ರಾಜ್ಯದಲ್ಲಿ 1.50ಲಕ್ಷ ಕೋಟಿ ಬಂಡವಾಳ ಹೂಡಿಕೆ ಸಾಧನೆ : ಸಿಎಂ ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

India-Forme-c--01

ಬೆಂಗಳೂರು, ಫೆ.11– ನಿಗದಿತ ಕಾಲ ಮಿತಿಯೊಳಗೆ ತಮ್ಮ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಾಗುವಂತೆ ಬಂಡವಾಳ ಹೂಡಿಕೆದಾರರಿಗೆ ಪೂರಕ ವಾತಾವರಣ ಸೃಷ್ಟಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಘೋಷಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದಲ್ಲಿ ತಮ್ಮ ನೆಲೆಗಳನ್ನು ಸ್ಥಾಪಿಸಲು ಮುಂದಾಗುವ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕಂಪೆನಿಗಳಿಗೆ ಕೆಂಪು ಹಾಸಿನ ಸ್ವಾಗತ ನೀಡಲಿದೆ ಎಂದು ತಿಳಿಸಿದ್ದಾರೆ.  ನಗರದ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಇಂದು ಇಂಡಿಯಾ ಫಾರ್ಮಾ-2017- ಔಷಧಿ ತಯಾರಿಕೆ ಉದ್ಯಮಗಳ ದ್ವಿತೀಯ ಅಂತಾರಾಷ್ಟ್ರೀಯ ಪ್ರದರ್ಶನ ಮತ್ತು ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಇದೇ ವೇಳೆ ಬಂಡವಾಳಗಳನ್ನು ಆಕರ್ಷಿಸಲು ಹೂಡಿಕೆದಾರರಿಗೆ ಸುಲಭವಾಗುವ ವಿಧಾನಗಳನ್ನು ಕ್ರಮಬದ್ಧಗೊಳಿಸಲು ಏಕಗವಾಕ್ಷಿ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ ಎಂದು ಅವರು ತಿಳಿಸಿದರು.  ರಾಜ್ಯದಲ್ಲಿ ಹೆಚ್ಚು ಹೆಚ್ಚು ಬಂಡವಾಳಗಳನ್ನು ಆಕರ್ಷಿಸಲು ನಾವು ಪ್ರಗತಿಪರ ನೀತಿ ಮತ್ತು ಕ್ರಿಯಾಶೀಲ ವ್ಯವಸ್ಥೆಯನ್ನು ಜಾರಿಗೆ ತಂದಿದ್ದೇವೆ. 2016ರ ಜನವರಿಯಿಂದ ನವೆಂಬರ್ ವೇಳೆಗೆ ಕರ್ನಾಟಕವು 1.50 ಲಕ್ಷ ಕೋಟಿ ಬಂಡವಾಳ ಹೂಡಿಕೆ ಆಕರ್ಷಿಸುವ ಗುರಿಸಾಧನೆಯಲ್ಲಿ ಯಶಸ್ವಿಯಾಗಿ ಭಾರತದ ನಂ.1 ರಾಜ್ಯವಾಗಿದೆ ಎಂದು ಮುಖ್ಯಮಂತ್ರಿ ಹೆಮ್ಮೆಯಿಂದ ಹೇಳಿಕೊಂಡರು.

ಕರ್ನಾಟಕವು ಸದಾ ಉದ್ಯಮ ಸ್ನೇಹಿ ರಾಜ್ಯವಾಗಿದೆ. ಅದನ್ನು ಭವಿಷ್ಯದಲ್ಲೂ ಅತ್ಯಂತ ಯಶಸ್ವಿಯಾಗಿ ಮುಂದುವರೆಸಲಿದೆ. ನಮ್ಮ ರಾಜ್ಯವನ್ನು ಸ್ಥಳೀಯ, ದೇಶೀಯ ಮತ್ತು ಸಾಗರೋತ್ತರ ಹೂಡಿಕೆದಾರರಿಗೆ ಬಂಡವಾಳ ಹೂಡಿಕೆಯ ಅತ್ಯಂತ ಪ್ರಶಸ್ತ ತಾಣವಾಗಿ ಮಾರ್ಪಡಿಸುವ ಹೆಗ್ಗುರಿಯನ್ನು ಸಾಕಾರಗೊಳಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.  ಪ್ರಸ್ತುತ ಕರ್ನಾಟಕದಲ್ಲಿ 230ಕ್ಕೂ ಹೆಚ್ಚು ಔಷಧಿ ತಯಾರಿಕಾ ಮತ್ತು ಜೈವಿಕ ತಂತ್ರಜ್ಞಾನ ಕಂಪೆನಿಗಳಿವೆ. ರಾಜ್ಯವು ದೇಶದ ಔಷಧ ಉತ್ಪನ್ನಗಳಲ್ಲಿ ಶೇ.40ರಷ್ಟು ರಫ್ತು ಮಾಡುತ್ತಿದೆ. ದೇಶದ ಔಷಧ ತಯಾರಿಕಾ ಆದಾಯದಲ್ಲಿ ರಾಜ್ಯದ ಪಾಲು ಶೇ.8ರಷ್ಟಿದೆ ಎಂದು ಸಿಎಂ ವಿವರಿಸಿದರು.

ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮಗಳ ಅನುಷ್ಠಾನ ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ, ಕಳೆದ ಎರಡು ದಶಕಗಳಲ್ಲಿ ಭಾರತ ಔಷಧ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆ ಕಂಡಿದೆ. ಅದರಲ್ಲೂ ಕಳೆದ ವರ್ಷ ಗಣನೀಯ ಪ್ರಗತಿ ಸಾಧಿಸಿರುವುದು ಯಶಸ್ಸಿನ ಮೈಲಿಗಲ್ಲು ಎಂದು ಬಣ್ಣಿಸಿದರು.  ದೇಶದ ನಾಗರಿಕರಿಗೆ ಉತ್ತಮ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಾಕಷ್ಟು ಮುಂದಾಲೋಚನೆ ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆ. ಇದರಂತೆಯೇ ಹೊಸ ಔಷಧಗಳ ಆವಿಷ್ಕಾರದ ಜತೆಗೆ ಚಿಕಿತ್ಸೆ ವಿಧಾನದಲ್ಲೂ ಹಲವಾರು ಆಧುನಿಕ ಬದಲಾವಣೆಗಳು ಬರುತ್ತಿರುವುದು ಉತ್ತಮ ಬೆಳವಣಿಗೆ ಎಂದು ಬಣ್ಣಿಸಿದರು.

ಈ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೂ ಉತ್ತಮ ಅವಕಾಶವಿದೆ. ಸಂಶೋಧನೆ ಮತ್ತು ಉತ್ಪಾದನೆಗೆ ಪ್ರಾಶಸ್ತ್ಯ ವಾತಾವರಣವೂ ಕೂಡ ಇದೆ. ಗುಣಮಟ್ಟ ಹಾಗೂ ಸುರಕ್ಷಿತ ಔಷಧಿಗಳನ್ನು ಉತ್ಪಾದಿಸುವ ಜತೆಗೆ ಗ್ರಾಹಕರಿಗೆ ಕಡಿಮೆ ವೆಚ್ಚದಲ್ಲಿ ನೀಡುವತ್ತ ಕೂಡ ಗಮನ ಹರಿಸಬೇಕೆಂದು ಉದ್ಯಮಿಗಳಿಗೆ ಸಲಹೆ ನೀಡಿದರು.  ಕಾರ್ಯಕ್ರಮದಲ್ಲಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತ್‍ಕುಮಾರ್, ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ನಿರ್ಮಲಾ ಸೀತಾರಾಮನ್, ರಾಜ್ಯ ಬೃಹತ್ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಮುಂತಾದವರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin