ರಾಜಾಜಿನಗರದಿಂದ ದೊಡ್ಡಗೊಲ್ಲರಹಟ್ಟಿವರೆಗೂ ಫ್ಲೈ ಓವರ್ ನಿರ್ಮಾಣ

ಈ ಸುದ್ದಿಯನ್ನು ಶೇರ್ ಮಾಡಿ

Fluover--01

ಬೆಂಗಳೂರು, ಫೆ.20- ಉದ್ಯಾನನಗರಿಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ವಾಹನ ದಟ್ಟಣೆ ನಿವಾರಿಸುವ ದೃಷ್ಟಿಯಿಂದ ಬಿಬಿಎಂಪಿ ಮತ್ತು ಸರ್ಕಾರ ಮಹತ್ವದ ಯೋಜನೆಯೊಂದನ್ನು ರೂಪಿಸಿದ್ದು, ರಾಜಾಜಿನಗರ 1ನೆ ಬ್ಲಾಕ್‍ನಿಂದ ದೊಡ್ಡಗೊಲ್ಲರಹಟ್ಟಿವರೆಗೂ ಮೇಲ್ಸೇತುವೆ ನಿರ್ಮಿಸಲು ತೀರ್ಮಾನಿಸಲಾಗಿದೆ.  ಬೋವಿಪಾಳ್ಯದಿಂದ ಕಮಲಾನಗರದ 40 ಕಣ್ಣಿನ ಬ್ರಿಡ್ಜ್‍ವರೆಗೂ ಬಿಬಿಎಂಪಿಯಿಂದ ಸೇತುವೆ ನಿರ್ಮಾಣವಾಗಲಿದೆ. ಸುಮನಹಳ್ಳಿ ಹೊರವರ್ತುಲದಿಂದ ದೊಡ್ಡಗೊಲ್ಲರಹಟ್ಟಿವರೆಗೂ ಶಾಸಕರು ಮತ್ತು ಸಂಸದರ ಅನುದಾನದಲ್ಲಿ ಮೇಲ್ಸೇತುವೆ ನಿರ್ಮಾಣವಾಗಲಿದೆ. ರಾಜಾಜಿನಗರದಿಂದ ದೊಡ್ಡಗೊಲ್ಲಹರಟ್ಟಿವರೆಗೂ ಮೇಲ್ಸೇತುವೆ ನಿರ್ಮಿಸಿ ನಂತರ ನೈಸ್ ರಸ್ತೆಗೆ ಲಿಂಕ್ ಮಾಡಲಾಗುವುದು. ಇದರಿಂದ ಮೈಸೂರು, ತುಮಕೂರು, ಮಾಗಡಿ ಕಡೆಗೆ ಸಂಚರಿಸುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ಇಂದು ಮೇಯರ್ ಜಿ.ಪದ್ಮಾವತಿ, ಶಾಸಕರಾದ ಗೋಪಾಲಯ್ಯ, ಮುನಿರತ್ನ, ಸಂಸದ ಡಿ.ಕೆ.ಸುರೇಶ್, ವಾರ್ಡ್ ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಭದ್ರೇಗೌಡ ಸೇರಿದಂತೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು.  ಈ ಸಂದರ್ಭದಲ್ಲಿ ಮೇಯರ್ ಮಾತನಾಡಿ, ಬೋವಿಪಾಳ್ಯದಿಂದ ಸುಮನಹಳ್ಳಿ ಹೊರವರ್ತುಲ ರಸ್ತೆವರೆಗೂ ಮೇಲ್ಸೇತುವೆ ನಿರ್ಮಿಸಲಾಗುತ್ತದೆ. ಈ ವೇಳೆ ಒಂದು ಮರವನ್ನೂ ಕಡಿಯುವುದಿಲ್ಲ. ಯಾವುದೇ ಪಾರ್ಕ್‍ಗೂ ಹಾನಿ ಮಾಡುವುದಿಲ್ಲ. ಎರಡೂ ಬದಿ ಮೇಲ್ಸೇತುವೆ ನಿರ್ಮಾಣ ಮಾಡುತ್ತೇವೆ. ಈ ಯೋಜನೆ ಬಗ್ಗೆ ರೂಪುರೇಷೆ ಸಿದ್ಧಗೊಂಡಿದೆ ಎಂದರು.

ಸರ್ಕಾರ ಮತ್ತು ಪಾಲಿಕೆ ಬಜೆಟ್‍ನಲ್ಲಿ ಈ ಯೋಜನೆ ಬಗ್ಗೆ ಪ್ರಸ್ತಾಪ ಮಾಡಲಿದ್ದೇವೆ. ಬರುವ ಸೋಮವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ಹೊರವರ್ತುಲ ರಸ್ತೆಯಿಂದ ಸಂಸದ ಡಿ.ಕೆ.ಸುರೇಶ್ ಮತ್ತು ಮುನಿರತ್ನ ಅವರ ಅನುದಾನದಲ್ಲಿ ಕಾಮಗಾರಿ ಮುಂದುವರಿಯುತ್ತಿದೆ. ಇದೊಂದು ಮಹತ್ವಾಕಾಂಕ್ಷೆ ಯೋಜನೆಯಾಗಿದ್ದು, ಇದು ಯಶಸ್ವಿಯಾದರೆ ನಗರದಲ್ಲಿ ಬಹುತೇಕ ವಾಹನದಟ್ಟಣೆ ನಿವಾರಣೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin