ಬಿಜೆಪಿ ಸಿಡಿ ಮತ್ತು ಕಾಂಗ್ರೆಸ್ ಡೈರಿಯ ಕುರಿತು ಉನ್ನತ ಮಟ್ಟದ ತನಿಖೆಗೆ ಈಶ್ವರಪ್ಪ ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

Eshwarapa-01

ಶಿವಮೊಗ್ಗ,ಫೆ.24- ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ , ಕೇಂದ್ರ ಸಚಿವ ಅನಂತಕುಮಾರ್ ನಡೆಸಿರುವ ಮಾತಿನ ಸಂಭಾಷಣೆಯ ಸಿಡಿ ಹಾಗೂ ವಿಧಾನಪರಿಷತ್ ಸದಸ್ಯ ಗೋವಿಂದರಾಜು ಅವರ ನಿವಾಸದಲ್ಲಿ ಸಿಕ್ಕಿರುವ ಡೈರಿ ವಿಚಾರ ಉನ್ನತ ಮಟ್ಟದಲ್ಲಿ ತನಿಖೆಯಾಗಬೇಕೆಂದು ಮೇಲ್ಮನೆ ಪ್ರತಿಪಕ್ಷದ ನಾಯಕ ಈಶ್ವರಪ್ಪ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಎರಡೂ ಪ್ರಕರಣಗಳ ಬಗ್ಗೆ ಉನ್ನತ ಮಟ್ಟದ ತನಿಖೆಯಾದರೆ ಮಾತ್ರ ಸತ್ಯಾಂಶ ಹೊರಬರಲು ಸಾಧ್ಯವಾಗುತ್ತದೆ. ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಳಂಬ ಮಾಡದೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಿ ಎಂದು ಒತ್ತಾಯಿಸಿದರು.

ಇದೇ ವೇಳೇ ವಿಧಾನಪರಿಷತ್ ಸದಸ್ಯ ಗೋವಿಂದ ರಾಜು ಅವರ ಡೈರಿಯಲ್ಲಿ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಬಟ್ಟಬಯಲಾಗಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು.   ಭ್ರಷ್ಟಾಚಾರ ಸಾಬೀತಾದರೆ ಅಧಿಕಾರದಲ್ಲಿ ಒಂದೇ ಒಂದು ಕ್ಷಣವೂ ಮುಂದುವರೆಯುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಿದ್ದರು. ಅವರ ಆಪ್ತರ ಮನೆಯಲ್ಲೇ ಎಲ್ಲವೂ ಬಹಿರಂಗಗೊಂಡಿರುವುದರಿಂದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.   ನಮ್ಮ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಇದೇ ಆರೋಪ ಮಾಡಿದಾಗ ಕಾಂಗ್ರೆಸ್ ನಾಯಕರು ಬಾಯ್ಗೆ ಬಂದಂತೆ ಮಾತನಾಡಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅಂತೂ ಕನಿಷ್ಠ ಪದ ಬಳಸಿದರು. ಹೈಕಮಾಂಡ್‍ಗೆ ಕಪ್ಪ ಕಾಣಿಕೆ ನೀಡಿರುವುದು ಡೈರಿಯಲ್ಲಿ ರುಜುವಾತಾಗಿದೆ. ಇದರ ಹೊಣೆಯನ್ನು ಯಾರು ಹೊರುತ್ತಾರೆ ಎಂದು ಈಶ್ವರಪ್ಪ ಪ್ರಶ್ನಿಸಿದರು.

ಭ್ರಷ್ಟಾಚಾರ ರಹಿತ ಮತ್ತು ಪಾರದರ್ಶಕ ಆಡಳಿತ ನೀಡಿದ್ದೇವೆ. ಜೈಲಿಗೆ ಹೋಗಿಬಂದವರಿಂದ ಪಾಠ ಕಲಿಯಬೇಕಿಲ್ಲ ಎಂದು ಹೇಳುತ್ತಿದ್ದ ಸಿದ್ದರಾಮಯ್ಯನವರ ಬಣ್ಣ ಬಯಲಾಗಿದೆ. ತಮ್ಮ ಕುರ್ಚಿ ಉಳಿಸಿಕೊಳ್ಳಲು ಅವರು ಏನು ಬೇಕಾದರೂ ಮಾಡಬಲ್ಲರು ಎಂಬುದಕ್ಕೆ ಡೈರಿಯೇ ನಿದರ್ಶನ. ಭ್ರಷ್ಟಾಚಾರದ ಮಾತನಾಡುವ ನೈತಿಕತೆಯನ್ನು ಕಳೆದುಕೊಂಡಿದೆ ಎಂದು ವಾಗ್ದಾಳಿ ನಡೆಸಿದರು.   ಈ ಸರ್ಕಾರದಲ್ಲಿ ಇನ್ನು ಅನೇಕ ಹಗರಣಗಳು ನಡೆದಿವೆ. ಸೂಕ್ತ ಕಾಲದಲ್ಲಿ ಎಲ್ಲವನ್ನು ಬಹಿರಂಗ ಮಾಡಲಾಗುವುದು, ಮೊದಲು ಡೈರಿಯಲ್ಲಿ ಪ್ರಸ್ತಾಪಿಸಿದ ಅಂಶಗಳ ಬಗ್ಗೆ ಮುಖ್ಯಮಂತ್ರಿಯವರು ಸ್ಪಷ್ಟನೆ ನೀಡಲಿ ಎಂದು ಒತ್ತಾಯಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin