ಜೆಡಿಎಸ್‍ನಿಂದ ಚುನಾವಣಾ ಪೂರ್ವ ಸಮೀಕ್ಷೆ ?

ಈ ಸುದ್ದಿಯನ್ನು ಶೇರ್ ಮಾಡಿ

jds
ಬೆಂಗಳೂರು, ಫೆ.19- ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಶತಾಯಗತಾಯ ಹೋರಾಟ ನಡೆಸಿ ಸ್ವಂತ ಬಹುಮತದ ಮೇಲೆ ಅಧಿಕಾರಕ್ಕೇರಲು ಪಣ ತೊಟ್ಟಿರುವ ಜೆಡಿಎಸ್, ಜನರ ನಾಡಿಮಿಡಿತ ಅರಿಯಲು ಖಾಸಗಿ ಸಮೀಕ್ಷೆಗೆ ಮುಂದಾಗಿದೆ. ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗಲೇ ಜೆಡಿಎಸ್ ಬಗ್ಗೆ ಜನರಲ್ಲಿ ಇರುವ ಭಾವನೆಯನ್ನು ತಿಳಿಯಲು ಚುನಾವಣಾಪೂರ್ವ ಸಮೀಕ್ಷೆ ನಡೆಸಲಿದೆ ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ. ಇದಕ್ಕಾಗಿ ಖಾಸಗಿ ಸಂಸ್ಥೆಯೊಂದರಿಂದ ಸಮೀಕ್ಷೆ ನಡೆಸಲು ಉದ್ದೇಶಿಸಲಾಗಿದೆ. 20 ದಿನಗಳ ಅವಧಿಯಲ್ಲಿ ಆ ಸಂಸ್ಥೆ ವರದಿಯನ್ನು ಸಿದ್ದಪಡಿಸಲಿದ್ದು, ಸಮೀಕ್ಷಾ ವರದಿ ಆಧರಿಸಿ ವಿಧಾನಸಭೆ ಕ್ಷೇತ್ರವಾರು ಅಭ್ಯರ್ಥಿಗಳಿಗೆ ಟಿಕೆಟ್ ನೀಡಲು ಉದ್ದೇಶಿಸಿದೆ.ಸಮೀಕ್ಷೆ ಕಾರ್ಯದಲ್ಲಿ 200 ಜನರನ್ನೊಳಗೊಂಡ ತಂಡ ರಚಿಸಲಾಗಿದ್ದು, ಈ ತಂಡ ಕ್ಷೇತ್ರವಾರು ಜನರನ್ನು ಸಂಪರ್ಕಿಸಿ ಅಭಿಪ್ರಾಯ ಸಂಗ್ರಹಿಸಲಿದೆ.

ಆಯಾ ಕ್ಷೇತ್ರದಲ್ಲಿ ಜೆಡಿಎಸ್‍ನ ಟಿಕೆಟ್ ಆಕಾಂಕ್ಷಿಗಳು ಹೊಂದಿರುವ ಜನಬೆಂಬಲದ ಬಗ್ಗೆ ಹಾಗೂ ಗೆಲ್ಲುವ-ಸೋಲುವ ಬಗ್ಗೆ ವಿಶ್ಲೇಷಣಾತ್ಮಕ ವರದಿಯನ್ನು ಸಿದ್ದಪಡಿಸಲಾಗುತ್ತದೆ.
ಈಗಾಗಲೇ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ಮತ್ತು ಬಿಜೆಪಿ ಜೊತೆ ಕೈ ಜೋಡಿಸುವುದಿಲ್ಲ. ಒಂದು ವೇಳೆ ಬಹುಮತ ಬರದಿದ್ದರೆ ಮತ್ತೆ ಜನರ ಬಳಿ ಹೋಗುವುದಾಗಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಖಾಸಗಿ ಸಂಸ್ಥೆಯೊಂದಕ್ಕೆ ಸಮೀಕ್ಷೆ ನಡೆಸುವ ಹೊಣೆಗಾರಿಕೆ ನೀಡಲಾಗಿದೆ. ರಾಷ್ಟ್ರೀಯ ಪಕ್ಷಗಳು ಖಾಸಗಿಯಾಗಿ ನಡೆಸಿರುವ ಸಮೀಕ್ಷೆಯಂತೆ ಜೆಡಿಎಸ್ ಕೂಡ ಸಮೀಕ್ಷೆ ಮಾಹಿತಿ ಅರಿಯಲು ಮುಂದಾಗಿದೆ. ಅಭ್ಯರ್ಥಿಗಳ ಬೆಂಬಲದ ಜೊತೆಗೆ ಜೆಡಿಎಸ್ ಕುರಿತಂತೆ ಜನರಲ್ಲಿರುವ ಭಾವನೆಯನ್ನು ಕೂಡ ಅರ್ಥ ಮಾಡಿಕೊಂಡು ಅದರಂತೆ ಚುನಾವಣೆಗೆ ಸಜ್ಜಾಗಲು ಕಾರ್ಯತಂತ್ರ ರೂಪಿಸುತ್ತಿದೆ. ಅದರ ಒಂದು ಭಾಗವಾಗಿ ಸಮೀಕ್ಷೆ ಕೂಡ ಒಂದು ಕಾರ್ಯತಂತ್ರವಾಗಿದೆ.

ಏಕಾಂಗಿಯಾಗಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕೆಂಬ ಮಹದಾಸೆ ಹೊಂದಿದ್ದು , ಕೆಲವೊಂದು ಕ್ಷೇತ್ರಗಳಿಗೆ ಈಗಲೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಪಕ್ಷ ಸಂಘಟನೆಗೆ ಅವಕಾಶ ಮಾಡಿಕೊಡುವ ಉದ್ದೇಶವನ್ನು ಪಕ್ಷದ ವರಿಷ್ಠರು ಹೊಂದಿದ್ದಾರೆ. ಅಲ್ಲದೆ ಪಕ್ಷದ ಮುಖಂಡರ ಬೇರೆ ಬೇರೆ ತಂಡಗಳನ್ನು ರಚಿಸಿ ಜಿಲ್ಲಾ ಹಾಗೂ ತಾಲ್ಲೂಕುವಾರು ಪ್ರವೇಶ ಮಾಡುವ ಮೂಲಕ ಪಕ್ಷದ ಸಂಘಟನೆಗೆ ಜನರ ಒಲವನ್ನು ಅರಿಯುವ ಪ್ರಯತ್ನವನ್ನು ಕೂಡ ಈಗಾಗಲೇ ಮಾಡಲಾಗುತ್ತಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin