ಬೆಂಗಳೂರಿನತ್ತ ಹೊರಟ ಚಿನ್ನಮ್ಮ : ಪರಪ್ಪನ ಅಗ್ರಹಾರ ಜೈಲಿನ ಸುತ್ತ ನಿಷೇದಾಜ್ಞೆ, ಬಿಗಿ ಭದ್ರತೆ

ಈ ಸುದ್ದಿಯನ್ನು ಶೇರ್ ಮಾಡಿ

Parappana-agrahara

ಬೆಂಗಳೂರು, ಫೆ.15-ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಸೇರಿದಂತೆ ಮೂವರಿಗೆ ಸುಪ್ರೀಂಕೋರ್ಟ್ ಶಿಕ್ಷೆ ನೀಡಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದ ಸುತ್ತಮುತ್ತ ಬಿಗಿ ಭದ್ರತೆ ಒದಗಿಸಲಾಗಿದೆ.  ಇಂದು ಸಂಜೆ ಶಶಿಕಲಾ ನಟರಾಜನ್ ಅವರನ್ನು ಕೇಂದ್ರ ಕಾರಾಗೃಹಕ್ಕೆ ಕರೆತರುವ ಸಾಧ್ಯತೆ ಇರುವುದರಿಂದ ಕಾರಾಗೃಹ ಸುತ್ತಮುತ್ತ, ಹೊಸೂರು ಚೆಕ್‍ಪೋಸ್ಟ್ ಹಾಗೂ ಅವರನ್ನು ಕರೆತರುವ ಹಾದಿಯಲ್ಲಿ ಭದ್ರತೆ ಕಲ್ಪಿಸಲಾಗಿದೆ.  ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಶಿಕಲಾ, ಇಳವರಸಿ, ಸುಧಾಕರನ್ ಅವರು ಇಂದು ಪರಪ್ಪನ ಅಗ್ರಹಾರದಲ್ಲಿರುವ ವಿಶೇಷ ನ್ಯಾಯಾಲಯದ ಮುಂದೆ ಶರಣಾಗಬೇಕಾಗಿದ್ದು, ಕೋರ್ಟಿನ ನಿಯಮಾವಳಿಗಳು ಮುಗಿದ ಮೇಲೆ ಮೂವರನ್ನು ಪರಪ್ಪನ ಅಗ್ರಹಾರಕ್ಕೆ ರವಾನಿಸಲಾಗುತ್ತದೆ.  ಅಹಿತಕರ ಘಟನೆಗಳು ನಡೆಯದಂತೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆಗ್ನೇಯ ವಿಭಾಗದ ಡಿಸಿಪಿ ಬೋರಲಿಂಗಯ್ಯ ಅವರ ನೇತೃತ್ವದಲ್ಲಿ ಭದ್ರತೆ ಏರ್ಪಡಿಸಲಾಗಿದೆ.  ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಹಾಗೂ ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರ ಪರಮಾಪ್ತರೂ ಆಗಿರುವ ಶಶಿಕಲಾ ಮತ್ತಿತರರಿಗೆ ಸಾಕಷ್ಟು ಬೆಂಬಲಿಗರಿರುವುದರಿಂದ ಹಾಗೂ ಅವರು ಪರಪ್ಪನ ಅಗ್ರಹಾರದ ಕಡೆ ಬರುವ ಸಾಧ್ಯತೆ ಇರುವುದರಿಂದ ಶಾಂತಿ ಸುವ್ಯವಸ್ಥೆ ಕಾಪಾಡುವುದಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಕೆಎಸ್‍ಆರ್‍ಪಿ ತುಕಡಿ, ಸಿಎಆರ್ ಪ್ಲಟೂನ್‍ಗಳನ್ನು ನಿಯೋಜಿಸಲಾಗಿದೆ. ಅಪರಾಧಿಗಳನ್ನು ಕಾರಾಗೃಹಕ್ಕೆ ಕರೆತರುವಾಗ ಯಾವುದೇ ಲೋಪವಾಗದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದ್ದು, ಈ ಸಂಬಂಧ ಪೊಲೀಸ್ ಆಯುಕ್ತರಾದ ಪ್ರವೀಣ್‍ಸೂದ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ.  ಈ ಹಿಂದೆ ವಿಶೇಷ ಕೋರ್ಟ್ ಶಿಕ್ಷೆ ವಿಧಿಸಿದ್ದ ವೇಳೆ ಜಯಲಲಿತಾ ಅವರು ಮುಖ್ಯಮಂತ್ರಿಯಾಗಿದ್ದ ಕಾರಣ ಝಡ್ ಪ್ಲಸ್ ಸೆಕ್ಯೂರಿಟಿ ಭದ್ರತೆ ಇತ್ತು. ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಅಷ್ಟು ಪ್ರಮಾಣದ ಭದ್ರತೆ ಶಶಿಕಲಾ ಅವರಿಗೆ ಕೊಡುವ ಅಗತ್ಯವಿಲ್ಲ. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin