ಹೊತ್ತಿ ಉರಿದ ಬೆಳ್ಳಂದೂರು ಕೆರೆ, ಅಧಿಕಾರಿಗಳಗೆ ತರಾಟೆ

ಈ ಸುದ್ದಿಯನ್ನು ಶೇರ್ ಮಾಡಿ

Bellanduru--01

ಬೆಂಗಳೂರು, ಫೆ.17- ರಾಸಾಯನಿಕ ಮಿಶ್ರಿತ ನೀರಿನಿಂದ ಹೊತ್ತಿ ಉರಿದ ಬೆಳ್ಳಂದೂರು ಕೆರೆಗೆ ಕೆರೆ ಒತ್ತುವರಿ ಸದನ ಉಪ ಸಮಿತಿ ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡಿತು. ಶಾಸಕ ಎನ್.ಎ.ಹ್ಯಾರಿಸ್ ನೇತೃತ್ವದ ಉಪ ಸಮಿತಿ ಇಂದು ಹಗರಕರೆ ಒತ್ತುವರಿ ಪರಿಶೀಲಿನೆ ನಡೆಸಿದ ನಂತರ ಬೆಳ್ಳಂದೂರು ಕೆರೆಯ ಒಂದು ಭಾಗವಾಗಿರುವ ಇಗ್ಲೂರು ಕೆರೆ ಸ್ಥಳವನ್ನು ಪರಿಶೀಲನೆ ನಡೆಸಿತು.  ಇಗ್ಲೂರು ಕೆರೆಗೆ ಸುತ್ತಮುತ್ತಲಿನ ಕೈಗಾರಿಕೆಗಳು ರಾಸಾಯನಿಕ ಮಿಶ್ರಿತ ನೀರನ್ನು ಸಂಸ್ಕರಿಸದೆ ಹರಿಯಬಿಟ್ಟಿದ್ದರಿಂದ ನೊರೆ ಹೆಚ್ಚಾಗಿ ನಿನ್ನೆ ಬೆಂಕಿ ಹೊತ್ತಿಕೊಂಡು ಸುಮಾರು ಹೊತ್ತು ಬೆಂಕಿ ಉರಿದಿದ್ದರಿಂದ ದಟ್ಟ ಹೊಗೆ ಆವರಿಸಿ ಸುತ್ತಮುತ್ತಲಿನ ಜನರಿಗೆ ತೊಂದರೆಯಾಗಿತ್ತು. ಈ ಹಿನ್ನೆಲೆಯಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದರು.

ತಕ್ಷಣವೇ ಬೆಳ್ಳಂದೂರು ಕೆರೆ ಪಕ್ಕದಲ್ಲಿ ನೀರು ಸಂಸ್ಕರಣಾ ಘಟಕ ಸ್ಥಾಪಿಸಬೇಕು. ಕೆರೆಯ ಸಮೀಪ ಸುರಿದಿರುವ ಡಬ್ರೀಸನ್ನು ತೆರವುಗೊಳಿಸಬೇಕೆಂದು ಲಕ್ಷ್ಮಣ್ ಸೂಚಿಸಿದರು. ಜತೆಗೆ ಬಿಬಿಎಂಪಿ, ಬಿಡಿಎ, ಜಲಮಂಡಳಿಗೆ ನೋಟಿಸ್ ನೀಡುವುದಾಗಿ ಹೇಳಿದರು.  ಹ್ಯಾರಿಸ್ ನೇತೃತ್ವದ ಸಮಿತಿ ಬೆಂಕಿ ಹೊತ್ತಿ ಉರಿದ ಕೆರೆಯ ಭಾಗವನ್ನು ಪರಿಶೀಲಿಸಿತು. ನಾಗರಿಕರು ತಮಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಸಮಿತಿಯ ಮುಂದೆ ಅಳಲು ತೋಡಿಕೊಂಡರು. ಇದಕ್ಕೂ ಮೊದಲು ಹಗರ ಕೆರೆ ರಾಜಕಾಲುವೆ ಒತ್ತುವರಿಯನ್ನು ಉಪ ಸಮಿತಿ ಪರಿಶೀಲನೆ ನಡೆಸಿತು.
ಅದ್ವೈತ ವೆಂಚರ್ಸ್ ಪ್ರವೈಟ್ ಲಿಮಿಟೆಡ್ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಅಪಾರ್ಟ್‍ಮೆಂಟ್ ನಿರ್ಮಿಸಿದೆ ಎಂಬ ಆರೋಪವಿದ್ದು, ಈ ಬಗ್ಗೆ ಸ್ಥಳದಲ್ಲೇ ದಾಖಲಾತಿಗಳ ಪರಿಶೀಲನೆ ನಡೆಸಲಾಯಿತು.

ಅಧಿಕಾರಿಗಳ ಜತೆ ಸಭೆ ನಡೆಸಿ ಸಮಗ್ರ ಮಾಹಿತಿ ಕಲೆ ಹಾಕಿದ ನಂತರ ಸದನ ಸಮಿತಿಗೆ ವರದಿ ನೀಡುವುದಾಗಿ ಉಪ ಸಮಿತಿ ಅಧ್ಯಕ್ಷ ಎನ್.ಎ.ಹ್ಯಾರಿಸ್ ಹೇಳಿದರು.
ಜಿಲ್ಲಾಧಿಕಾರಿ ವಿ.ಶಂಕರ್ ಈ ಸಂದರ್ಭದಲ್ಲಿ ಹಾಜರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin