ಗಡಿಭಾಗ ಗುಡಿಬಂಡೆ ಗ್ರಾಮಗಳಿಗೆ ಮೂಲಭೂತ ಸೌಲಭ್ಯ ಸಿಗುವುದೇ..?

ಈ ಸುದ್ದಿಯನ್ನು ಶೇರ್ ಮಾಡಿ

1
ರಾಜ್ಯ ಸರ್ಕಾರ ಪ್ರತಿಯೊಂದು ಗ್ರಾಮಗಳಿಗೂ ಸಾರಿಗೆ ಸೌಲಭ್ಯ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳುತ್ತಲೇ ಬರುತ್ತಿದೆ. ಆದರೆ ಈ ಯೋಜನೆಗಳು ಯಾವ ಗ್ರಾಮಗಳಿಗೆ ವರದಾನವಾಗಿದೆ ಎಂಬುದು ಯಕ್ಷಪ್ರಶ್ನೆಯಾಗಿದೆ.ಇಂದು ರಾಜ್ಯದ ಯಾವುದೇ ಮೂಲೆಗೆ ಹೋದರೂ ಸಾರಿಗೆ ವ್ಯವಸ್ಥೆ ಇದೆ. ಆದರೆ ಬಸ್‍ಗಳಿಲ್ಲದೆ ಪ್ರತಿನಿತ್ಯ ಕಾಲ್ನಡಿಗೆಯಲ್ಲೇ ಓಡಾಡುವಂತಹ ಗ್ರಾಮವೊಂದಿದೆ ಎಂದರೆ ನಂಬುತ್ತೀರಾ.ನಂಬಲೇಬೇಕು, ಗುಂಡಿಬಂಡೆ ತಾಲ್ಲೂಕಿನ ಚಿನ್ನಹಳ್ಳಿ, ಲಗುಮೇನಹಳ್ಳಿ, ಸೋಮಲಾಪುರ ಬ್ರಾಹ್ಮಣರಹಳ್ಳಿ ಗ್ರಾಮಗಳಿಂದ ಸುಮಾರು 150 ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಪಟ್ಟಣಕ್ಕೆ ಬರುತ್ತಿದ್ದಾರೆ.

ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತರಗತಿಗಳು ಪ್ರಾರಂಭವಾಗುವುದಕ್ಕಿಂತ ಮುಂಚೆಯೇ ತಲುಪಬೇಕು. ಆದರೆ ವಿದ್ಯಾರ್ಥಿಗಳು ಸ್ಥಳಕ್ಕೆ ತಲುಪಬೇಕಾದರೆ, ಬೆಳಿಗ್ಗೆ 7 ಗಂಟೆಗೆ ಮನೆಯಿಂದ ಹೊರಡಬೇಕು. ಜೊತೆಗೆ ಈ ಗ್ರಾಮಗಳಲ್ಲಿ ಜನರು ಹೆಚ್ಚಾಗಿ ಕೃಷಿ ಚಟುವಟಿಕೆಗಳನ್ನು ಅಳವಡಿಸಿಕೊಂಡಿರುತ್ತಾರೆ. ಇದರಿಂದಾಗಿ ಮುಂಜಾನೆಯಿಂದಲೇ ಅವರು ಜಮೀನುಗಳ ಕಡೆ ಹೊರಡಬೇಕಾದ ಪರಿಸ್ಥಿತಿ ಇದೆ. ಆದ್ದರಿಂದ ದಿನ ನಿತ್ಯ ವಿದ್ಯಾರ್ಥಿಗಳು ಸಾಕಷ್ಟು ಬಾರಿ ಬೆಳಗಿನ ಉಪಹಾರವಿಲ್ಲದೆ, ಶಾಲೆಗೆ ಬಂದ ಸನ್ನಿವೇಶಗಳು ಬಹಳಷ್ಟಿವೆ. ಉಪವಾಸದಿಂದ ಶಾಲಾ ಕಾಲೇಜುಗಳಿಗೆ ಬಂದ ಮಕ್ಕಳು ಅನೇಕ ಬಾರಿ ಸುಸ್ತಾಗಿ ರಸ್ತೆಯಲ್ಲೇ ಪ್ರಜ್ಞೆ   ತಪ್ಪಿ ಬಿದ್ದು ಗಾಯ ಮಾಡಿಕೊಂಡ ಘಟನೆಗಳು ಕೂಡ ನಡೆದಿವೆ.

ಭಯದಿಂದಲೇ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿನಿಯರು :

ಸಮಾಜದಲ್ಲಿ ಗ್ರಾಮೀಣ ಭಾಗದ ಮಕ್ಕಳು ಕೂಡ ನಗರ ಪ್ರದೇಶಗಳ ಮಕ್ಕಳಿಗಿಂತ ಕಡಿಮೆಯಿಲ್ಲವೆಂದು ವಿದ್ಯಾಭ್ಯಾಸ ಪಡೆಯಲು, ಈ ಭಾಗಗಳಿಂದ ಸುಮಾರು 5-6 ಕಿಲೋಮೀಟರ್‍ಗಳವರೆಗೆ ಬೆಟ್ಟ ಗುಡ್ಡಗಳ ಮಧ್ಯೆಯಿರುವ ಹದಗೆಟ್ಟ ರಸ್ತೆಯಲ್ಲಿ ವಿದ್ಯಾರ್ಥಿನಿಯರು ಭಯದಿಂದ ಕಾಲೇಜುಗಳಿಗೆ ಬರುವ ದುಸ್ಥಿತಿ ಎದುರಾಗಿದೆ. ಇದರಿಂದ ಹೆಣ್ಣು ಮಕ್ಕಳು ಪ್ರಾಣ ಭೀತಿಯಿಂದ ಕಣ್ಣೀರಿನೊಂದಿಗೆ ಓದುವುದೇ ಬೇಡ ಮನೆಯಲ್ಲಿಯೇ ಉಳಿದುಬಿಡೋಣ ಎಂಬ ಹತಾಶೆಗೆ ಒಳಗಾಗಿದ್ದಾರೆಂದರೇ ತಪ್ಪಾಗಲಾರದು.

ಹದಗೆಟ್ಟ ರಸ್ತೆಯಲ್ಲಿ ರೋಗಿಗಳ ಪರದಾಟ :

ಚಿನ್ನಹಳ್ಳಿ, ಲಗುಮೇನಹಳ್ಳಿ, ಸೋಮಲಾಪುರ, ಈ ಭಾಗಗಳಲ್ಲಿ ರೋಗಿಗಳಾಗಲಿ, ಬಾಣಂತಿಯರಾಗಲಿ ಈ ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಡಬೇಕಾಗಿದೆ. ಈ ಭಾಗದ ಜನರು ಅನಾರೋಗ್ಯಕ್ಕೆ ತುತ್ತಾದರೆ, ಪಟ್ಟಣದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಬರಬೇಕಿದೆ. ತಮ್ಮ ಬಡತನದಿಂದಾಗಿ ಖಾಸಗಿ ವಾಹನಗಳಿಗೆ ಹಣ ವ್ಯಯಿಸಲಾಗದ ಪರಿಸ್ಥಿತಿಯಲ್ಲಿದ್ದಾರೆ. ಇನ್ನೂ ಗರ್ಭಣಿ ಯರಂತೂ ಈ ರಸ್ತೆಯಲ್ಲಿ ಆಸ್ಪತ್ರೆಗೆ ತೆರಳಿದರೆ ಮಾರ್ಗ ಮಧ್ಯದಲ್ಲಿಯೇ ಪ್ರಸವಿಸುವಂತಹ ರಸ್ತೆಯಾಗಿದೆ.

ಮೂಲಭೂತ ಸೌಕರ್ಯಗಳ ಕೊರತೆ :

 ಈ ಭಾಗದ ಗ್ರಾಮಗಳು ತಾಲ್ಲೂಕು ಕೇಂದ್ರಕ್ಕೂ ದೂರದಲ್ಲಿದ್ದು ಅತ್ತ ಪಂಚಾಯಿತಿ ಕೇಂದ್ರಕ್ಕೂ ದೂರವಿರುವುದರಿಂದ ಜನ ಪ್ರತಿನಿಧಿಗಳು ಇಲ್ಲಿಗೆ ಬರುವುದು ತೀರಾ ಕಡಿಮೆ. ಗ್ರಾಮಗಳಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರಿನ ಸೌಲಭ್ಯ ಸೇರಿದಂತೆ ಅನೇಕ ಮೂಲಭೂತ ಸೌಕರ್ಯಗಳಿಂದ ಗ್ರಾಮಸ್ಥರು ವಂಚಿತರಾಗಿದ್ದಾರೆ. ತೀವ್ರ ಬರಗಾಲಕ್ಕೆ ತುತ್ತಾಗಿರುವ ಸಂದರ್ಭದಲ್ಲಿ ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕಾದ ಉಲ್ಲೋಡು ಗ್ರಾಮ ಪಂಚಾಯಿತಿಗೆ ನೀರು ಕೊಡಿ ಎಂದು ಗ್ರಾಮಸ್ಥರು ಕೇಳಿದರೆ ಕಂದಾಯ ಕಟ್ಟಿ ನೀರು ಬಿಡುತ್ತೇವೆಂದು ಕರುಣೆಯಿಲ್ಲದೇ ಉತ್ತರಿಸುತ್ತಾರೆ.

ಈ ಭಾಗದಲ್ಲಿ ಬರುವ ಗ್ರಾಮಗಳಲ್ಲಿ ಹೆಚ್ಚಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗದವರಿದ್ದಾರೆ. ಚುನಾವಣೆ ಮುಂಚೆ ಮತ ಪಡೆಯಲು ಬರುವ ರಾಜಕೀಯ ವ್ಯಕ್ತಿಗಳು ನಿಮ್ಮ ಗ್ರಾಮವನ್ನು ಸುವರ್ಣ ಗ್ರಾಮವನ್ನಾಗಿ ಮಾಡುತ್ತೇವೆ, ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತೇವೆಂದು ನೀಡಿದ ಅಶ್ವಾಸನೆಗಳು ಸುಳ್ಳಾಗಿವೆ ಎಂದು ಗ್ರಾಮಸ್ಥರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ನಮ್ಮ ಸಮಸ್ಯೆಗಳಿಗೆ ಶೀಘ್ರ ಪರಿಹಾರ ದೊರೆಯುತ್ತದೆಂಬ ಕನಸಿನಲ್ಲಿ ಬದುಕುತ್ತಿದ್ದೇವೆಂದು ಹತಾಶೆಯ ನುಡಿಗಳನ್ನು ಪತ್ರಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಸುಮಾರು ವರ್ಷಗಳಿಂದ ಈ ರಸ್ತೆಯನ್ನು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ಹಾಕಲಾಗಿದ್ದು ಪುನಃ ಈ ರಸ್ತೆ ಡಾಂಬರು ಕಾಣದೆ ರಸ್ತೆ ಯುದ್ದಕ್ಕೂ ಹಳ್ಳ ಗುಂಡಿಗಳೇ ಇರುವುದರಿಂದ ಸಂಜೆಯಾಗುತ್ತಿದಂತೆ ಓಡಾಡಾಲು ಸಾಧ್ಯವಿಲ್ಲ. ಹಾಗೂ ಮಳೆಗಾಲದಲ್ಲಿ ವಾಹನಗಳು ಹಾಗೂ ಸಾರ್ವಜನಿಕರು ಸಂಚರಿಸಲು ಸಹ ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಅನೇಕ ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲವೆಂದು ಚಿನ್ನಹಳ್ಳಿ ಗ್ರಾಮಸ್ಥರು ದೂರಿದ್ದಾರೆ. ಇನ್ನಾದರೂ ನಮ್ಮ ಗ್ರಾಮಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವಂತಾಗಲಿ.
ನಡೆದು ನಡೆದೂ… ಕಾಲೆಲ್ಲಾ ಬಿದ್ದುಹೋದವು ಸ್ವಾಮೀ…. ನಮ್ಮ ಈ ಕುಗ್ರಾಮಗಳಿಗೆ ಬಸ್‍ಗಳು ಯಾವಾಗ ಓಡಾಡುತ್ತವೋ…. ಆದಷ್ಟು ಶೀಘ್ರದಲ್ಲೇ ಬಹಳ ವರ್ಷಗಳಿಂದ ನಾವು ಪಟ್ಟ ಕಷ್ಟಗಳಿಗೆ ಮುಕ್ತಿ ಸಿಗುವಂತಾಗಲಿ.

-ಶ್ರೀನಾಥ್.ಜಿ.ವಿ,ಗುಡಿಬಂಡೆ  

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin