ಮುಂದಿನ ಶೈಕ್ಷಣಿಕ ವರ್ಷದಿಂದ ಮುಕ್ತ ಮಾರುಕಟ್ಟೆಯಲ್ಲಿ ಪಠ್ಯ ಪುಸ್ತಕ : ತನ್ವೀರ್ ಸೇಠ್

ಈ ಸುದ್ದಿಯನ್ನು ಶೇರ್ ಮಾಡಿ

Tanveer-Sait---01

ಬೆಂಗಳೂರು, ಫೆ.11– ಮುಂದಿನ ಶೈಕ್ಷಣಿಕ ವರ್ಷದಿಂದ ಮಾರುಕಟ್ಟೆಯಲ್ಲಿ ಪಠ್ಯ ಪುಸ್ತಕ ಲಭ್ಯವಾಗುವಂತೆ ವ್ಯವಸ್ಥೆ, ಆನ್‍ಲೈನ್‍ನಲ್ಲಿ ಪಠ್ಯ ಕ್ರಮ ಅಳವಡಿಕೆ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ದುಬಾರಿ ಬೆಲೆಗೆ ಪುಸ್ತಕ ಮಾರಾಟ ನಿಯಂತ್ರಣಕ್ಕೆ ಎಂಆರ್‍ಪಿ ದರ ನಿಗದಿ ಸೇರಿದಂತೆ ಎಲ್ಲಾರೀತಿಯ ಅಗತ್ಯಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣಾ ಸಚಿವ ತನ್ವೀರ್‍ಸೇಠ್ ಇಂದಿಲ್ಲಿ ಭರವಸೆ ನೀಡಿದರು.  ಅಭಿಮಾನಿ ವಸತಿಯಲ್ಲಿ ಕರ್ನಾಟಕ ಪ್ರಕಾಶಕರ ಮತ್ತು ಪುಸ್ತಕ ವ್ಯಾಪಾರಿಗಳ ಸಂಘ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸಚಿವರು ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಇಂದಿನ ಶಿಕ್ಷಣ ವ್ಯವಸ್ಥೆ ಹೀನಾಯ ಹಂತ ತಲುಪಿದೆ. ಪಠ್ಯದ ಬದಲು ಶಿಕ್ಷಣವೇ ಮಾರಾಟವಾಗುವ ಹಂತ ತಲುಪಿದೆ.

ಸರ್ಕಾರ  ಪ್ರತೀ ವರ್ಷ ಮೂರೂವರೆ ಕೋಟಿ ಪಠ್ಯಪುಸ್ತಕ ಮುದ್ರಿಸಿ  ವಿತರಣೆ ಮಾಡುತ್ತಿದ್ದರೂ  ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲಿನ ಹಿಡಿತ ತಪ್ಪಿದೆ. ಇಂತಹ ಸನ್ನಿವೇಶದಿಂದ ಶಿಕ್ಷಣ ವ್ಯವಸ್ಥೆಯನ್ನು ಸರಿದಾರಿಗೆ ತರಲು ನಮ್ಮ   ಇಲಾಖೆ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಂಡಿದೆ  ಎಂದರು.  ಕೇವಲ 280ರೂ. ಗಳಿಗೆ ಸಿಗಬೇಕಾದ ಪಠ್ಯ ಪುಸ್ತಕಗಳನ್ನು ಖಾಸಗಿ ಶಿಕ್ಷಣ ಸಂಸ್ಥೆಯವರು 2ರಿಂದ 3 ಸಾವಿರದವರೆಗೆ ಮಾರಾಟ ಮಾಡುತ್ತಿದ್ದಾರೆ. ಇದನ್ನು ತಪ್ಪಿಸಲು ಖಾಸಗಿ ವ್ಯಾಪಾರಿಗಳೇ ಪಠ್ಯಪುಸ್ತಕವನ್ನು ಮಾರುಕಟ್ಟೆಯಲ್ಲಿ ಮಾರಲು ಅನುಕೂಲವಾಗುವಂತೆ ಕ್ರಮ ಕೈಗೊಳ್ಳಿ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಈಗಾಗಲೇ ಸ್ಪಷ್ಟ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

ಪ್ರಥಮ ಮತ್ತು ದ್ವಿತೀಯ ಪಿಯುಸಿ ಪಠ್ಯ ಪುಸ್ತಕ ಮುದ್ರಣ ಮಾಡುವವರಿಗೆ ರಾಯಲ್ಟಿ ವಿಧಿಸುವುದು ಸರಿಯಲ್ಲ. ಪಠ್ಯಪುಸ್ತಕಗಳನ್ನು ಸರ್ಕಾರವೇ ಮುದ್ರಿಸಬೇಕೇ ಅಥವಾ ಪ್ರಕಾಶಕರಿಗೆ ನೀಡಬೇಕೇ ಎಂಬ ಬಗ್ಗೆ ತೀರ್ಮಾನ ಮಾಡುವ ಅವಶ್ಯಕತೆ ಇದೆ ಎಂದು ಹೇಳಿದರು.  ಕರ್ನಾಟಕ ಶಿಕ್ಷಣ ನೀತಿಯಡಿ ಮಕ್ಕಳ ಜ್ಞಾನಾಭಿವೃದ್ಧಿ ಮಾಡಲು ಕಾಲ ಕಾಲಕ್ಕೆ ಪುಸ್ತಕ ಪರಿಷ್ಕರಣೆ ಮಾಡುವುದು ಅವಶ್ಯ. ವಿಜ್ಞಾನ, ಇತಿಹಾಸ, ಗಣಿತ ಪಠ್ಯಗಳಲ್ಲೂ ರಾಜ್ಯದ ಉಲ್ಲೇಖವಿರಬೇಕು. ಭಾಷೆ ವಿಷಯದಲ್ಲಿ ಆಯಾ ರಾಜ್ಯಗಳ ಸಾಹಿತಿಗಳು ಮತ್ತು ರಾಜ್ಯಕ್ಕೆ ಕೊಡುಗೆ ನೀಡಿದವರ ಉಲ್ಲೇಖವಿರುವುದು ಸೂಕ್ತ ಎಂದು ಸಚಿವರು ಅಭಿಪ್ರಾಯಪಟ್ಟರು.

ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ದುಬಾರಿ ಬೆಲೆಗೆ ಪಠ್ಯಪುಸ್ತಕ ಮಾರಾಟ ಮಾಡುವುದನ್ನು ತಪ್ಪಿಸಲು ಪುಸ್ತಕದ ಮೇಲೆ ಎಂಆರ್‍ಪಿ ದರ ಪ್ರಕಟಿಸಿದರೆ ಜನ ಮೋಸ ಹೋಗಲ್ಲ. ಇದರ ಜತೆಗೆ ಪಠ್ಯಪುಸ್ತಕಗಳ ಮೇಲೆ ಆಯಾ ವರ್ಷವನ್ನು ಮುದ್ರಿಸುವುದನ್ನು ಕೈ ಬಿಡಲಾಗುವುದು ಎಂದು ಹೇಳಿದರು.  ಒಟ್ಟಾರೆ ಮಕ್ಕಳಿಗೆ ಯಾವುದೇ ತೊಂದರೆಯಿಲ್ಲದಂತೆ ಪಠ್ಯ ಪುಸ್ತಕ ಸಿಗುವಂತೆ ಶಿಕ್ಷಣ ಇಲಾಖೆಯಿಂದ ಎಲ್ಲಾ ವ್ಯವಸ್ಥೆ ಮಾಡುವುದರ ಜತೆಗೆ ಸಂಘದ ಪದಾಧಿಕಾರಿಗಳ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಮಹಾನ್ ನಾಯಕ:

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅಭಿಮಾನಿ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಟಿ.ವೆಂಕಟೇಶ್ ಅವರು ಮಾತನಾಡಿ, ಶಿಕ್ಷಕರು ಕೇವಲ ಮಕ್ಕಳಿಗೆ ವಿದ್ಯೆ ಕಲಿಸಬೇಕೇ ಹೊರತು ವ್ಯಾಪಾರಿಗಳಾಗಬಾರದು. ಹೀಗಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ದುಬಾರಿ ಬೆಲೆಗೆ ಪಠ್ಯಪುಸ್ತಕ ಮಾರಾಟವಾಗುವುದನ್ನು ತಪ್ಪಿಸಬೇಕೆಂದು ಸಚಿವರಿಗೆ ಮನವಿ ಮಾಡಿಕೊಂಡರು.  ಇದೇ ಸಂದರ್ಭದಲ್ಲಿ ಅವರು, ಹಿರಿಯ ಮುತ್ಸದಿ ರಾಜಕಾರಣಿ ಅಜೀಜ್‍ಸೇಠ್ ಅವರ ಒಡನಾಟವನ್ನು ಸ್ಮರಿಸಿಕೊಂಡರು. ಶೋಷಿತರು, ದೀನದಲಿತರು ಹಾಗೂ ಬೀಡಿ ಕಾರ್ಮಿಕರನ್ನೇ ತಮ್ಮ ಉಸಿರನ್ನಾಗಿಸಿಕೊಂಡಿದ್ದ ಅಜೀಜ್‍ಸೇಠ್ ಅವರು ಮುಸಲ್ಮಾನ್ ಸಮುದಾಯದ ಮಹಾನ್ ನಾಯಕರಾಗಿ ಗೋಚರಿಸುತ್ತಾರೆ ಎಂದರು.

ಸಮಾರಂಭದಲ್ಲಿ ಕರ್ನಾಟಕ ಪ್ರಕಾಶಕರ ಮತ್ತು ಪುಸ್ತಕ ವ್ಯಾಪಾರಿಗಳ ಸಂಘದ ಅಧ್ಯಕ್ಷ ಎ.ರಮೇಶ್ ಸಚಿವರಿಗೆ ಸಂಘದ ಬೇಡಿಕೆ ಈಡೇರಿಸುವಂತೆ ಮನವಿ ಪತ್ರ ಸಲ್ಲಿಸಿದರು.
ಸಂಘದ ಉಪಾಧ್ಯಕ್ಷ ವಿ.ಶ್ರೀನಿವಾಸ್, ಖಜಾಂಚಿ ಕೆ.ವಿ. ರಮೇಶ್, ಕಾರ್ಯದರ್ಶಿಗಳಾದ ಪ್ರದೀಪ್, ಜಿಯಾಉದ್ದೀನ್ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಂಘದ ಪದಾಧಿಕಾರಿಗಳು ಮತ್ತು ಸರ್ವಸದಸ್ಯರು ಹಾಜರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin