ್ಯಾರ್ಥಿಗಳ ಪೋಷಕರು, ಜಿಲ್ಲಾ ಪದಾಧಿಕಾರಿಗಳು, ಸಮಿತಿ ಸದಸ್ಯರು, ಕಾರ್ಯಕರ್ತರು ಸೇರಿದಂತೆ 50 ಸಾವಿರ ಜನರನ್ನು ಸೇರಿಸಿ ಬೆಂಗಳೂರಿನಲ್ಲಿ ಕಾರ್ಯಕ್ರಮ ಆಯೋಜಿಸುವ ಉದ್ದೇಶವಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‍ಷಾ, ಕೇಂದ್ರ ಸಚಿವರಾದ ಅರುಣ್ ಜೇಟ್ಲಿ, ರಾಜ ನಾಥ್ ಸಿಂಗ್ ಸೇರಿದಂತೆ ಆನೇಕ ಗಣ್ಯರನ್ನು ಆಹ್ವಾನಿಸುವ ಉದ್ದೇಶವಿದೆ ಎಂದು ತಿಳಿಸಿದರು. ಸಭೆಯಲ್ಲಿ ರಾಯಣ್ಣ ಬ್ರಿಗೇಡ್ ಅಧ್ಯಕ್ಷ ವಿರೂಪಾಕ್ಷಪ್ಪ, ಸಂಚಾಲಕ ವೆಂಕಟೇಶ್‍ಮೂರ್ತಿ, ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮಠ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ. ಎಚ್.ಎಸ್, ಶಿವಯೋಗಿಸ್ವಾಮಿ, ಮಾಜಿ ಶಾಸಕ ನೇಮಿರಾಜನಾಯಕ್, ವಿಜಯ್ ಪುರ ಮಠಾಧೀಶರು ಮತ್ತಿತರರು ಪಾಲ್ಗೊಂಡಿದ್ದರು.

ಸಭೆಗೂ ಮುನ್ನ ಸುದ್ದಿಗಾರೊಂದಿಗೆ ಮಾತನಾಡಿದ ಈಶ್ವರಪ್ಪ, ಎರಡು ವಾರಗಳ ಹಿಂದೆ ಬ್ರಿಗೇಡ್ ಸಂಘಟನೆ ಕುರಿತಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಮಾತನಾಡಿದ್ದಾರೆ. ರಾಜಕೀಯ ಚಟುವಟಿಕೆ ಬಿಟ್ಟು ಬ್ರಿಗೇಡ್ ಮುಂದುವರಿಸುವಂತೆ ಸಲಹೆ ನೀಡಿದ್ದರು ಅದರಂತೆ ಇಂದು ಪದಾಧಿಕಾರಿಗಳ ಸಭೆ ನಡೆಸಲಾಗಿದೆ ಎಂದು ತಿಳಿಸಿದರು.  ಬಡವರು, ಹಿಂದುಳಿದ ವರ್ಗದವರು ಸೇರಿದಂತೆ ಎಲ್ಲರಲ್ಲೂ ಬ್ರಿಗೇಡ್ ಬಗ್ಗೆ ಜಾಗೃತಿ ಮೂಡಿಸುವುದು ನಮ್ಮ ಉದ್ದೇಶವಾಗಿದೆ. ಬಿಜೆಪಿಯಲ್ಲಿ ಹಿಂದುಳಿದ ವರ್ಗದವರ ಪ್ರಬಾರಿಯಾಗಿ ಸಂಘಟನೆ ಮಾಡಲು ಅಮಿತ್ ಷಾ ಸೂಚಿಸಿದ್ದಾರೆ, ಪ್ರತಿಯೊಂದು ಜಿಲ್ಲೆಗಳಲ್ಲಿ ಒಬಿಸಿ ಮೋರ್ಚಾ ವತಿಯಿಂದ ಸಮಾವೇಶ ನಡೆಸುವುದಾಗಿ ತಿಳಿಸಿದರು. ರಾಯಣ್ಣ ಬ್ರಿಗೇಡ್‍ಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಈಶ್ವರಪ್ಪ ಸ್ಪಷ್ಟಪಡಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin