ಎಚ್ಚರಿಕೆ, ಅದ್ಧೂರಿ ವಿವಾಹ ಮಾಡಿಕೊಳ್ಳುವುದು ಶಿಕ್ಷಾರ್ಹ ಅಪರಾಧ..!
ನವದೆಹಲಿ,ಫೆ.16-ಇನ್ನು ಮುಂದೆ ಅಪ್ಪಿತಪ್ಪಿಯೂ ಅದ್ಧೂರಿ ಮದುವೆ ಮಾಡಿರೀ ಜೋಕೆ…! ತಮ್ಮ ಬಳಿ ಸಾಕಷ್ಟು ಸಂಪತ್ತಿದೆ ಎಂದು ಇತರರು ನಾಚುವಂತೆ ಮಕ್ಕಳ ವಿವಾಹ ಮಾಡಿದರೆ ಕಾನೂನಿನ ಕುಣಿಕೆಗೆ ಸಿಲುಕುವುದು ಖಚಿತ. ಏಕೆಂದರೆ ಕೇಂದ್ರ ಸರ್ಕಾರ ಜಾರಿ ಮಾಡಲು ಉದ್ದೇಶಿಸಿರುವ ನೂತನ ಕಾಯ್ದೆ ಪ್ರಕಾರ ಇನ್ನು ಮುಂದೆ ಅದ್ಧೂರಿ ವಿವಾಹ ಶಿಕ್ಷಾರ್ಹ ಅಪರಾಧ.
ಕಾಂಗ್ರೆಸ್ನ ಲೋಕಸಭಾ ಸದಸ್ಯ ರಂಜಿತ್ ರಂಜನ್ ಪ್ರಸ್ತುತ ಲೋಕಸಭೆಯಲ್ಲಿ ಖಾಸಗಿ ಮಸೂದೆಯೊಂದನ್ನು ಮಂಡಿಸಿದ್ದಾರೆ. ಮುಂದಿನ ಅಧಿವೇಶನದ ವೇಳೆಗೆ ಚರ್ಚೆಗೆ ಬರಲಿದೆ.
ಅದ್ಧೂರಿ ವಿವಾಹ ತಡೆ 2016ರ ಕಾಯ್ದೆ ಪ್ರಕಾರ ಹೆಚ್ಚುತ್ತಿರುವ ಅದ್ದೂರಿ ವಿವಾಹಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ. ನೂತನ ಕಾಯ್ದೆ ಪ್ರಕಾರ 5 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಖರ್ಚು ಮಾಡಿ ಮದುವೆ ಮಾಡುವಂತಿಲ್ಲ.
ಒಂದು ವೇಳೆ ಇದಕ್ಕಿಂತ ಹೆಚ್ಚಿನ ಮೊತ್ತದಲ್ಲಿ ಖರ್ಚು ಮಾಡಿ ಮದುವೆ ಮಾಡಿದರೆ ಆದಾಯ ಇಲಾಖೆ ಅಧಿಕಾರಿಗಳು ಕಾನೂನು ಕ್ರಮ ಜರುಗಿಸಲು ಅವಕಾಶವಿರುತ್ತದೆ. ಮದುವೆಯ ಒಟ್ಟು ಖರ್ಚಿನ ಶೇ.10ರಷ್ಟು ದಂಡ ಪಾವತಿಸಬೇಕು. ಈ ಹಣವನ್ನು ಬಡ, ಹೆಣ್ಣು ಮಕ್ಕಳ ವಿವಾಹಕ್ಕೆ ನೀಡಬೇಕು ಎಂಬ ಅಂಶ ಕಾಯ್ದೆಯಲ್ಲಿದೆ. ಈಗಾಗಲೇ ಖಾಸಗಿ ಮಸೂದೆ ಲೋಕಸಭೆಯಲ್ಲಿ ಮಂಡನೆಯಾಗಿದೆ. ಮುಂದಿನ ಅಧಿವೇಶನದಲ್ಲಿ ಉಭಯ ಸದನಗಳಾದ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಚರ್ಚೆಗೆ ಬಂದು ನಂತರ ಕಾಯ್ದೆ ಜಾರಿಯಾಗಲಿದೆ. ಇತ್ತೀಚೆಗೆ ಕರ್ನಾಟಕದ ಮಾಜಿ ಸಚಿವ ಹಾಗೂ ಗಣಿಧಣಿ ಜನಾರ್ಧನ ರೆಡ್ಡಿ ತಮ್ಮ ಪುತ್ರಿ ವಿವಾಹವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನೆರವೇರಿಸಿದ್ದು , ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಿತ್ತು.
ಅಕ್ರಮ ಗಣಿಗಾರಿಕೆ ಆರೋಪದಡಿ ಜೈಲಿಗೆ ಸೇರಿ ನಂತರ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ರೆಡ್ಡಿ ತಮ್ಮ ಪುತ್ರಿಯ ವಿವಾಹಕ್ಕೆ ನೂರಾರು ಕೋಟಿ ಖರ್ಚು ಮಾಡಿದ್ದು ಅನೇಕರ ಕಣ್ಣು ಕೆಂಪಾಗುವಂತೆ ಮಾಡಿತ್ತು.
ಒಂದೆಡೆ ಪ್ರಧಾನಿ ನರೇಂದ್ರ ಮೋದಿಯವರು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು 500 ಹಾಗೂ 1000 ಮುಖಬೆಲೆಯ ನೋಟುಗಳನ್ನು ಅಮಾನೀಕರಣಗೊಳಿಸಿದ್ದರು. ಇಂತಹ ಸಂದರ್ಭದಲ್ಲೇ ರೆಡ್ಡಿ ತಮ್ಮ ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡಿದ್ದು ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿತ್ತು. ದೇಶದಲ್ಲಿ ಇಂತಹ ಆಡಂಬರದ ಮದುವೆಗೆ ಕಡಿವಾಣ ಹಾಕಲು ಮೋದಿ ಸರ್ಕಾರ ಮುಂದಾಗಿದೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS