ರಾಯಣ್ಣ ಬ್ರಿಗೇಡ್ ಮತ್ತೆ ಆಕ್ಟಿವ್ : ಪದಾಧಿಕಾರಿಗಳ ಪಟ್ಟಿ ಬದಲಿಸಲು ಪಟ್ಟು, ವರಿಷ್ಠರಿಗೆ ದೂರು

ಈ ಸುದ್ದಿಯನ್ನು ಶೇರ್ ಮಾಡಿ

Eshwarappa-Yadiyurappa

ಬೆಂಗಳೂರು, ಫೆ.11- ವರಿಷ್ಠರ ಸೂಚನೆಯಂತೆ ಈಗಾಗಲೇ ನೇಮಕಗೊಂಡಿರುವ ಪದಾಧಿಕಾರಿಗಳ ಪಟ್ಟಿಯನ್ನು ಬದಲಾವಣೆ ಮಾಡದಿದ್ದರೆ ವರಿಷ್ಠರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ದೂರು ನೀಡಲು ಇಂದು ನಡೆದ ಸಂಗೊಳ್ಳಿ ರಾಯಣ್ಣ ಬಿಗ್ರೇಡ್ ಸಭೆಯಲ್ಲಿ ತೀರ್ಮಾನಿಸಲಾಗಿದೆ. ರಾಯಣ್ಣ ಬಿಗ್ರೇಡ್ ಚಟುವಟಿಕೆ ಹಾಗೂ ಸಂಘಟನೆ ಕುರಿತಂತೆ ಬೆಂಗಳೂರಿನ ಶಾಸಕರ ಭವನದಲ್ಲಿಂದು ನಡೆದ ಪ್ರಮುಖರ ಸಭೆಯಲ್ಲಿ ಪದಾಧಿಕಾರಿಗಳ ಪಟ್ಟಿಯನ್ನು ಪರಿಷ್ಕರಣೆ ಮಾಡಿ, ಪಕ್ಷದ ಮೂಲ ಕಾರ್ಯಕರ್ತರಿಗೆ ನೀಡುವಂತೆ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು. ಮೇಲ್ಮನೆ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ, ರಾಯಣ್ಣ ಬಿಗ್ರೇಡ್ ರಾಜ್ಯಧ್ಯಕ್ಷ ವಿರೂಪಾಕ್ಷಪ್ಪ, ಸಂಚಾಲಕ ಹಾಗೂ ಬಿಬಿಎಂಪಿ ಮಾಜಿ ಮೇಯರ್ ವೆಂಕಟೇಶ್ ಮೂರ್ತಿ,ಮುಖಂಡರಾದ ಮುಕಡಪ್ಪ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ಇತ್ತೀಚಿನ ಬೆಳವಣಿಗೆಗಳು ಹಾಗೂ ರಾಯಣ್ಣ ಬಿಗ್ರೇಡ್ , ಸಂಘಟನೆ  ಬಗ್ಗೆ ವಿಸ್ತೃತ ಚರ್ಚೆ ನಡೆಯಿತು.

ಬಿಗ್ರೇಡ್ ನೆಪದಲ್ಲಿ ಸಭೆ ಸೇರಿದ್ದ ಮುಖಂಡರು ಯಡಿಯೂರಪ್ಪ ಕಾರ್ಯವೈಖರಿಗೆ ಭಾರೀ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವರಿಷ್ಠರ ಸೂಚನೆ ಧಿಕ್ಕರಿಸಿ ಪದಾಧಿಕಾರಿಗಳ ಪಟ್ಟಿ ಬದಲಾಯಿಸದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಜ.ರಂದು ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರೊಂದಿಗೆ ವರಿಷ್ಠರು ಚರ್ಚಿಸಿದ್ದು, ಇನ್ನುಮುಂದೆ ಬ್ರಿಗೇಡ್ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಾರದೆಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಬ್ರಿಗೇಡ್ ಚಟುವಟಿಕೆ ಕುರಿತಂತೆ ಇಂದಿನ ಸಭೆಯಲ್ಲಿ ಚರ್ಚೆ ನಡೆದಿದೆ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ರಾಜಕೀಯೇತರ  ಸಂಘಟನೆಯಾಗಿದ್ದು, ಅದರ ಚಟುವಟಿಕೆಗಳು ಮುಂದುವರೆಯಲಿವೆ ಎಂದು ಈಶ್ವರಪ್ಪ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.ಬ್ರಿಗೇಡ್ ಚಟುವಟಿಕೆಯಲ್ಲಿ ಪಾಲ್ಗೊಂಡವರಿಗೆ ನೋಟಿಸ್ ನೀಡಿರುವ ವಿಚಾರ, ಪದಾಧಿಕಾರಿಗಳ ಬದಲಾವಣೆ ಕುರಿತು ರಚನೆಯಾಗಿದ್ದ ಸಮಿತಿ ಸಭೆ ನಡೆಸದ ಬಗ್ಗೆ ಚರ್ಚೆ ನಡೆಯಿತು.ಪದಾಧಿಕಾರಿಗಳ ಬದಲಾವಣೆ ಮಾಡುವಂತೆ ವರಿಷ್ಠರು ಸೂಚನೆ ನೀಡಿದ್ದರೂ ಸಹ ರಾಜ್ಯಾಧ್ಯಕ್ಷ   ಬಿ.ಎಸ್. ಯಡಿಯೂರಪ್ಪನವರು ಪಟ್ಟಿ ಬದಲಾವಣೆಗೆ ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನು ಎರಡು-ಮೂರು ದಿನಗಳಲ್ಲಿ ಪದಾಧಿಕಾರಿಗಳ ಪಟ್ಟಿ ಪರಿಷ್ಕರಣೆ ಆಗದಿದ್ದರೆ ವರಿಷ್ಠರನ್ನು ಭೇಟಿ ಮಾಡಿ ಪಟ್ಟಿ ಬದಲಾವಣೆಗೆ ಮತ್ತೊಮ್ಮೆ ಮನವಿ ಮಾಡುವ ನಿರ್ಧಾರಕ್ಕೆ ಬರಲಾಗಿದೆ.
ದೆಹಲಿಯಲ್ಲಿ ನಡೆದ ಸಭೆಯಂತೆ ಫೆ.10ರೊಳಗೆ ಪದಾಧಿಕಾರಿಗಳ ಪಟ್ಟಿಯನ್ನು ಪರಿಷ್ಕರಿಸುವ ಸಂಬಂಧ ಮುಖಂಡರ ಜತೆ ಚರ್ಚಿಸಿ ವರದಿ ನೀಡಬೇಕೆಂಬುದು ಅಮಿತ್ ಷಾ ನೀಡಿದ ಸೂಚನೆಯಾಗಿತ್ತು. ಸಮಿತಿಯು ಸಭೆ ನಡೆಸಿ ಯಾವ ಯಾವ ಜಿಲ್ಲೆಗಳಲ್ಲಿ ಪದಾಧಿಕಾರಿಗಳ ಪಟ್ಟಿ ಬದಲಾವಣೆ ಮಾಡಬೇಕು ಎಂಬುದರ ಬಗ್ಗೆ ವರದಿ ನೀಡಬೇಕಿತ್ತು. ಆದರೆ, ಈವರೆಗೂ ಯಡಿಯೂರಪ್ಪ ಸಭೆ ನಡೆಸುವ ಗೋಜಿಗೆ ಹೋಗಿಲ್ಲ.ಇದುವೇ ಅಸಮಾಧಾನಕ್ಕೆ ಕಾರಣವಾಗಿದೆ.

ಜಿಲ್ಲಾ ಪದಾಧಿಕಾರಿಗಳ ಬದಲಾವಣೆಯಲ್ಲಿ ಜಿಲ್ಲಾ ಪ್ರಮುಖರ ಅಭಿಪ್ರಾಯಗಳನ್ನು ಪಡೆಯಬೇಕು. ರಾಜ್ಯ ಪದಾಧಿಕಾರಿಗಳ ಬಗ್ಗೆಯೂ ಅಸಮಾಧಾನವಿದೆ. ಸಂಘಟನೆ ದೃಷ್ಟಿಯಿಂದ ಆದಷ್ಟು ಶೀಘ್ರ ಈ ಸಮಸ್ಯೆಗಳನ್ನು ಬಗೆಹರಿಸಬೇಕೆಂಬ ಅಭಿಪ್ರಾಯವ್ಯಕ್ತವಾಗಿದೆ. ತುಮಕೂರು, ಮೈಸೂರು, ಚಾಮರಾಜನಗರ, ದಾವಣಗೆರೆ, ಬಳ್ಳಾರಿ, ಬೀದರ್, ಕಲಬುರಗಿ, ಹಾವೇರಿ , ಹಾಸನ ಸೇರಿದಂತೆ ಹಲವು ಜಿಲ್ಲೆಗಳ ಅಧ್ಯಕ್ಷರು ಮತ್ತು ವಿವಿಧ ಮೋರ್ಚಾಗಳ ಮುಖಂಡರನ್ನು ಬದಲಾಯಿಸಬೇಕೆಂಬುದು ಈಶ್ವರಪ್ಪನವರ ಬೇಡಿಕೆಯಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin