ದುಬಾರಿಯಾಗಲಿದೆ ತಿಮ್ಮಪ್ಪನ ದರ್ಶನ, ಶೀಘ್ರದಲ್ಲೇ ಏರಿಕೆಯಾಗಲಿದೆ ಟಿಕೆಟ್ ಬೆಲೆ

ಈ ಸುದ್ದಿಯನ್ನು ಶೇರ್ ಮಾಡಿ

Tirupathi--01

ತಿರುಪತಿ, ಫೆ.18-ಹಿಂದೂಗಳ ಪವಿತ್ರ ಧಾರ್ಮಿಕ ಶ್ರದ್ಧಾ ಕೇಂದ್ರವಾದ ತಿರುಪತಿ-ತಿರುಮಲ ದೇವಸ್ಥಾನದಲ್ಲಿ ದರ್ಶನದ ಪಡೆಯುವ ಟಿಕೆಟ್ ಬೆಲೆ ಶೀಘ್ರದಲ್ಲಿ ಏರಿಕೆಯಾಗಲಿದೆ. ಕಾರಣ ಐನೂರು ಹಾಗೂ ಒಂದು ಸಾವಿರ ಮುಖಬೆಲೆಯ ನೋಟುಗಳ ಅಮಾನೀಕರಣ!.  ಹೌದು, ಪ್ರಧಾನಿ ನರೇಂದ್ರ ಮೋದಿ ಕಳೆದ 2016ರ ನ.8 ರಂದು ರಾತ್ರಿ ನೋಟುಗಳ ಅಮಾನೀಕರಣಗೊಳಿಸಿದ ಬಳಿಕ ತಿರುಪತಿ ದೇವಸ್ಥಾನಕ್ಕೆ ಬರುತ್ತಿರುವ ಆದಾಯ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ.  ಐನೂರು ಹಾಗೂ ಒಂದು ಸಾವಿರ ಮುಖಬೆಲೆಯ ನೋಟುಗಳ ಅಮಾನೀಕರಣದ ನಂತರ ಪ್ರತಿದಿನ 2ರಿಂದ 3ಕೋಟಿಯಷ್ಟು ಆದಾಯ ಇಳಿಕೆಯಾಗಿದೆ ಎಂದು ಆಡಳಿತ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾಮಾನ್ಯವಾಗಿ ನವಂಬರ್ ತಿಂಗಳ ನಂತರ ಏಪ್ರಿಲ್‍ವರೆಗೂ ದೇಶ-ವಿದೇಶಗಳಿಂದ ಪ್ರತಿದಿನ ತಿರುಪತಿಗೆ ಲಕ್ಷಂತಾರ ಸಂಖ್ಯೆಯ ಭಕ್ತರು ಬರುತ್ತಿದ್ದರು. ಆದರೆ, ಈ ಬಾರಿ ನೋಟು ಅಮಾನೀಕರಣಗೊಳಿಸಿದ ಬಳಿಕ ದೇವಸ್ಥಾನಕ್ಕೆ ಬರುತ್ತಿರುವ ಭಕ್ತರ ಸಂಖ್ಯೆ ಕಡಿಮೆಯಾಗಿದ್ದು, ಆದಾಯಕ್ಕೂ ಕೊಕ್ಕೆ ಬಿದ್ದಿದೆ ಎಂದು ಮಾಹಿತಿ ನೀಡಿದ್ದಾರೆ.  ಜನರ ಬಳಿ ಹಣ ಇದ್ದರೂ ಚಿಲ್ಲರೆಯ ಸಮಸ್ಯೆ ಪರಿಣಾಮ ದೇವಸ್ಥಾನಕ್ಕೆ ಕಾಣಿಕೆ ಹಾಕಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಸಾವಿರಾರು ರೂಪಾಯಿ ಕೊಟ್ಟು ಲಡ್ಡು ಖರೀದಿಸುತ್ತಿದ್ದವರೆ, ಇಂದು ಕೊಳ್ಳಲು ಮೀನಾಮೇಷ ಎಣಿಸುತ್ತಿದ್ದಾರೆ. ಇದು ನೋಟು ಅಮಾನೀಕರಣದ ಪರಿಣಾಮ ಎಂದು ಹೇಳಿದ್ದಾರೆ.

ಒಂದೆಡೆ ಭಕ್ತರ ಸಂಖ್ಯೆ ಕಡಿಮೆ, ಆದಾಯದಲ್ಲೂ ಕುಸಿತವಾಗಿರುವುದರಿಂದ ನಾವು ವಿಧಿಯಿಲ್ಲದೆ ಟಿಕೆಟ್ ದರವನ್ನು ಹೆಚ್ಚಳ ಮಾಡಲಿದ್ದೇವೆ. ಪ್ರತಿ ಟಿಕೆಟ್‍ಗೆ 10 ರಿಂದ 20 ರೂ ವರೆಗೆ ಹೆಚ್ಚಳ ಮಾಡಲಿದ್ದೇವೆಂಬ ಮುನ್ಸೂಚನೆ ನೀಡಿದ್ದಾರೆ.  ಟಿಕೆಟ್ ದರ ಏರಿಕೆ ಮಾಡುವ ಸಂಬಂಧ ಸದ್ಯದಲ್ಲೇ ಆಡಳಿತ ಮಂಡಳಿ ಸಭೆ ನಡೆಯಲಿದ್ದು, ನಿರ್ವಾಹಣೆ, ಭಕ್ತರಿಗೆ ಉತ್ತಮ ಸೌಲಭ್ಯ, ಸೇರಿದಂತೆ ಅಗತ್ಯ ಸವಲತ್ತುಗಳನ್ನು ನೀಡಬೇಕಾಗಿರುವುದರಿಂದ ದರ ಏರಿಕೆ ಅನಿವಾರ್ಯ ಎಂದಿದ್ದಾರೆ.  ತಿರುಪತಿಯಲ್ಲಿ ಭಕ್ತರಿಗೆ 50 ರೂ ನಿಂದ 5000 ರೂ ವರೆಗೆ ಟಿಕೆಟ್ ನೀಡುತ್ತಿದ್ದೇವೆ. 2011ರಲ್ಲಿ ನಾವು ದರ ಹೆಚ್ಚಳ ಮಾಡಿದ್ದರೂ, ಭಕ್ತರಿಂದ ಯಾವುದೇ ಪ್ರತಿರೋಧ ವ್ಯಕ್ತವಾಗಿರಲಿಲ್ಲ.ಈಗ ಅನಿವಾರ್ಯವಾಗಿರುವುದರಿಂದ ನಾವು ಏನು ಮಾಡಲಾಗದ ಸ್ಥಿತಿಯಲ್ಲಿದ್ದೇವೆಂದು ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin