ಆರ್‍ಎಸ್‍ಎಸ್’ನ ಹಿರಿಯ ಮುಖಂಡ ಮೈ.ಚ.ಜಯದೇವ ನಿಧನ

ಈ ಸುದ್ದಿಯನ್ನು ಶೇರ್ ಮಾಡಿ

Mai-Cha-Jayadev

ಬೆಂಗಳೂರು, ಫೆ.20- ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ರಾಷ್ಟ್ರೀಯ ಸ್ವಯಂಸೇವಾ ಸಂಘಟನೆ (ಆರ್‍ಎಸ್‍ಎಸ್)ಯ ಹಿರಿಯ ಮುಖಂಡ ಮೈ.ಚ.ಜಯದೇವ ಇಂದು ಬೆಳಗ್ಗೆ ನಿಧನರಾಗಿದ್ದಾರೆ.ಚಾಮರಾಜಪೇಟೆಯಲ್ಲಿರುವ ಆರ್‍ಎಸ್‍ಎಸ್ ಕಚೇರಿ ಕೇಶವ ಕೃಪಾದಲ್ಲಿ ಬೆಳಗ್ಗೆ ಮೈ.ಚ.ಜಯದೇವ ಕೊನೆಯುಸಿರೆಳೆದರೆಂದು ಆಪ್ತ ಮೂಲಗಳು ತಿಳಿಸಿವೆ.
ಕಳೆದ ಹಲವು ದಿನಗಳಿಂದ ವಯೋ ಸಹಜ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ಕೇಶವ ಕೃಪಾದಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು.ಈ ಹಿಂದೆಯೂ ಅನಾರೋಗ್ಯಕ್ಕೆ ತುತ್ತಾದ ವೇಳೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರಾದರೂ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ ಕಂಡಿರಲಿಲ್ಲ. ಕಳೆದ ಹಲವು ತಿಂಗಳಿನಿಂದ ಅವರು ಕೇಶವ ಕೃಪಾದಲ್ಲಿ ದಿನಂಪ್ರತಿ ಚಿಕಿತ್ಸೆ ಪಡೆಯುತ್ತಿದ್ದರು.
ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆಂದು ತಿಳಿದುಬಂದಿದೆ. ಸಂಜೆ ಚಾಮರಾಜಪೇಟೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಸಂಪ್ರದಾಯಬದ್ಧವಾಗಿ ಅಂತ್ಯ ಸಂಸ್ಕಾರ ನಡೆಯಲಿದೆ.

ಜಯದೇವ ಹಿನ್ನೆಲೆ:

ಆರ್‍ಎಸ್‍ಎಸ್‍ನ ಕಟ್ಟಾ ಬೆಂಬಲಿಗರಾಗಿದ್ದ ಜಯದೇವ ಕರ್ನಾಟಕದಲ್ಲಿ ಸಂಘಟನೆ ಬೆಳೆಸುವುದರಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದರು. ವಿದ್ಯಾರ್ಥಿ ಜೀವನದಿಂದಲೇ ಸಂಘಟನೆ ಬಗ್ಗೆ ವಿಶೇಷ ಆಸಕ್ತಿ ವಹಿಸಿದ್ದ ಅವರು ಪ್ರಚಾರದಿಂದ ಸದಾ ದೂರ.ದಕ್ಷಿಣ ಭಾರತದಲ್ಲಿ ಆರ್‍ಎಸ್‍ಎಸ್ ಸಂಘಟನೆ ಬಲಪಡಿಸಲು ಅವರು ಹಗಲು-ರಾತ್ರಿ ಶ್ರಮಿಸಿದ್ದರು. ಆರ್‍ಎಸ್‍ಎಸ್ ನಾಯಕರಾದ ಮೋಹನ್ ಭಾಗವತ್, ಸುದರ್ಶನ್, ದತ್ತಾತ್ರೆಯ ಹೊಸಬಾಳೆ ಸೇರಿದಂತೆ ಅನೇಕ ದಿಗ್ಗಜರ ಜತೆ ಆತ್ಮೀಯ ಒಡನಾಟ ಹೊಂದಿದ್ದರು.   ವಿವಾದದಿಂದಲೂ ದೂರ ಇರುತ್ತಿದ್ದ ಮೈ.ಚ.ಜಯದೇವ ಅವರ ಪರಿಶ್ರಮದಿಂದಲೇ ರಾಜ್ಯದಲ್ಲಿ ಬಿಜೆಪಿ ಬೇರೂರಲು ಕಾರಣವಾಯಿತು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲು ಶಿಕ್ಷೆಗೆ ಅವರು ಗುರಿಯಾಗಿದ್ದರು. ಬಿಜೆಪಿ ನಾಯಕರ ಜತೆ ಒಡನಾಟ ಹೊಂದಿದ್ದ ಅವರು ಪಕ್ಷಕ್ಕೆ ಸೂಕ್ತ ಸಲಹೆ, ಮಾರ್ಗದರ್ಶನ ನೀಡುತ್ತಿದ್ದರು. ಜಯದೇವ ಅವರ ನಿಧನ ಸಂಘಟನೆಗೆ ತುಂಬಲಾರದ ನಷ್ಟ ಎಂದು ಹೇಳಲಾಗಿದೆ.

ಸಂತಾಪ:

ಆರ್‍ಎಸ್‍ಎಸ್ ಮುಖಂಡ ಮೈ.ಚ.ಜಯದೇವ ನಿಧನಕ್ಕೆ ಬಿಜೆಪಿ ಹಾಗೂ ಸಂಘಟನೆಯ ಅನೇಕ ಮುಖಂಡರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತ್‍ಕುಮಾರ್, ಡಿ.ವಿ.ಸದಾನಂದಗೌಡ, ರಮೇಶ್ ಜಿಗಜಿಣಗಿ, ವೆಂಕಯ್ಯನಾಯ್ಡು, ಸಂಸದರಾದ ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ, ಪಿ.ಸಿ.ಮೋಹನ್, ಮಾಜಿ ಸಚಿವರಾದ ವಿ.ಸೋಮಣ್ಣ, ಆರ್‍ಎಸ್‍ಎಸ್ ಮುಖಂಡರಾದ ಸಂತೋಷ್, ರವಿಕುಮಾರ್, ಬೃಂಗೇಶ್, ದತ್ತಾತ್ರೆಯ ಹೊಸಬಾಳೆ ಸೇರಿದಂತೆ ಅನೇಕರು ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಜಗದೀಶ್ ಶೆಟ್ಟರ್ ತೀವ್ರ ಸಂತಾಪ :

ಆರ್‍ಎಸ್‍ಎಸ್ ಮುಖಂಡ ಮೈ.ಚ.ಜಯದೇವ ನಿಧನಕ್ಕೆ ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.  ರಾಜ್ಯದಲ್ಲಿ ಆರ್‍ಎಸ್‍ಎಸ್ ಕಟ್ಟಿ ಬೆಳೆಸಿದ್ದವರಲ್ಲಿ ಮೈ.ಚ.ಜಯದೇವ ಅವರ ಪಾತ್ರ ಅತ್ಯಂತ ಹಿರಿದಾದುದು. ಅವರ ಹಠಾತ್ ನಿಧನ ಸಂಘಟನೆ ಹಾಗೂ ಬಿಜೆಪಿಗೆ ತುಂಬಲಾರದ ನಷ್ಟ ಎಂದು ಹೇಳಿದ್ದಾರೆ.  ವಿದ್ಯಾರ್ಥಿ ದಿಸೆಯಿಂದಲೇ ಆರ್‍ಎಸ್‍ಎಸ್ ಸಿದ್ಧಾಂತ ಮೈಗೂಡಿಸಿಕೊಂಡಿದ್ದ ಅವರು, ಎಂದಿಗೂ ನಂಬಿದ ತತ್ವ-ಸಿದ್ಧಾಂತಗಳನ್ನು ಹೊರತುಪಡಿಸಿ ರಾಜಿಯಾಗಿರಲಿಲ್ಲ. ತಮ್ಮ ಜೀವನದ ಕೊನೆಯುಸಿರು ಇರುವವರೆಗೂ ಒಂದೇ ಸಿದ್ಧಾಂತಕ್ಕೆ ಬದ್ಧರಾದ ಅಪರೂಪದ ವ್ಯಕ್ತಿ ಎಂದು ಬಣ್ಣಿಸಿದ್ದಾರೆ.

ಅವರು ನಮಗೆಲ್ಲ ಮಾರ್ಗದರ್ಶಕರಾಗಿ ಸೂಕ್ತ ಸಲಹೆಗಳನ್ನು ನೀಡಿದ್ದರು. ಪಕ್ಷದ ಸಂಘಟನೆ, ರಾಷ್ಟ್ರೀಯ ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕೆಂಬ ನೀತಿಪಾಠ ಮಾಡುತ್ತಿದ್ದರು.   ವಿಶೇಷವಾಗಿ ಕರ್ನಾಟಕದಲ್ಲಿ ಆರ್‍ಎಸ್‍ಎಸ್ ಬಲಪಡಿಸಲು ತಮ್ಮ ಜೀವನವನ್ನೇ ತ್ಯಾಗ ಮಾಡಿದ್ದರು. ಅವರ ನಿಧನದಿಂದ ಸಂಘಟನೆ ಹಾಗೂ ಪಕ್ಷಕ್ಕೆ ತುಂಬಲಾರದ ನಷ್ಟ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಶೆಟ್ಟರ್ ಪ್ರಾರ್ಥಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin