ರೈತರ ಅರ್ಧ ಸಾಲಮನ್ನಾ ಮಾಡಲು ಪ್ರಧಾನಿಗೆ ಪತ್ರ : ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah-025

ಬೆಂಗಳೂರು, ಫೆ.14- ಸಹಕಾರ ಬ್ಯಾಂಕು ಮತ್ತು ಸಂಘ-ಸಂಸ್ಥೆಗಳ ಮೂಲಕ ನೀಡಿರುವ ಸಾಲದಲ್ಲಿ ಅರ್ಧದಷ್ಟನ್ನು ಮನ್ನಾ ಮಾಡಲು ರಾಜ್ಯ ಸರ್ಕಾರ ಸಿದ್ದವಿದೆ. ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ನೀಡಿರುವ ಸಾಲ ಮನ್ನಾ ಮಾಡಿ ಎಂದು ಇನ್ನೆರಡು ದಿನಗಳಲ್ಲಿ ಪ್ರಧಾನಮಂತ್ರಿಯವರಿಗೆ ಪತ್ರ ಬರೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.  ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಸುದೀರ್ಘವಾಗಿ ನಡೆದ ಚರ್ಚೆಗೆ ವಿಧಾನಸಭೆಯಲ್ಲಿ ಉತ್ತರ ನೀಡಿದ ಸಿಎಂ, ಕೃಷಿ ಸಾಲದ ಬಗ್ಗೆ ಸಮಗ್ರ ವಿವರ ಬಿಡಿಸಿಟ್ಟರು. ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು ನಾವು. ಬಡ್ಡಿಯ ಪ್ರಮಾಣದಲ್ಲಿ ಶೇ.7ರಷ್ಟನ್ನು ರಾಜ್ಯ ಸರ್ಕಾರ, ಶೇ.3ರಷ್ಟನ್ನು ಕೇಂದ್ರ ಸರ್ಕಾರ ಭರಿಸುತ್ತಿದೆ. ಇದಕ್ಕಾಗಿ ರಾಜ್ಯ ಸರ್ಕಾರ 900 ಕೋಟಿ ರೂ. ನೀಡುತ್ತಿದೆ. 2016-17ರಲ್ಲಿ 23.2 ಲಕ್ಷ ರೈತರಿಗೆ 10,500 ಕೋಟಿ ರೂ. ಸಹಕಾರ ಸಂಘಗಳ ಮೂಲಕ ರಾಜ್ಯ ಸರ್ಕಾರ ನೀಡಿದೆ.

ರಾಷ್ಟ್ರೀಕೃತ ಬ್ಯಾಂಕುಗಳಿಂದ ಸುಮಾರು 23ಲಕ್ಷ ರೈತರಿಗೆ ಕೇಂದ್ರ ಸರ್ಕಾರ 42 ಸಾವಿರ ಕೋಟಿ ಸಾಲ ನೀಡಿದೆ. ಒಟ್ಟು ರಾಜ್ಯದ ಕೃಷಿ ಸಾಲದ ಪ್ರಮಾಣ 52 ಸಾವಿರ ಕೋಟಿ. ಒಟ್ಟು ಸಾಲದ ಪ್ರಮಾಣದಲ್ಲಿ ಕರ್ನಾಟಕದ ಪಾಲು 19.85ರಷ್ಟು ಮಾತ್ರ. ಉಳಿದ ಶೇ.80.15ರಷ್ಟು ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಇದೆ. ನಾವು ಮಾತ್ರ ಸಾಲ ಮನ್ನಾ ಮಾಡಿದರೆ ರೈತರಿಗೆ ಅನುಕೂಲ ಆಗುವುದಿಲ್ಲ. ಹೀಗಾಗಿ ರಾಷ್ಟ್ರೀಕೃತ ಬ್ಯಾಂಕುಗಳ ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಬೇಕು. ಈ ಬಗ್ಗೆ ಪ್ರಧಾನಿ ಅವರನ್ನು ಮುಖಾತಃ ಭೇಟಿಯಾಗಿದ್ದಾಗ ಮನವಿ ಮಾಡಿದ್ದೇನೆ ಎಂದರು.

ರಾಜ್ಯದಲ್ಲಿ ಭೀಕರ ಬರಗಾಲ ಇದೆ. ನಾನು ಈವರೆಗೂ ಎಂದೂ ನೋಡದಂತಹ ಬರಗಾಲ ಕಳೆದ ಎರಡು ವರ್ಷಗಳಿಂದಲೂ ಇದೆ. ರಾಜ್ಯ ಸರ್ಕಾರ ಸುಮಾರು 6 ವರ್ಷದಿಂದಲೂ ನಿರಂತರ ಬರಕ್ಕೆ ತುತ್ತಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ರೈತರ ಸಾಲವನ್ನು ಮನ್ನಾ ಮಾಡುವಂತೆ ಪ್ರಧಾನಿ ಅವರಿಗೆ ಇನ್ನೆರಡು ದಿನಗಳಲ್ಲಿ ಪತ್ರ ಬರೆಯುತ್ತೇನೆ ಎಂದು ತಿಳಿಸಿದರು.
ಜಗದೀಶ್ ಶೆಟ್ಟರ್ ಅವರು ಅಧಿಕಾರದ ಕೊನೆ ಅವಧಿಯಲ್ಲಿ ರೈತರ ಸಾಲ ಮನ್ನಾ ಮಾಡಿ ಹೋದರು. ಅವರಿದ್ದಾಗ 960 ಕೋಟಿ ಮಾತ್ರ ಬಿಡುಗಡೆಯಾಗಿತ್ತು. ನಾನು ಮುಖ್ಯಮಂತ್ರಿ ಆದ ಮೇಲೆ 2300 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿ ಅದನ್ನು ತೀರಿಸಿದ್ದೇನೆ ಎಂದರು.

ಈ ನಡುವೆ ಮಧ್ಯ ಪ್ರವೇಶಿಸಿದ ಜೆಡಿಎಸ್‍ನ ಶಾಸಕ ಕೋನಾರೆಡ್ಡಿ ಅವರು, ಒಬ್ಬರಮೇಲೊಬ್ಬರು ಹೇಳಿ ಸಾಲ ಮನ್ನಾ ಮಾಡದೆ ರೈತರಿಗೆ ಅನ್ಯಾಯ ಮಾಡಬೇಡಿ, ಕೇಂದ್ರವಾದರೂ ಸರಿ ರಾಜ್ಯವಾದರು ಸರಿ ರೈತರ ಸಾಲ ಮನ್ನಾ ಮಾಡಿ ಎಂದು ಮನವಿ ಮಾಡಿದರು. ಅದಕ್ಕಾಗಿಯೇ ಕೇಂದ್ರಕ್ಕೆ ಪತ್ರ ಬರೆಯುತ್ತಿದ್ದೇನೆ ಎಂದು ಸಿಎಂ ಹೇಳಿದರು.  ರಾಜ್ಯದಲ್ಲಿ 160 ತಾಲ್ಲೂಕುಗಳು ಬರ ಪೀಡಿತವಾಗಿವೆ. ಹಿಂಗಾರು ಮಳೆ ಕೊರತೆಯಿಂದ 17ಸಾವಿರ ಕೋಟಿ ರೂ. ನಷ್ಟವಾಗಿದೆ. ಮಾರ್ಗಸೂಚಿ ಅನುಷ್ಠಾನ 4700 ಕೋಟಿ ಅನುದಾನವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಬೇಕಿತ್ತು. ಆದರೆ, 1772ಕೋಟಿ ಮಂಜೂರು ಮಾಡಿದೆ. ಈ ಹಣವನ್ನು ಒಂದೇ ಕಂತಿನಲ್ಲಿ ಬಿಡುಗಡೆ ಮಾಡಿದರೆ ರೈತರಿಗೆ ಬೆಳೆ ಹಾನಿ ಪರಿಹಾರ ನೀಡಲು ಸಾಧ್ಯವಾಗುತ್ತದೆ ಎಂದು ನಿನ್ನೆ ಬೆಂಗಳೂರಿಗೆ ಆಗಮಿಸಿದ್ದ ಕೇಂದ್ರ ಹಣಕಾಸು ಸಚಿವ ಅರುಣ್‍ಜೇಟ್ಲಿ ಅವರಿಗೆ ಮನವಿ ಮಾಡಿದ್ದೇನೆ. ಅದಕ್ಕೆ ಅವರು ಒಪ್ಪಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಹಿಂಗಾರು ಮಳೆ ಕೊರತೆಯಿಂದ 7ಸಾವಿರ ಕೋಟಿರೂ ಬೆಳೆ ನಷ್ಟವಾಗಿದೆ. 3310 ಕೋಟಿ ಕೇಂದ್ರದಿಂದ ಪರಿಹಾರ ಕೇಳಿದ್ದೇವೆ. ಅಧ್ಯಯನ ತಂಡ ಈಗ ರಾಜ್ಯಕ್ಕೆ ಆಗಮಿಸಿದೆ. ಅದು ವರದಿ ಕೊಟ್ಟ ನಂತರ ಕೇಂದ್ರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಕಾದು ನೋಡಬೇಕು. ಪ್ರವಾಹದಿಂದ ಮೂರು ಸಾವಿರ ಕೋಟಿ ಬೆಳೆ ನಷ್ಟವಾಗಿದೆ. ಅದರಲ್ಲಿ 3800 ಕೋಟಿ ಪರಿಹಾರ ಕೇಳಿದ್ದೇವೆ. ಇನ್ನು ಅಂತರ್ಜಲ ಮತ್ತು ಕುಡಿಯುವ ನೀರಿಗಾಗಿ 800 ಕೋಟಿ ರೂ. ಬೇಡಿಕೆ ಇಟ್ಟಿದ್ದೇವೆ. ಆದರೆ, ಕೇಂದ್ರದಿಂದ ಅದಕ್ಕೆ ಪ್ರತಿಕ್ರಿಯೆ ಬಂದಿಲ್ಲ. ಕೆಆರ್‍ಎಸ್ ಮತ್ತು ಇತರೆ ಜಲಾಶಯಗಳಲ್ಲಿ ಐತಿಹಾಸಿಕ ದಾಖಲೆ ಪ್ರಮಾಣದಲ್ಲಿ ನೀರಿನ ಮಟ್ಟ ಕುಸಿದೆ ಎಂದು ಸಿದ್ದರಾಮಯ್ಯ ವಿವರಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin