ಅಡಿಕೆ ವ್ಯಾಪಾರಿಯನ್ನು ಹಿಂಬಾಲಿಸಿ ಅಪಹರಿಸಿದ್ದ ನಾಲ್ವರು ಅಂತಾರಾಜ್ಯ ದರೋಡೆಕೋರರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

kunigl

ಕುಣಿಗಲ್, ಫೆ.24- ಬೆಂಗಳೂರಿನಿಂದ ಮಂಗಳೂರಿಗೆ ಬಸ್‍ನಲ್ಲಿ ಹೋಗುತ್ತಿದ್ದ ಅಡಿಕೆ ವ್ಯಾಪಾರಿಯನ್ನು ಕಾರಿನಲ್ಲಿ ಹಿಂಬಾಲಿಸಿ ಯಡಿಯೂರು ಬಳಿ ಬಸ್ ನಿಲ್ಲಿಸಿದಾಗ ಅವರನ್ನು ಅಪಹರಿಸಿ 22 ಲಕ್ಷ ಹಣ ದರೋಡೆ ಮಾಡಿ ಪರಾರಿಯಾಗಿದ್ದ ನಾಲ್ವರು ಅಂತಾರಾಜ್ಯ ದರೋಡೆಕೋರರನ್ನು ಅಮೃತೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಗುಜರಾತ್‍ನ ಪಠಾಣ್ ಜಿಲ್ಲೆಯ ಹಿತೇಶ್‍ಪಟೇಲ್, ವಿಷ್ಣು ದೇಸಾಯಿ, ಮೈಶಾನ್ ಜಿಲ್ಲೆಯ ಅಶ್ವಿನ್‍ಕುಮಾರ್ ಹಾಗೂ ಏಕಿಶನ್ ಬಂಧಿತ ದರೋಡೆಕೋರರಾಗಿದ್ದು, ಈ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ರಘುಬಾಯಿ, ಸೀಬಿ ಹಾಗೂ ಬಾಬು ಬಂಧನಕ್ಕೆ ತನಿಖೆ ಚುರುಕುಗೊಂಡಿದೆ.ಕಳೆದ ಜ.23ರಂದು ಅಡಿಕೆ ವ್ಯಾಪಾರಿ ಕೀರ್ತಿಕುಮಾರ್ ಎಂಬುವವರು 22 ಲಕ್ಷ ಹಣದೊಂದಿಗೆ ಬೆಂಗಳೂರಿನಿಂದ ಮಂಗಳೂರಿಗೆ ಖಾಸಗಿ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದರು.

ಈ ವಿಷಯ ತಿಳಿದ ದರೋಡೆಕೋರರು ಗುಜರಾತ್‍ನಲ್ಲಿ ಸಂಚು ರೂಪಿಸಿ ಕ್ಸೈಲೋ ಕಾರಿನಲ್ಲಿ ಗುಜರಾತ್ ರಾಜ್ಯದಿಂದ ಬೆಂಗಳೂರಿಗೆ ಬಂದಿದ್ದಾರೆ. ಬೆಂಗಳೂರಿನಲ್ಲಿ ಕೀರ್ತಿಕುಮಾರ್ ಮಂಗಳೂರು ಬಸ್ ಹತ್ತುವುದನ್ನೇ ಕಾದು ಆ ಬಸ್‍ಅನ್ನು ಏಳೆಂಟು ಮಂದಿ ದರೋಡೆಕೋರರು ಹಿಂಬಾಲಿಸಿದ್ದಾರೆ. ತಾಲೂಕಿನ ಯಡಿಯೂರು ಹೋಬಳಿ ಮಾಗಡಿ ಪಾಳ್ಯದ ಬಳಿ ಊಟಕ್ಕಾಗಿ ಬಸ್ ನಿಲ್ಲಿಸಿದ್ದ ಸಂದರ್ಭದಲ್ಲಿ ಕೀರ್ತಿಕುಮಾರ್ ಕೆಳಗಿಳಿದು ನಿಂತಿದ್ದರು. ಈ ವೇಳೆ ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದ ದರೋಡೆಕೋರರು ಇವರನ್ನು ಅಪಹರಿಸಿ 22 ಲಕ್ಷ ರೂ. ಹಣ ದೋಚಿ ಮಾಗಡಿ ತಾಲೂಕಿನ ನಾರಸಂದ್ರ ಬಳಿ ಆತನನ್ನು ಕೆಳಗಿಳಿಸಿ ಪರಾರಿಯಾಗಿದ್ದರು.ಹಣ ಕಳೆದುಕೊಂಡ ಅಡಿಕೆ ವ್ಯಾಪಾರಿ ಕೀರ್ತಿಕುಮಾರ್ ಅಮೃತೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆರೋಪಿಗಳ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾಪಂತ್ ಮಾರ್ಗದರ್ಶನದಲ್ಲಿ ಡಿವೈಎಸ್‍ಪಿ ಚಂದ್ರಶೇಖರ್, ಸಿಪಿಐ ಬಾಳೇಗೌಡ, ಪಿಎಸ್‍ಐಗಳಾದ ಧರ್ಮೇಗೌಡ, ಕೇಶವಮೂರ್ತಿ ತಂಡ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಿ 6 ಲಕ್ಷ ಹಣ ಹಾಗೂ 4 ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin