ವಿಧಾನಸಭೆಯಲ್ಲಿ ಹಲ್ಲೆ ಪ್ರಕರಣ : ಅರ್ಜಿ ಸಲ್ಲಿಸಲು ಡಿಎಂಕೆಗೆ ಹೈಕೋರ್ಟ್ ಅನುಮತಿ

ಈ ಸುದ್ದಿಯನ್ನು ಶೇರ್ ಮಾಡಿ

Tamilndua-01

ಚೆನ್ನೈ,ಫೆ.20-ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವ ವೇಳೆ ನಡೆದ ಗದ್ದಲ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಲು ಪ್ರತಿಪಕ್ಷ ಡಿಎಂಕೆಗೆ ಮದ್ರಾಸ್ ಹೈಕೋರ್ಟ್ ಅನುಮತಿ ನೀಡಿದೆ. ಇದರಿಂದ ಆಡಳಿತಾರೂಢ ಎಐಎಡಿಎಂಕೆಗೆ ಮತ್ತೊಂದು ಆತಂಕ ಎದುರಾಗಿದೆ. ಕಳೆದ ಶನಿವಾರ ಮುಖ್ಯಮಂತ್ರಿ ಯಡಪ್ಪಾಡಿ ಪಳನಿಸ್ವಾಮಿ ವಿಶ್ವಾಸ ಮತ ಯಾಚನೆ ವೇಳೆ ಭಾರೀ ಹೈಡ್ರಾಮ ನಡೆದಿತ್ತು. ತಮ್ಮ ವಿರುದ್ದ ಹಲ್ಲೆ ನಡೆಸಿದ ಎಐಎಡಿಎಂಕೆ ಶಾಸಕರ ವಿರುದ್ಧ ದೂರು ದಾಖಲಿಸಲು ಅನುಮತಿ ನೀಡಬೇಕೆಂದು ಡಿಎಂಕೆ ಶಾಸಕರು ಮದ್ರಾಸ್ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು.   ಡಿಎಂಕೆ ಸಲ್ಲಿಸುವ ಪ್ರಕರಣವನ್ನು ಆದ್ಯತೆ ಮೇರೆಗೆ ಪರಿಗಣಿಸುವುದಾಗಿ ನ್ಯಾಯಾಲಯ ಹೇಳಿದೆ. ಇಂದು ಅರ್ಜಿ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್‍ನ ಹಂಗಾಮಿ ಮುಖ್ಯ ನ್ಯಾಯಮಾರ್ತಿ ಎಚ್.ಜಿ.ರಮೇಶ್ ಅವರನ್ನೊಳಗೊಂಡ ಪೀಠ ದೂರು ದಾಖಲಿಸಲು ಅನುಮತಿ ನೀಡಿದೆ. ಹೀಗಾಗಿ ಮುಖ್ಯಮಂತ್ರಿ ಯಡಪ್ಪಾಡಿ ಪಳನಿಸ್ವಾಮಿಗೆ ಮತ್ತೊಂದು ಕಂಟಕ ಎದುರಾಗಿದೆ.

ಶನಿವಾರ ವಿಶ್ವಾಸ ಮತಯಾಚನೆ ಸಂದರ್ಭದಲ್ಲಿ ಗುಪ್ತ ಮತದಾನಕ್ಕೆ ಅವಕಾಶ ನೀಡಬೇಕೆಂದು ಡಿಎಂಕೆ ಮುಖಂಡ ಹಾಗೂ ವಿಧಾನಸಭೆಯ ಪ್ರತಿಪಕ್ಷದ ನಾಯಕ ಎಂ.ಕೆ.ಸ್ಟಾಲಿನ್, ಸ್ಪೀಕರ್ ಧನ್‍ಪಾಲ್ ಅವರನ್ನು ಒತ್ತಾಯಿಸಿದ್ದರು.   ಆದರೆ ಸ್ಪೀಕರ್ ಗುಪ್ತ ಮತದಾನಕ್ಕೆ ಅವಕಾಶ ನೀಡದೆ ತಲೆ ಎಣಿಸುವ ಮೂಲಕ ವಿಶ್ವಾಸ ಮತಯಾಚನೆಗೆ ಅವಕಾಶ ನೀಡಿದ್ದರು. ಈ ವೇಳೆ ಡಿಎಂಕೆ ಶಾಸಕರು ಸ್ಪೀಕರ್ ಅವರ ಕುರ್ಚಿ ಬಳಿ ತೆರಳಿ ಮೈಕ್ ಕಿತ್ತು ಹಾಕಿ, ಪೀಠೋಪಕರಣಗಳನ್ನು ಧ್ವಂಸಗೊಳಿಸಿ ಸ್ಪೀಕರ್ ಅವರನ್ನು ಹಿಡಿದೆಳೆದಿದ್ದರು.   ಈ ವೇಳೆ ತಳ್ಳಾಟ, ನೂಕಾಟ ನಡೆದು ಸ್ಪೀಕರ್ ಧನಪಾಲ್, ಎಂ.ಕೆ.ಸ್ಟಾಲಿನ್ ಸೇರಿದಂತೆ ಹಲವರ ಶರ್ಟ್, ಪಂಚೆ ಹರಿದು ಹಾಕಲಾಗಿತ್ತು. ಕೆಲವರ ಮೇಲೆ ಹಲ್ಲೆಯೂ ನಡೆದಿತ್ತು. ತಮ್ಮ ಮೇಲೆ ಶಾಸಕರು ಹಲ್ಲೆ ನಡೆಸಿದರೆಂಬ ಕಾರಣಕ್ಕಾಗಿ ವಿಶ್ವಾಸ ಮತಯಾಚನೆ ವೇಳೆ ಡಿಎಂಕೆಯ ಎಲ್ಲ ಶಾಸಕರನ್ನು ಉಚ್ಛಾಟಿಸಿದ್ದಲ್ಲದೆ ಬಲವಂತವಾಗಿ ಮಾರ್ಷಲ್‍ಗಳ ಮೂಲಕ ಹೊರ ಹಾಕಿಸಿದ್ದರು.

ಇದಾದ ಬಳಿಕ ಸ್ಟಾಲಿನ್ ಹಾಗೂ ಪಕ್ಷದ ಮುಖಂಡರು ಮರೀನಾ ಬೀಚ್ ಬಳಿ ಪ್ರತಿಭಟನೆ ನಡೆಸಿದ್ದರಿಂದ ಅವರನ್ನು ಬಂಧಿಸಲಾಗಿತ್ತು. ನಿನ್ನೆಯಷ್ಟೇ ಸ್ಟಾಲಿನ್ ವಿರುದ್ದ ಎಫ್‍ಐಆರ್ ದಾಖಲಿಸಲಾಗಿತ್ತು.   ಇದೀಗ ಡಿಎಂಕೆ ಕೂಡ ಎಐಎಡಿಎಂಕೆ ವಿರುದ್ದ ತೊಡೆತಟ್ಟಿದ್ದು, ದ್ರಾವಿಡರ ನಾಡಿನಲ್ಲಿ ಮುಂದೆ ನಡೆಯಲಿರುವ ರಾಜಕೀಯ ಮೇಲಾಟಗಳು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin