ಕೋರ್ಟ್’ಗೆ ವಿಚಾರಣೆಗೆ ಕರೆತರುತ್ತಿದ್ದಾಗ ಸಿನಿಮಾ ಸ್ಟೈಲಲ್ಲಿ ಕುಖ್ಯಾತ ಕೈದಿಯ ಕಗ್ಗೊಲೆ

ಈ ಸುದ್ದಿಯನ್ನು ಶೇರ್ ಮಾಡಿ

Filmy-Murder

ಮದುರೈ, ಫೆ.25 – ಸಿನಿಮಾ ಸ್ಟೈಲಲ್ಲಿ ಪೊಲೀಸ್ ಪಹರೆಯಲ್ಲಿ ನ್ಯಾಯಾಲಯಕ್ಕೆ ವಿಚಾರಣೆಗೆ ಬರುತ್ತಿದ್ದ ಕುಖ್ಯಾತ ಕೈದಿಯೊಬ್ಬನನ್ನು ದುಷ್ಕರ್ಮಿಗಳ ಗುಂಪೊಂದು ಕೊಚ್ಚಿ ಕೊಲೆ ಮಾಡಿರುವ ಭೀಕರ ಘಟನೆ ತಮಿಳುನಾಡಿನ ತೂತುಕುಡಿ (ಟ್ಯೂಟಿಕಾರನ್) ಬಳಿ ನಿನ್ನೆ ನಡೆದಿದೆ.   ಕಗ್ಗೊಲೆಯಾದ ದಲಿತ ಮುಖಂಡ ಪಶುಪತಿ ಪಾಂಡ್ಯನ್‍ನ ಆಪ್ತ ಸಹಚರ ಸಿಂಗಾರಂ ಅಲಿಯಾಸ್ ಬಾಲಸುಬ್ರಹ್ಮಣ್ಯನ್ (48) ಹತ್ಯೆಯಾದ ವಿಚಾರಣಾ ಕೈದಿ. ತೂತುಕುಡಿಯ ಅತ್ತೂರು ಸಮೀಪದ ಪುಲ್ಲವೆಲಿಯ ನಿವಾಸಿಯಾದ ಈತನ ವಿರುದ್ಧ ಕೊಲೆ ಸೇರಿದಂತೆ ಒಂಭತ್ತು ಅಪರಾಧ ಪ್ರಕರಣಗಳು ಇತ್ತು. ತೂತುಕುಡಿ ಕಾರಾಗೃಹದಲ್ಲಿದ್ದ ಸಿಂಗಾರಂನನ್ನು ಇತ್ತೀಚೆಗಷ್ಟೇ ಪಾಳಯಂಕೊಟ್ಟೈ ಬಂದೀಖಾನೆಗೆ ಸ್ಥಳಾಂತರಿಸಲಾಗಿತ್ತು. ಕಾಲಿನ ಸಮಸ್ಯೆಯಿಂದಾಗಿ ಆತನಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು.

ತೂತುಕುಡಿ ಜಿಲ್ಲೆಯ ಮೊರಪ್ಪನೂರಿನಲ್ಲಿ ಸ್ಫೋಟಕ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನನ್ನು ಸಬ್-ಇನ್ಸ್‍ಪೆಕ್ಟರ್ ವೀರಬಾಹು, ಮೂವರು ಪೇದೆಗಳ ಭದ್ರತೆಯಲ್ಲಿ ಟಾಟಾ ಸುಮೋ ಪೊಲೀಸ್ ವಾಹನದಲ್ಲಿ ಕರೆತರಲಾಗುತ್ತಿತ್ತು.  ಇದೇ ಸಂದರ್ಭದಲ್ಲಿ ಮಾರ್ಗಮಧ್ಯೆ ಕೆಟಿಸಿ ನಗರದ ಚೆಕ್‍ಪೋಸ್ಟ್ ಬಳಿ ಪೊಲೀಸ್ ವಾಹನವನ್ನು ಅಡ್ಡಗಟ್ಟಿದ ದುಷ್ಕಮಿಗಳು ಮೆಣಸಿನ ಪುಡಿ ಮಿಶ್ರಿತ ನೀರನ್ನು ಪೊಲೀಸರ ಮೇಲೆ ಸಿಂಪಡಿಸಿದರು. ನಂತರ ಕಾರಿನಲ್ಲಿ ಸಿಂಗಾರಂನನ್ನು ಅಪಹರಿಸಿ ಕೊಚ್ಚಿ ಕೊಲೆ ಮಾಡಿದ್ದಾರೆ. ಈ ಕೃತ್ಯದ ಹಿಂದೆ ಕುಖ್ಯಾತ ರೌಡಿ ಸುಭಾಷ್ ಪನ್ನಯಾರ್ ಮತ್ತವನ ಗ್ಯಾಂಗ್‍ನ ಕೈವಾಡವಿದೆ ಎಂದು ಶಂಕಿಸಲಾಗಿದೆ.

ಹತನಾದ ದಲಿತ ಮುಖಂಡ ಪಶುಪತಿ ಪಾಂಡ್ಯನ್ ಮತ್ತು ಸುಭಾಷ್ ಪನ್ನಯಾರ್ ನಡುವೆ ಕಳೆದ 25 ವರ್ಷಗಳಿಂದ ದ್ವೇಷದ ಹೊಗೆಯಾಡುತ್ತಿದ್ದು, ಗ್ಯಾಂಗ್‍ವಾರ್‍ಗೆ ಹಲವರು ಬಲಿಯಾಗಿದ್ದಾರೆ. ಹಳೇ ವೈಷಮ್ಯವೇ ಸಿಂಗಾರಂ ಕಗ್ಗೊಲೆಗೆ ಕಾರಣ ಎಂದು ಪೊಲೀಸ್ ಉನ್ನತಾಧಿಕಾರಿಗಳು ಹೇಳಿದ್ದಾರೆ. ಕಾರು ಮತ್ತು ಆಟೋರಿಕ್ಷಾಗಳಲ್ಲಿ ಬಂದಿದ್ದ ದುಷ್ಕಮಿಗಳು ಪರಾರಿಯಾಗಿದ್ದು, ವ್ಯಾಪಕ ಶೋಧ ನಡೆಸಲಾಗುತ್ತಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin