ಕಿಮ್ ಜಾಂಗ್ ಉನ್’ನ ಮಲ ಸಹೋದರನ ಮೃತದೇಹ ರವಾನಿಸಲು ಮಲೇಷ್ಯಾ ನಕಾರ
ಕೌಲಾಲಂಪುರ್, ಫೆ.17- ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ಅವರ ಮಲ ಸಹೋದರ ಕಿಮ್ ಜಾಂಗ್ ನಾಮ್ ಅವರ ಮೃತದೇಹವನ್ನು ಆ ದೇಶಕ್ಕೆ ರವಾನಿಸಲು ಮಲೇಷ್ಯಾ ನಿರಾಕರಿಸಿದೆ. ಮೃತನ ಕುಟುಂಬ ಡಿಎನ್ಎ ಮಾದರಿ ಒದಗಿಸುವವರೆಗೆ ತಾನು ಉತ್ತರ ಕೊರಿಯಾಗೆ ಶವವನ್ನು ಬಿಡುಗಡೆ ಮಾಡುವುದಿಲ್ಲ ಎಂದು ಕೌಲಾಲಂಪುರ್ ಸ್ಟಷ್ಟಪಡಿಸಿದೆ. ಇದರೊಂದಿಗೆ ಈ ಪ್ರಕರಣದಲ್ಲಿ ಹೊಸ ಬಿಕ್ಕಟ್ಟು ತಲೆದೋರಿದಂತಾಗಿದೆ. ಕಿಮ್ ಜಾಂಗ್ ಉನ್ ಅವರ ತಂದೆ ದಿವಂಗತ ಕಿಮ್ ಜಾಂಗ್ ಇಲ್ ಅವರ ಮತ್ತೊಬ್ಬ ಪತ್ನಿಯ ಮಗನಾದ ಕಿಮ್ ಜಾಂಗ್ ನಾಮ್ರನ್ನು ಮಲೇಷ್ಯಾ ರಾಜಧಾನಿ ಕೌಲಾಲಂಪುರ್ ವಿಮಾನ ನಿಲ್ದಾಣದಲ್ಲಿ ಇಬ್ಬರು ಮಹಿಳೆಯರು ವಿಷಪ್ರಾಶನ ಮಾಡಿಸಿ ಹತ್ಯೆ ಮಾಡಿದ್ದರು.
ಮೃತದೇಹವನ್ನು ಗುರುತಿಸಲು ಅಥವಾ ತಮಗೆ ಸೇರಿದ್ದೆಂದು ಹೇಳಿಕೊಳ್ಳಲು ಕಿಮ್ ಜಾಂಗ್ ನಾಮ್ ಅವರ ಕುಟುಂಬದ ಸದಸ್ಯರುಗಳಾಗಲಿ ಅಥವಾ ವಾರಸುದಾರರಾಗಲಿ ಸಂಪರ್ಕಿಸಿಲ್ಲ. ಹೀಗಾಗಿ ಅದನ್ನು ದೃಢಪಡಿಸಿಕೊಳ್ಳುವ ಅಗತ್ಯವಿದ್ದು, ಡಿಎನ್ಎ ಮಾದರಿ ಒದಗಿಸಿದ ನಂತರವಷ್ಟೇ ಈ ಬಗ್ಗೆ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಸೆಲಂಗೋರ್ ರಾಜ್ಯ ಪೊಲೀಸ್ ಮುಖ್ಯಸ್ಥ ಅಬ್ದುಲ್ ಸಮದ್ ತಿಳಿಸಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS