ನಿಲ್ಲದ ಹಾಲು ಕಲಬೆರಕೆ ದಂಧೆ ದಾಳಿ : ಓರ್ವ ವ್ಯಕ್ತಿ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

5

ರಾಯಬಾಗ,ಫೆ.11- ಖಚಿತ ಮಾಹಿತಿ ಮೇರೆಗೆ ಹಾಲು ಕಲಬೆರೆಕೆ ಮಾಡುತ್ತಿರುವ ಘಟಕದ ಮೇಲೆ ಇಲ್ಲಿನ ಪೊಲೀಸರು ದಾಳಿ ಮಾಡಿ ಓರ್ವ ವ್ಯಕ್ತಿಯನ್ನು ಬಂಧಿಸಿ, ಆತನಿಂದ ಜರ್ಮನ ಡಬ್ಬದಲ್ಲಿ ತುಂಬಿದ್ದ ಅಂದಾಜು 8 ಕೆ.ಜಿ. ರಾಸಾಯನಿಕ ಪೌಡರ ವಶಪಡಿಸಿಕೊಂಡಿರುವ ಘಟನೆ ನಿನ್ನೆ ತಾಲೂಕಿನ ಹಳೇ ದಿಗ್ಗೇವಾಡಿ ಗ್ರಾಮದಲ್ಲಿ ನಡೆದಿದೆ.ಗ್ರಾಮದ ರವೀಂದ್ರ ರಾಮಚಂದ್ರ ಚೌಗುಲೆ ಬಂಧಿತ ಆರೋಪಿ. ಪ್ರಭಾರಿ ಪಿಎಸ್‍ಐ (ಹಾರೂಗೇರಿ ಪಿಎಸ್‍ಐ) ಎಮ್.ಆರ್. ತಹಶೀಲ್ದಾರ ಅವರು ತಮ್ಮ ಸಿಬ್ಬಂದಿ ಜೊತೆ ಖಚಿತ ಮಾಹಿತ ಪಡೆದು ಹಳೇ ದಿಗ್ಗೇವಾಡಿ ಗ್ರಾಮದಲ್ಲಿರುವ ರವೀಂದ್ರ ಚೌಗುಲೆ ಅವರ ಮನೆ ಮೇಲೆ ದಾಳಿ ಮಾಡಿ ಆತನನ್ನು ವಶಪಡಿಸಿಕೊಂಡು ತೀವ್ರವಾಗಿ ವಿಚಾರಣೆಗೆ ಒಳಪಡಿಸಿ, ಆತನು ಹಾಲು ಕಲಬೆರಿಕೆ ಮಾಡಲು ಸಂಗ್ರಹಿಸಿದ್ದ ಅಂದಾಜು 8 ಕೆ.ಜಿ. ರಾಸಾಯನಿಕ ತುಂಬಿದ್ದ ಪೌಡರ ಮತ್ತು ಕಲಬೆರಿಕೆಗಾಗಿ ಉಪಯೋಗಿಸುತ್ತಿದ್ದ ಕಚ್ಚಾ ವಸ್ತುಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ದಾಳಿಯಲ್ಲಿ ಪಟ್ಟಣ ಪೊಲೀಸ್ ಸಿಬ್ಬಂದಿ ಆರ್.ಬಿ. ಖಾನಾಪೂರ, ಎಸ್.ಎಸ್. ಸಾಸನೂರ ಪಾಲ್ಗೊಂಡಿದ್ದರು. ಆರೋಪಿ ಚೌಗುಲೆ ಕಳೆದ 2 ವರ್ಷಗಳ ಹಿಂದೆ ಹಾಲು ಕಲಬೆರೆಕೆ ಮಾಡುತ್ತಿದ್ದಾಗ, ಬೆಳಗಾವಿ ಎಸ್‍ಪಿ ಆದೇಶದ ಮೇರೆಗೆ ಆಗಿನ ಚಿಕ್ಕೋಡಿ ಡಿವಾಯ್‍ಎಸ್‍ಪಿ ತಮ್ಮ ಸಿಬ್ಬಂದಿಯೊಂದಿಗೆ ಹಳೇ ದಿಗೇವಾಡಿ ಗ್ರಾಮದ ಆತನ ಮನೆಯ ಮೇಲೆ ದಾಳಿ ಮಾಡಿ ಸಾಕಷ್ಟು ಪ್ರಮಾಣದಲ್ಲಿ ಕಲಬೆರಿಕೆ ಪೌಡರ್, ಯೂರಿಯಾ ಸೇರಿದಂತೆ ಕಲಬೆರೆಕೆಗೆ ಉಪಯೋಗಿಸುವ ವಸ್ತುಗಳನ್ನು ವಶಪಡಿಸಿಕೊಂಡು ಆತನ ಮೇಲೆ ಪ್ರಕರಣ ದಾಖಲಿಸಿಕೊಂಡು ಜೈಲಿಗೆ ಅಟ್ಟಿದ್ದರು. ಆದರೆ ಮತ್ತೇ ಜೈಲಿನಿಂದ ಬಿಡುಗಡೆಯಾಗಿ ಬಂದ ನಂತರ ಆತನು ತನ್ನ ಹಳೇ ಚಾಳಿಯನ್ನು ಮುಂದುವರೆಸಿ ಮತ್ತೇ ಹಾಲು ಕಲಬೆರಿಕೆ ಮಾಡು ವುದನ್ನು ಮುಂದುವರಿಸಿದ್ದಾನೆ.

ನಿನ್ನೆ ಪಿಎಸ್‍ಐ ಎಮ್.ಆರ್. ತಹಶೀಲ್ದಾರ ನೇತೃತ್ವದ ತಂಡವು ದಾಳಿ ನಡೆಸಿ ಆತನನ್ನು ಬಂಧಿಸಿ, ತನಿಖೆ ಕೈಗೊಂಡಿದ್ದಾರೆ. ಕೃಷ್ಣಾ ನದಿ ತೀರದ ಹೈನುಗಾರಿಕೆ ಬೆಲ್ಟ್ ಅನ್ನಿಸಿಕೊಂಡಿರುವ ಬಾವನ ಸೌಂದತ್ತಿ, ದಿಗ್ಗೇವಾಡಿ, ಜಲಾಲಪೂರ, ಭಿರಡಿ ಗ್ರಾಮಗಳಲ್ಲಿ ಹಾಲು ಕಲಬೆರಿಕೆ ಮಾಡುವ ದೊಡ್ಡ ಮಾಫಿಯಾ ಹುಟ್ಟಿಕೊಂಡಿದೆ.  ಈ ಭಾಗದಲ್ಲಿ ಹಾಲು ಕಲಬೆರೆಕೆ ಮಾಡುವ ಘಟಕಗಳಿದ್ದು, ಈಗಾಗಲೇ ಪೊಲೀಸರು ಸಾಕಷ್ಟು ಬಾರಿ ದಾಳಿ ಮಾಡಿ ಪ್ರಕರಣಗಳನ್ನು ದಾಖಲಿಸಿದ್ದರೂ, ಈ ದಂಧೆ ಇನ್ನು ಸಂಪೂರ್ಣ ನಿಂತಿಲ್ಲ, ಇನ್ನಾದರೂ ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ದಾಳಿ ಮಾಡಿ ಮನುಷ್ಯನ ಆರೋಗ್ಯಕ್ಕೆ ಮಾರಕವಾದ ಹಾಲು ಕಲಬೆರಿಕೆ ಘಟಕಗಳನ್ನು ಸಂಪೂರ್ಣ ಮಟ್ಟ ಹಾಕಬೇಕೆಂಬುದು ಸಾರ್ವಜನಿಕರ ಒತ್ತಾಸೆ.

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin