ಉತ್ತರ ಪ್ರದೇಶ : ಇಂದು ಮೂರನೇ ಹಂತದ ವಿಧಾನಸಭೆ ಚುನಾವಣೆ ಶಾಂತಿಯುತ

ಈ ಸುದ್ದಿಯನ್ನು ಶೇರ್ ಮಾಡಿ

election

ಲಕ್ನೋ, ಫೆ.19-ರಾಜಕೀಯ ಮೇಲಾಟಗಳಿಗೆ ಕಾರಣವಾಗಿರುವ ಉತ್ತರಪ್ರದೇಶದಲ್ಲಿ ಇಂದು ಮೂರನೇ ಹಂತದ ವಿಧಾನಸಭೆ ಚುನಾವಣೆಗೆ ವ್ಯಾಪಕ ಬಂದೋಬಸ್ತ್‍ನೊಂದಿಗೆ ಮತದಾನ ನಡೆಯಿತು. ಸಣ್ಣಪುಟ್ಟ ಅಹಿತಕರ ಘಟನೆಗಳ ಹೊರತಾಗಿ 12 ಜಿಲ್ಲೆಗಳ 69 ಕ್ಷೇತ್ರಗಳಲ್ಲಿ ಮತದಾನ ಶಾಂತಿಯುತವಾಗಿತ್ತು. ಶೇ.68ರಷ್ಟು ಮಂದಿ ತಮ್ಮ ಹಕ್ಕುಗಳನ್ನು ಚಲಾಯಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಜನಪ್ರಿಯತೆಯ ಅಳತೆಗೋಲು ಎಂದೇ ಪರಿಗಣಿಸಲ್ಪಟ್ಟಿರುವ ಪಂಚರಾಜ್ಯಗಳ ಚುನಾವಣೆಯ ನಾಲ್ಕನೆ ಚರಣದ ಮತದಾನ ಇದಾಗಿದ್ದು, ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂಸಿಂಗ್ ಯಾದವ್ ಅವರಿಗೂ ಪ್ರತಿಷ್ಠೆಯ ಕಣವಾಗಿದೆ.ಮೈಕೊರೆಯುವ ಚಳಿಯನ್ನು ಲೆಕ್ಕಿಸದೇ ಬೆಳಗಿನಿಂದಲೇ ಮತದಾರರು ಸರದಿ ಸಾಲಿನಲ್ಲಿ ನಿಂತು ಉತ್ಸಾಹದಿಂದ ಬಿರುಸಿನ ಮತ ಚಲಾಯಿಸುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು. ಚುನಾವಣಾ ಕಣದಲ್ಲಿರುವ 826 ಅಭ್ಯರ್ಥಿಗಳ ಹಣೆಬರಹವನ್ನು 2.41 ಕೋಟಿ ಮತದಾರರು ನಿರ್ಧರಿಸಲಿದ್ದಾರೆ. 25,603 ಮತಗಟ್ಟೆಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಭದ್ರತೆಗಾಗಿ ಅರೆಸೇನಾ ಪಡೆಯನ್ನು ನಿಯೋಜಿಸಲಾಗಿತ್ತು.
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಪ್ರತಿನಿಧಿಸಿರುವ ಲಕ್ನೋ, ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್‍ರ ತವರು ನೆಲ ಇಟಾವಾ, ಎಸ್‍ಪಿ (ಯಾದವರ) ಭದ್ರ ಕೋಟೆ ಕನ್ನೌಜ್, ಮತ್ತು ಮೇನ್‍ಪುರಿ ಕ್ಷೇತ್ರಗಳು ಪ್ರತಿಷ್ಠಿತ ಕ್ಷೇತ್ರಗಳಾಗಿವೆ. 2012ರ ಚುನಾವಣೆಯಲ್ಲಿ ಈ 69 ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷ 55ರಲ್ಲಿ ಜಯಸಾಧಿಸಿತ್ತು. ಬಹುಜನ ಸಮಾಜ ಪಕ್ಷ, ಬಿಜೆಪಿ ಮತ್ತು ಕಾಂಗ್ರೆಸ್ ಕ್ರಮವಾಗಿ ಆರು, ಐದು ಮತ್ತು ಎರಡು ಸ್ಥಾನಗಳನ್ನು ಗಳಿಸಿದ್ದವು. ಈ ಹಿನ್ನೆಲೆಯಲ್ಲಿ ಇದು ಮುಲಾಯಂ ಸಿಂಗ್ ಅವರಿಗೆ ಸತ್ವ ಪರೀಕ್ಷೆಯಾಗಿದೆ. ಮುಲಾಯಂ ಸಿಂಗ್ ಸಹೋದರ ಶಿವಪಾಲ್ ಸಿಂಗ್ ಯಾದವ್, ಸೊಸೆ ಅಪರ್ಣಾ, ಸಂಬಂಧಿ ಅನುರಾಗ್ ಅಗರ್‍ವಾಲ್, ಕಾಂಗ್ರೆಸ್ ತ್ಯಜಿಸಿ ಬಿಜೆಪಿಸೇರ್ಪಡೆಯಾಗಿರುವ ರೀಟಾ ಬಹುಗುಣ ಜೋಶಿ (ಅಪರ್ಣಾ ವಿರುದ್ಧ ಸ್ಫರ್ಧಿಸಿದ್ದಾರೆ), ಎಸ್‍ಪಿ ಮುಖಂಡ ನರೇಶ್ ಅಗರ್‍ವಾಲ್‍ರ ಪುತ್ರ ನಿತಿನ್ ಅಗರ್‍ವಾಲ್, ಬಿಎಸ್‍ಪಿ ತೊರೆದು ಕೇಸರಿ ಪಕ್ಷ ಸೇರಿರುವ ಬ್ರಿಜೇಶ್ ಪಾಠಕ್, ಕಾಂಗ್ರೆಸ ನಾಯಕ ಪಿ.ಎಲ್. ಪುನಿಯಾ ಮಗ ತನುಜ್ ಪುನಿಯಾ ಕಣದಲ್ಲಿರುವ ಪ್ರಮುಖರು.
ದೇಶದ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು (404) ಹೊಂದಿರುವ ಉತ್ತರಪ್ರದೇಶದಲ್ಲಿ ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಅನಿರೀಕ್ಷಿತ ರಾಜಕೀಯಕ್ಕೆ ಸಾಕ್ಷಿಯಾದ ಉತ್ತರಪ್ರದೇಶದಲ್ಲಿ ಫೆ.11ರಂದು ಮತ್ತು ಫೆ.15ರಂದು ಕ್ರಮವಾಗಿ ಮೊದಲ ಮತ್ತು ಎರಡನೇ ಹಂತದ ಮತದಾನ ಆಗಿತ್ತು. ಮುಂದಿನ ನಾಲ್ಕು ಹಂತಗಳಿಗೆ ಫೆ. 23, 27, ಹಾಗೂ ಮಾರ್ಚ್ 4 ಮತ್ತು 8ರಂದು ಮತದಾನ ನಡೆಯಲಿದೆ. ಮಾರ್ಚ್ 11ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.
ಮಾಯಾವತಿ ವಿಶ್ವಾಸ : ಬಹುಜನ ಸಮಾಜ ಪಕ್ಷವು 300ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯ ಗಳಿಸಲಿದೆ ಎಂದು ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ ತಿಳಿಸಿದ್ದಾರೆ. ಲಕ್ನೋದ ಮತಗಟ್ಟೆಯೊಂದರಲ್ಲಿ ತಮ್ಮ ಹಕ್ಕು ಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಚುನಾವಣೆಯಲ್ಲಿ ಬಿಎಸ್‍ಪಿ ನಂಬರ್ 1 ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin