ಕಾರ್ಮಿಕರ ಆರೋಗ್ಯ ಕಾಪಾಡಿಕೊಳ್ಳಲು ಮೇಯರ್ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

Mayour--00141

ಬೆಂಗಳೂರು, ಫೆ.23- ಮಹಿಳೆಯರು ಮತ್ತು ಕೂಲಿ ಕಾರ್ಮಿಕರು ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಮೇಯರ್ ಜಿ.ಪದ್ಮಾವತಿ ಇಂದಿಲ್ಲಿ ಮನವಿ ಮಾಡಿಕೊಂಡರು.  ಪ್ರಕಾಶ್‍ನಗರ ವಾರ್ಡ್‍ನ ಗಾರ್ಮೆಂಟ್ಸ್‍ನಲ್ಲಿ ರೋಟರಿ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಉಚಿತ ಮಧುಮೇಹ ಮತ್ತು ಹೃದ್ರೋಗ ತಪಾಸಣಾ ಪರೀಕ್ಷೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.  ಗಾರ್ಮೆಂಟ್ಸ್‍ನಲ್ಲಿ ಹಗಲಿರುಳು ದುಡಿಯುತ್ತಿರುವ ಕಾರ್ಮಿಕರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದಿಲ್ಲ. ಹೀಗಾಗಿ ಹಲವಾರು ರೋಗರುಜನಗಳಿಗೆ ತುತ್ತಾಗುತ್ತಿದ್ದಾರೆ ಎಂದು ವಿಷಾದಿಸಿದರು.

ಕೂಲಿ ಕಾರ್ಮಿಕರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸಬೇಕು ಎಂಬ ಉದ್ದೇಶದಿಂದ ಇಂದು ನಗರದ 36 ಸಂಸ್ಥೆಗಳಲ್ಲಿ ಏಕಕಾಲಕ್ಕೆ ಮಧುಮೇಹ ಮತ್ತು ಉಚಿತ ಹೃದ್ರೋಗ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.  ತಪಾಸಣಾ ಶಿಬಿರದಲ್ಲಿ ಕಾರ್ಮಿಕರಿಗೆ ಮಧುಮೇಹ ಲಕ್ಷಣ ಕಂಡುಬಂದರೆ ಅವರಿಗೆ ರೋಟರಿ ಸಂಸ್ಥೆ ವತಿಯಿಂದ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ಮೇಯರ್ ತಿಳಿಸಿದರು.  ಈ ಹಿಂದೆ ಮಾರಕ ಕ್ಯಾನ್ಸರ್ ರೋಗ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಈಗ ಹೃದ್ರೋಗ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಅದೇ ರೀತಿ ಮುಂದಿನ ದಿನಗಳಲ್ಲಿ ಎಲ್ಲಾ ರೀತಿಯ ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಪದ್ಮಾವತಿ ಹೇಳಿದರು. ಕಾರ್ಯಕ್ರಮದಲ್ಲಿ ನೂರಾರು ಕಾರ್ಮಿಕರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ರೋಟರಿ ಅಧ್ಯಕ್ಷ ಹರೀಶ್ ಮತ್ತಿತರರು ಹಾಜರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin