ಬಿಗ್ ಓಪನಿಂಗ್ ಪಡೆದುಕೊಂಡ ‘ಹೆಬ್ಬುಲಿ’

ಈ ಸುದ್ದಿಯನ್ನು ಶೇರ್ ಮಾಡಿ

Hebbuli

ಬೆಂಗಳೂರು, ಫೆ.23- ಚಿತ್ರೀಕರಣದ ಸಮಯದಿಂದ ಅತ್ಯಂತ ಕುತೂಹಲ ಮೂಡಿಸಿದ್ದ ಕಿಚ್ಚ ಸುದೀಪ್ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ಹೆಬ್ಬುಲಿಯು ಮೊದಲ ದಿನವೇ ತನ್ನ ಘರ್ಜನೆಯನ್ನು ಶುರು ಮಾಡಿದೆ.  ಸಂತೋಷ್ ಚಿತ್ರಮಂದಿರ ದಲ್ಲಿ ಇಂದು ಈ ಚಿತ್ರ ಬಿಡುಗಡೆಗೊಂಡಿದ್ದು ಅಭಿಮಾನಿಗಳ ಸಂತಸವು ಎಲ್ಲೆ ಮೀರಿದೆ. ತಮ್ಮ ಮೆಚ್ಚಿನ ನಟರುಗಳ ಕಟೌಟ್‍ಗಳಿಗೆ ಅಭಿಮಾನಿಗಳು ಭಾರೀ ಗಾತ್ರದ ಹೂವಿನ ಹಾರ ಹಾಗೂ ಪಟಾಕಿಗಳನ್ನು ಸಿಡಿಸುವ ಮೂಲಕ ಚಿತ್ರಮಂದಿರದ ಮುಂದೆ ಇಂದೇ ಶಿವರಾತ್ರಿ ಹಬ್ಬದ ವಾತಾವರಣವನ್ನು ಸೃಷ್ಟಿಸಿದ್ದರು.
ಮಾಣಿಕ್ಯ ಚಿತ್ರದಲ್ಲೇ ತಮ್ಮ ಅದ್ಭುತ ಜೋಡಿಯಿಂದ ಪ್ರೇಕ್ಷಕರ ಮನ ಗೆದ್ದಿದ್ದ ಸುದೀಪ್ ಹಾಗೂ ರವಿಚಂದ್ರನ್‍ರ ನಟನೆಯೂ ಈ ಚಿತ್ರದಲ್ಲೂ ಕಮಾಲ್ ಸೃಷ್ಟಿಸಿದೆ.

ಸುದೀಪ್ ಇದೇ ಮೊದಲ ಬಾರಿಗೆ ಸೇನೆಯ ಕಮಾಂಡರ್ ಪಾತ್ರದಲ್ಲಿ ಜಬರ್‍ದಾಸ್ತಾಗಿ ತಮ್ಮ ಎಂದಿನ ಡೈಲಾಗ್‍ಗಳ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದು ಪರ ರಾಜ್ಯಗಳಲ್ಲಿರುವ ಸುದೀಪ್ ಅಭಿಮಾನಿಗಳ ಕಾತರವನ್ನು ತಣಿಸಲು ಅಲ್ಲಿನ ಚಿತ್ರಮಂದಿರಗಳಲ್ಲೂ ನಿರ್ಮಾಪಕ ರಘುನಾಥ್ ಹಾಗೂ ಉಮಾಪತಿ ಅವರು ಚಿತ್ರವನ್ನು ಬಿಡುಗಡೆಗೊಳಿಸಿದ್ದಾರೆ.

ಅಭಿಮಾನಿಗಳೊಂದಿಗೆ ಚಿತ್ರ ವೀಕ್ಷಿಸಿದ ಸುದೀಪ್:

ಇಂದು ಸಂತೋಷ್ ಚಿತ್ರಮಂದಿರದಲ್ಲಿ ಅಭಿಮಾನಿಗಳೊಂದಿಗೆ ಚಿತ್ರ ವೀಕ್ಷಿಸಿದ ಕಿಚ್ಚ ಸುದೀಪ್ ಅವರು ನಂತರ ಚಿತ್ರದ ನಂತರ ಸುದ್ದಿಗಾರರೊಂದಿಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿ ದ್ದಾರೆ.  ಕೃಷ್ಣ ನಿರ್ದೇಶನದ ಹೆಬ್ಬುಲಿ ಚಿತ್ರಕ್ಕೆ ಮೊದಲ ಪ್ರದರ್ಶನದಿಂದಲೂ ಉತ್ತಮ ಪ್ರತಿಕ್ರಿಯೆ ಬಂದಿರುವುದರಿಂದ ನಮ್ಮ ಪ್ರಯತ್ನಕ್ಕೇ ಪ್ರೇಕ್ಷಕರು  ಉತ್ತಮ ಪ್ರತಿಕ್ರಿಯೆಯನ್ನೇ ನೀಡಿದ್ದಾರೆ.
ಚಿತ್ರದ ಪ್ರಚಾರಕ್ಕಾಗಿ ಚಿತ್ರತಂಡದೊಂದಿಗೆ ಮುಂದಿನ ದಿನಗಳಲ್ಲಿ ಪ್ರವಾಸಯಾತ್ರೆಯನ್ನು ಕೈಗೊಳ್ಳುವ ಸಾಧ್ಯತೆ ಇದೆ ಎಂದು ಕೂಡ ಕಿಚ್ಚ ಸುದೀಪ್ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಚಿತ್ರದ ಬಗ್ಗೆ ಒಂದಿಷ್ಟು

ಬಹಳಷ್ಟು ನಿರೀಕ್ಷೆ ಹುಟ್ಟಿಸಿದಂತಹ ಬಹು ದೊಡ್ಡ ತಾರಾಗಣದ ಅದ್ಧೂರಿ ಚಿತ್ರ ಹೆಬ್ಬುಲಿ ರಾಜ್ಯವಲ್ಲದೆ ದೇಶಾದ್ಯಂತ ಸುಮಾರು 500ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿದೆ.
ಅಭಿನವ ಚಕ್ರವರ್ತಿ, ನಟ ಕಿಚ್ಚ ಸುದೀಪ್ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ಸಹೋದರರಾಗಿ ಅಭಿನಯಿಸಿರುವ ಈ ಚಿತ್ರ ಹೊಸ ಸಂಚಲನ ಸೃಷ್ಟಿಸಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.ಇದುವರೆಗೂ ಚಿತ್ರ ಹಾಗಿದೆ, ಹೀಗಿದೆ ಎಂದು ಕಿಚ್ಚನ ಹಾಗೂ ಕ್ರೇಜಿಸ್ಟಾರ್ ಅಭಿಮಾನಿಗಳೇ ಎಲ್ಲಾ ಕಡೆಗಳಲ್ಲಿ ಪೊರಮೋಷನ್ ಮಾಡಿ ಸಾರ್ವಜನಿಕರಲ್ಲಿ ಕುತೂಹಲ ಹಾಗೂ ಅಗಾಧವಾದ ನಿರೀಕ್ಷೆಗಳನ್ನು ಹುಟ್ಟುಹಾಕುತ್ತಿದ್ದರು. ಚಿತ್ರತಂಡ ಕೂಡ ಚಿತ್ರದ ಆಡಿಯೋ ಸಿ.ಡಿ.ಗಳನ್ನು ಕರ್ನಾಟಕದ ಮ್ಯಾಂಚೆಸ್ಟರ್ ಎನಿಸಿಕೊಂಡ ದಾವಣಗೆರೆ ಮಹಾನಗರದಲ್ಲಿ ಅದ್ದೂರಿಯಾಗಿ ನೆರವೇರಿಸಿದ್ದನ್ನು ಬಿಟ್ಟರೆ ಮಾಧ್ಯಮಗಳ ಮುಂದೆ ಬಂದು ಪ್ರಚಾರ ಮಾಡಿದ್ದಿಲ್ಲ. ಇತ್ತೀಚೆಗಷ್ಟೇ ಚಿತ್ರವು ಸೆನ್ಸಾರ್ ಮಂಡಳಿಯ ಸದಸ್ಯರ ಮುಂದೆ ಪ್ರದರ್ಶನಗೊಂಡು ಮೆಚ್ಚುಗೆ ಪಡೆದುಕೊಂಡಿದೆ. ಅಲ್ಲದೆ ಯು/ಎ ಪ್ರಮಾಣ ಪತ್ರ ಕೂಡ ಪಡೆದುಕೊಂಡಿದೆ.

ಚಿತ್ರತಂಡ ಮೊನ್ನೆ ಪಂಚತಾರಾ ಹೋಟೆಲ್ ಒಂದರಲ್ಲಿ ಮಾಧ್ಯಮಗಳ ಮುಂದೆ ಹಾಜರಾಗಿತ್ತು. ಚಿತ್ರದ ನಾಯಕ ನಟರಾದ ಕಿಚ್ಚ ಸುದೀಪ, ಕ್ರೇಜಿಸ್ಟಾರ್ ರವಿಚಂದ್ರನ್, ನಿರ್ಮಾಪಕರಾದ ರಘುನಾಥ್ ಮತ್ತು ಉಮಾಪತಿ, ನಿರ್ದೇಶಕ ಕೃಷ್ಣ, ಖಳನಟ ರವಿಶಂಕರ್ ಸೇರಿದಂತೆ ಇಡೀ ಹೆಬ್ಬುಲಿ ಚಿತ್ರತಂಡವೇ ಅಲ್ಲಿ ಹಾಜರಿತ್ತು. ರಾಜ್ಯ ಹಾಗೂ ದೇಶ-ವಿದೇಶಗಳಲ್ಲಿ ಕೂಡ ಬಿಡುಗಡೆಯಾಗುತ್ತಿರುವ ಹೆಬ್ಬುಲಿಯ ಬಗ್ಗೆ ಹಾಗೂ ಚಿತ್ರದಲ್ಲಿ ಕೆಲಸ ಮಾಡಿದಂಥ ಸಂದರ್ಭದಲ್ಲಿ ತಮ್ಮ ಸಿಹಿ, ಕಹಿ ಅನುಭವಗಳ ಬಗ್ಗೆಯೂ ಪ್ರತಿಯೊಬ್ಬರೂ ಹೇಳಿಕೊಂಡರು.ಸಿನಿಮಾ ಆರಂಭಿಸಿದಾಗಿನಿಂದಲೂ ಚಿತ್ರವನ್ನು ಯಾವಾಗ ರಿಲೀಸ್ ಮಾಡುವಿರೆಂದು ಕಾಯುತ್ತಿದ್ದವರಿಗೆ ಚಿತ್ರದ ನಿರ್ಮಾಪಕರಾದ ರಘುನಾಥ್ ಹಾಗೂ ಉಮಾಪತಿ ಅವರು ನಾಳೆ ರಿಲೀಸ್ ಮಾಡುತ್ತಿರುವ ವಿಷಯವನ್ನು ಪ್ರಕಟಿಸಿದರು. ವಿತರಕರಿಗೆ ಎಲ್ಲ ಕಡೆಗಳಿಂದ ಬರುತ್ತಿದ್ದ ಬೇಡಿಕೆಗಳಿಗೆ ಉತ್ತರ ನೀಡುವುದು ಅವರಿಗೆ ಹರ ಸಾಹಸವಾಗಿತ್ತು. ಅಲ್ಲಿ ನೆರೆದಿದ್ದ ಎಲ್ಲರಿಂದ ಬಂದ ಅಭಿಪ್ರಾಯ ಚಿತ್ರ ತುಂಬಾ ಚೆನ್ನಾಗಿ ಬಂದಿದೆ ಎಂಬುದೇ ಆಗಿತ್ತು.

ನಾಯಕ ನಟ ಸುದೀಪ್ ತನ್ನ ಈ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಇರುವ ಅಪಾರ ನಿರೀಕ್ಷೆ ಕಂಡು ಮೂಕ ರಾಗಿದ್ದರು. ತುಂಬಾ ಖುಷಿಯಲ್ಲಿ ಮಾತನಾಡಿದ ಅವರು, ನನ್ನ ಯಾವ ಚಿತ್ರಕ್ಕೂ ಇಲ್ಲದ ಅದ್ಭುತವಾದ ಪ್ರಚಾರ ಈ ಚಿತ್ರಕ್ಕೆ ಸಿಕ್ಕಿದೆ. ಕನ್ನಡ ಜನತೆ ಚಿತ್ರವನ್ನು ವೀಕ್ಷಿಸಲು ತುದಿಗಾಲಲ್ಲಿ ಕಾಯುವಂತೆ ಮಾಡಿದ್ದು, ಚಿತ್ರದ ಮೇಕಿಂಗ್.ನಾವು ಯಾವತ್ತೂ ಈ ಚಿತ್ರದ ಪಬ್ಲಿಸಿಟಿಗೆಂದು ಹೋಗಿಲ್ಲ, ಆದರೂ ಜನರಲ್ಲಿ ಇಷ್ಟೊಂದು ನಿರೀಕ್ಷೆ ಮೂಡಿಸಲು ಕಾರಣ ನಾಲ್ಕು ಜನ  ಒಳ್ಳೆಯವರು ಸೇರಿಕೊಂಡು, ಒಂದು ಒಳ್ಳೇ ಸಿನಿಮಾವನ್ನು ನಿರ್ಮಾಣ ಮಾಡಿರುವುದು. ಜನರ ನಿರೀಕ್ಷೆಗೆ ತಕ್ಕಹಾಗೆ ಹೆಬ್ಬುಲಿ ಸಿನಿಮಾ ಮೂಡಿಬಂದಿದೆ, ಗೆದ್ದೇ ಗೆಲ್ಲುವ ವಿಶ್ವಾಸ ನನ್ನಲ್ಲಿದೆ ಎಂದು ಹೇಳಿದರು. ಇನ್ನು ಹೆಬ್ಬುಲಿ ಚಿತ್ರದ ಬಗ್ಗೆ ಬರುತ್ತಿರುವ ದಿನಕ್ಕೊಂದು ಸುದ್ದಿಗಳು, ದಿನದಿಂದ ದಿನಕ್ಕೆ ಚಿತ್ರದ ಕ್ರೇಜ್ ಹೆಚ್ಚಾಗುವಂತೆ ಮಾಡುತ್ತಿದೆ. ಕೆಲ ದಿನಗಳ ಹಿಂದೆ ಹೆಬ್ಬುಲಿ ಚಿತ್ರದ ವಿಡಿಯೋ ಸಾಂಗ್ ಕೂಡ ಬಿಡುಗಡೆಯಾಗಿತ್ತು. ಇನ್ನೊಂದು ವಿಶೇಷವೆಂದರೆ, ಅಭಿಮಾನಿಗಳಿಗಾಗಿ ಸ್ವತಃ ಕಿಚ್ಚ ಸುದೀಪ್ ಅವರೇ ತಮ್ಮ ಟ್ವಿಟರ್ ಮೂಲಕ ಹಾಡಿನ ಟೀಸರ್‍ನ್ನು ಬಿಡುಗಡೆ ಮಾಡಿದ್ದರು.

ಈಗಾಗಲೇ ಹೆಬ್ಬುಲಿ ಚಿತ್ರದ ಟೈಟಲ್  ರ್ಯಕನ್ನು ಯೂ-ಟ್ಯೂಬ್ ಸೇರಿದಂತೆ ಎಲ್ಲಾ ಸೋಷಿಯಲ್ ಮೀಡಿಯಾಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳು ವೀಕ್ಷಿಸಿ ಖುಷಿಪಟ್ಟಿದ್ದಾರೆ. ಮ್ಯಾಜಿಕ್ ಕಂಪೋ ಸರ್ ಎಂದೇ ಹೆಸರಾದ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿರುವ ಈ ಹಾಡಿಗೆ, ಚೇತನ್ ಸಾಹಿತ್ಯ ಬರೆದಿದ್ದಾರೆ. ಇದೇ ಮೊದಲ ಬಾರಿಗೆ ಕಿಚ್ಚ ಸುದೀಪ್ ಚಿತ್ರದಲ್ಲಿ ಒಬ್ಬ ಪ್ಯಾರಾ ಮಿಲಿಟರಿ ಕಮಾಂಡೋ ಆಗಿ ಕಾಣಿಸಿಕೊಂಡಿದ್ದಾರೆ. ಸುದೀಪ್‍ಗೆ ಅಮಲಾ ಪೌಲ್ ನಾಯಕಿಯಾಗಿದ್ದು, ಬಹಳಷ್ಟು ವಿಶೇಷತೆ ಒಳಗೊಂಡಿರುವ ಈ ಚಿತ್ರದಲ್ಲಿ ಸುಂದರ ತಾಣಗಳು ಹಾಗೂ ಅರ್ಜುನ್ ಜನ್ಯರವರ ಸಂಗೀತದ ಮೋಡಿ ಎಲ್ಲರನ್ನೂ ಸೆಳೆಯಲಿದೆಯಂತೆ. ಈಗಾಗಲೇ ಅಭಿಮಾನಿಗಳ ನಿರೀಕ್ಷೆಯಂತೆ ಹೆಬ್ಬುಲಿ ಬಿಡುಗಡೆಗೊಂಡಿದ್ದು,  ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಹೊರಬರುತ್ತಿದೆ.ಬಿಡುಗಡೆಯಾದ ಎಲ್ಲ ಕೇಂದ್ರಗಳಲ್ಲಿಯೂ ಕೂಡ ಹೆಬ್ಬುಲಿಯ ಆರ್ಭಟ ಜೋರಾಗಿದ್ದು, ನೆಚ್ಚಿನ ನಟ ಸುದೀಪ್‍ರ ಅಭಿನಯವನ್ನು ಅಭಿಮಾನಿಗಳು ಕೊಂಡಾಡಿದ್ದಾರೆ. ಇನ್ನು ಈ ಹೆಬ್ಬುಲಿಯ ಆರ್ಭಟ ಯಾವ ರೀತಿ ಸಾಗಲಿದೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin