ಎಚ್‍ಎಎಲ್ ವಿಮಾನ ನಿಲ್ದಾಣ ಪುನಾರಂಭ

ಈ ಸುದ್ದಿಯನ್ನು ಶೇರ್ ಮಾಡಿ

Aero-india

ಬೆಂಗಳೂರು, ಫೆ.15– ಕೆಂಪೇಗೌಡ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳ ಹಾಗೂ ನಗರ ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಎಚ್‍ಎಎಲ್ ವಿಮಾನ ನಿಲ್ದಾಣವನ್ನು ಪ್ರಾದೇಶಿಕ ಮತ್ತು ವಾಣಿಜ್ಯ ಬಳಕೆಯ ಉದ್ದೇಶಕ್ಕಾಗಿ ಪುನರಾರಂಭ ಮಾಡಲು ತೀರ್ಮಾನಿಸಲಾಗಿದೆ ಎಂದು ಎಚ್‍ಎಎಲ್ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಬಿ.ಸುವರ್ಣರಾಜು ಹೇಳಿದ್ದಾರೆ.  ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, 2020ರ ವೇಳೆಗೆ ಕೆಂಪೇಗೌಡ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ದುಪ್ಪಟ್ಟಾಗಲಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಇಲಾಖೆ ಮಾಹಿತಿ ನೀಡಿದೆ. ಪ್ರಯಾಣಿಕರ ಅನುಕೂಲ ಹಾಗೂ ನಗರದಲ್ಲಿ ಹೆಚ್ಚು ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಎಚ್‍ಎಎಲ್ ವಿಮಾನ ನಿಲ್ದಾಣವನ್ನು ಪುನರಾರಂಭ ಮಾಡಲಾಗುವುದು ಎಂದು ತಿಳಿಸಿದರು.

ಬಿಐಇಎಲ್ ಹಾಗೂ ಎಚ್‍ಎಎಲ್ ನಡುವೆ 150 ವರ್ಷಗಳ ಒಪ್ಪಂದ ಆಗಿತ್ತು. ಅದರಂತೆ ವಾಣಿಜ್ಯ ಬಳಕೆಯ ಉದ್ದೇಶಕ್ಕೆ ನಿಲ್ದಾಣವನ್ನು ಬಳಸಿಕೊಳ್ಳಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಕೆಲವರು ಇದನ್ನು ಪ್ರಶ್ನಿಸಿ ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇದೀಗ ಹೈಕೋರ್ಟ್ ಮಧ್ಯ ಪ್ರವೇಶ ಮಾಡುವುದಿಲ್ಲ ಎಂದು ಹೇಳಿರುವುದರಿಂದ ಪ್ರಾದೇಶಿಕ ಸಂಚಾರ ಮತ್ತು ವಾಣಿಜ್ಯ ಚಟುವಟಿಕೆಗಾಗಿ ನಿಲ್ದಾಣವನ್ನು ಶೀಘ್ರವೇ ಮುಕ್ತಗೊಳಿಸಲಾಗುವುದು ಎಂದು ಹೇಳಿದರು.  ಈ ಸಂಬಂಧ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಾನೂನಿನ ತೊಡಕು ಗಳು ನಿವಾರಣೆಯಾಗಿದೆ. ನಿಲ್ದಾಣ ಬಳಸಿಕೊಳ್ಳಲು ಒಪ್ಪಿಗೆ ಸಿಕ್ಕಿರುವುದರಿಂದ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂದು ತಿಳಿಸಿದರು.

ಎಚ್‍ಎಎಲ್ ಅತ್ಯಾಧುನಿಕ ಹಗುರ ಯುದ್ಧ ವಿಮಾನ ತಯಾರಿಕೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಅತ್ಯುತ್ತಮ ವಿನ್ಯಾಸ, 17 ಬಗೆಯ ಏರ್‍ಕ್ರಾಫ್ಟ್ ಮತ್ತು ಹೆಲಿಕಾಪ್ಟರ್‍ಗಳನ್ನು ಅಭಿವೃದ್ಧಿಪಡಿಸಲಾಗುವುದು.   ಇದರ ಜತೆಗೆ ಹಗುರ ಹೆಲಿಕಾಪ್ಟರ್ ಹಾಗೂ ಲೈಟ್ ಕಾಂಬೆಟ್ ಹೆಲಿಕಾಪ್ಟರ್‍ಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಈ ಸಂಬಂಧ ರಷ್ಯಾ ದೇಶದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.  ಹಗುರ ತೇಜಸ್ ಯುದ್ಧ ವಿಮಾನಗಳನ್ನು ಎಚ್‍ಎಎಲ್ ಅಭಿವೃದ್ಧಿಪಡಿಸಿದ್ದು, ಪರೀಕ್ಷಾರ್ಥ ಹಾರಾಟ ಯಶಸ್ವಿಯಾಗಿದೆ. 2020ರ ಹೊತ್ತಿಗೆ ಒಪ್ಪಂದ ಮಾಡಿಕೊಂಡಿರುವಂತೆ ಅಭಿವೃದ್ಧಿ ಪಡಿಸಿದ ಯುದ್ಧ ವಿಮಾನಗಳನ್ನು ವಿದೇಶಕ್ಕೆ ರಫ್ತು ಮಾಡುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.

ಯುಎಇಯಿಂದ ಸುಧಾರಿತ ತಂತ್ರಜ್ಞಾನ ಆಮದು ಮಾಡಿಕೊಂಡು 210 ಕೋಟಿ ಬಂಡವಾಳದೊಂದಿಗೆ ರಷ್ಯಾ ಸಹಭಾಗಿತ್ವದಲ್ಲಿ ರೂಸ್ಕೊ-2 ವಿಮಾನ ಉತ್ಪಾದನೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಯುದ್ಧ ವಿಮಾನಗಳು ರಕ್ಷಣಾ ವಲಯಕ್ಕೆ ಸೇರ್ಪಡೆಗೊಂಡರೆ ಇನ್ನಷ್ಟು ಬಲ ಬರಲಿದೆ ಎಂದು ಸುವರ್ಣರಾಜು ತಿಳಿಸಿದರು. ಎಚ್‍ಎಎಲ್ ಈವರೆಗೆ 17 ಬಗೆಯ ಏರ್‍ಕ್ರಾಫ್ಟ್, ಹೆಲಿಕಾಪ್ಟರ್‍ಗಳನ್ನು ತಯಾರಿಸಿದೆ. ಕೇಂದ್ರ ಸರ್ಕಾರದಿಂದ ಒಂದು ಸಾವಿರ ಕೋಟಿಗೂ ಅಧಿಕ ನೆರವು ದೊರೆತಿದೆ. ಒಪ್ಪಂದದಂತೆ ಕೇಂದ್ರ ಸಚಿವ ಸಂಪುಟ ಸಭೆ ಹಣ ಬಿಡುಗಡೆಗೆ ಅನುಮತಿ ನೀಡಿದೆ ಎಂದು ತಿಳಿಸಿದರು.

ದೇಶದಲ್ಲೇ ಮೊದಲ ಬಾರಿಗೆ ಏರೋ ಇಂಜಿನ್ ಅಭಿವೃದ್ಧಿಪಡಿಸಿದ ಹೆಗ್ಗಳಿಕೆ ಎಚ್‍ಎಎಲ್‍ಗೆ ಸೇರುತ್ತದೆ. ಡಿಸೆಂಬರ್ ಅಂತ್ಯದ ವೇಳೆಗೆ ಸುಕೋಯ್ 30 ಎಂಕೆಐ ಯುದ್ಧ ವಿಮಾನವನ್ನು ಕೊಡುಗೆಯಾಗಿ ನೀಡಿದೆ. ಹಾಕ್ ಎಂಕೆಎಚ್-132 ಬಲಶಾಲಿ ಯುದ್ಧ ವಿಮಾನ ರಕ್ಷಣಾ ವಲಯಕ್ಕೆ ಸೇರ್ಪಡೆಯಾದರೆ ಇನ್ನಷ್ಟು ಸಾಮಥ್ರ್ಯ ಪಡೆಯಲಿದೆ. ಈಗಾಗಲೇ ಭಾರತೀಯ ಸೇನಾಪಡೆ ಹಾಗೂ ನೌಕಾಪಡೆಯಿಂದ ಬೇಡಿಕೆ ಬಂದಿದೆ ಎಂದರು.  ಎಚ್‍ಎಎಲ್ ಕಳೆದ ವರ್ಷ 16,756 ಕೋಟಿ ವಹಿವಾಟು ಗುರಿ ಹೊಂದಿತ್ತು. ಶೇ.7.14 ಗುರಿ ಸಾಧನೆಯೊಂದಿಗೆ 3282 ಕೋಟಿ ತೆರಿಗೆ ಪಾವತಿಸಿ ಜನವರಿ ಅಂತ್ಯಕ್ಕೆ 17,100 ಕೋಟಿ ವಹಿವಾಟು ನಡೆಸಿದ್ದೇವೆ. ಒಟ್ಟು ಹತ್ತು ಸಾವಿರದ ಎಪ್ಪತ್ತಾರು ಕೋಟಿ ನಿವ್ವಳ ಲಾಭ ಬಂದಿದೆ ಎಂದು ಬಿ.ಸುವರ್ಣ ರಾಜು ತಿಳಿಸಿದರು.
– ವೈ.ಎಸ್.ರವೀಂದ್ರ

Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin